ಕುಂಬಾರ ಸಮುದಾಯಕ್ಕೆ ST ಮೀಸಲು ನೀಡಲು ಸರಕಾರಕ್ಕೆ ಮನವಿ
ಮಂಡ್ಯ(ಡಿ.೧೩): ಕುಂಬಾರ ಸಮುದಾಯವು ಹಳ್ಳಿ ಜನರಿಗೆ ಬೇಕಾದ ಮೂಲ ಸೌಕರ್ಯ ಒದಗಿಸಿತ್ತು. ಸಂತರು ಅವರ ಬಗ್ಗೆ ಒಳ್ಳೆಯ ಸಂದೇಶ ಸಾರಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಕಲಾಮಂದಿರದಲ್ಲಿ ಕುಂಬಾರರ ಜಾಗೃತ ವೇದಿಕೆ ಹಾಗೂ ಕುಂಬಾರರ ಸಂಘದ ವತಿಯಿಂದ ಸೋಮವಾರ ನಡೆದ ರಾಜ್ಯಮಟ್ಟದ ‘ಕುಂಭ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
13 ಹಾಗೂ 14ನೇ ಶತಮಾನ ದಲ್ಲಿಯೇ ಹಳ್ಳಿಗರ ಬದುಕಿಗೆ ಬೇಕಾದ ಮೂಲ ಸವಲತ್ತುಗಳನ್ನು ಕುಂಬಾರ ಸಮುದಾಯದ ಕುಂಬಾರಿಕೆ ಕಸುಬು ಒದಗಿಸಿದೆ. ಕುಂಬಾರಿಕೆಗೆ ತನ್ನದೇ ಆದ ಐತಿಹ್ಯವಿದೆ. ಕುಂಬಾರಿಕೆ ವೃತ್ತಿಯು ಅತ್ಯಂತ ಶ್ರೇಷ್ಠವಾದುದು. ಅದು ಉಳಿಯ ಬೇಕು. ಸಂತರು ಅವರನ್ನು ಹಾಡಿ ಹೊಗಳಿದ್ದಾರೆ ಎಂದು ಸ್ಮರಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲ ವರ್ಗದವರಿಗೂ ಮೀಸಲಾತಿ ನೀಡಿದ್ದರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಹಲವು ರೀತಿಯ ಕಾನೂನು ಜಾರಿ ಮಾಡಿದರು. ದೇಶ ಅಭಿವೃದ್ಧಿ ಹೊಂದಲು ಜಾತಿ ನಿರ್ಮೂಲನೆ ಆಗಬೇಕು ಎಂಬುದು ಸಂವಿಧಾನದ ಮೂಲ ಉದ್ದೇಶವಾಗಿದೆ. ಅದು ಆಗಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರವು ಜಾತಿ ನಿರ್ಮೂಲನೆಗೆ ಅಗತ್ಯ ಕ್ರಮ ತೆಗೆದುಕೊಂಡಿದೆ. ಎಲ್ಲ ವರ್ಗದ ಜನರಿಗೂ ನ್ಯಾಯ ಸಿಗುವಂತೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಮಿಸುತ್ತಿದ್ದಾರೆ. ಜಾತಿ ಗಣತಿಯ ಮೂಲಕ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ ಹಿಂದುಳಿದ ವರ್ಗಗಳು ಸರ್ಕಾರದ ಎಲ್ಲ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಜಾತಿಗಣತಿ ಮಾನದಂಡವಾಗಿದೆ. ಆ ನಿಟ್ಟಿನಲ್ಲಿ ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡುವ ಮೂಲಕ ಅವರನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಮಾಡಲು ಸರ್ಕಾರ ಶೇ.70ರಷ್ಟು ಮೀಸಲಾತಿ ಏರಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ಶೋಷಿತ ಸಮುದಾಯಗಳು ಸಂಘಟನೆಯ ಮೂಲಕ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ಆ ಮೂಲಕ ತಮ್ಮ ಸಮುದಾಯದ ಹಕ್ಕನ್ನು ಪಡೆದುಕೊಳ್ಳಬಹುದು ಎಂಬುದೂ ಅಂಬೇಡ್ಕರ್ ಅವರ ಮಾತಾಗಿದೆ. ಅಸಮಾನತೆ ತೊಡೆದುಹಾಕಿ ಸ್ಥಿರ ಅಭಿವೃದ್ಧಿಯ ಕಡೆಗೆ ಹೋಗುವ ಮನೋ ಭಾವವನ್ನು ಎಲ್ಲರೂ ಬೆಳೆಸಿಕೊಳ್ಳ
ಬೇಕು ಎಂದು ಅವರು ಸಲಹೆ ಮಾಡಿದರು.
ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಬುದ್ಧ, ಗಾಂಧಿ ಹಾಗೂ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದನ್ನು ಪಾಲಿಸಿದ್ದರೆ ಜಾತ್ಯತೀತರಾಗಿ ಬದುಕಬಹುದಿತ್ತು. ಎಲ್ಲ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸ ಬೇಕು ಎಂದು ಅವರು ಸಲಹೆ ಮಾಡಿದರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಕುಂಭ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರಿನ ಕ್ರೆಡೆಟ್ ಐ ಸಂಸ್ಥೆಯ ಸಿಇಓ ಎಂ.ಪಿ.ವರ್ಷ, ಕುಂಬೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಕಲ್ಲಂದೂರು ಶ್ರೀನಿವಾಸಪ್ಪ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ಕೆ.ಎನ್.ಶಿವರಾಜು, ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಣ್ಣ, ಸಮಾಜ ಸೇವಕ ಚಿನ್ನಪ್ಪಣ್ಣ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗರಾಜು, ಕುಂಭೋದಯ ಪತ್ರಿಕೆ ಸಂಪಾದಕ ಸೋಮಸುಂದರ್, ಕುಂಬಾರಿಕೆ ವೃತ್ತಿ ದ್ಯಾವಶೆಟ್ಟಿ, ಪ್ರಕಾಶ್ ಅವರಿಗೆ ಕುಂಭರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.