ಬಂಟ್ವಾಳ: ವಿಧಾನಪರಿಷತ್ ಸದಸ್ಯತ್ವಕ್ಕೆ ಹಿಂದುಳಿದ ವರ್ಗಗಳಲ್ಲೊಂದಾದ ಕುಲಾಲ ಸಮುದಾಯವನ್ನು ಪರಿಗಣಿಸಬೇಕೆಂಬ ಆಗ್ರಹ ಕುಲಾಲ ಸಮುದಾಯಗಳಿಂದ ಕೇಳಿ ಬಂದಿದೆ. ಹಿಂದುಳಿದ ವರ್ಗಗಳಲ್ಲಿ ಶಿಕ್ಷಣ, ಆರೋಗ್ಯ, ಸಾಹಿತ್ಯ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ವಿಧಾನಪರಿಷತ್ ಸದಸ್ಯತ್ವಕ್ಕೆ ಆದ್ಯತೆ ನೀಡಬೇಕು, ಆ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲಾಗದ ಹಾಗೂ ಸಾಮಾಜಿಕವಾಗಿ, ರಾಜಕೀಯವಾಗಿ ದುರ್ಬಲವಾಗಿರುವ ಹಿಂದುಳಿದ ವರ್ಗದಲ್ಲೂ ಸಾಧನೆ ಮಾಡಿದ ಸಾಧಕರಿಗೆ ಎಂಎಲ್ಸಿ ಸ್ಥಾನಗಳನ್ನು ನೀಡಬೇಕು ಎನ್ನುವ ನಿಯಮ ಇದ್ದರೂ ಕಳೆದ ಹಲವು ವರ್ಷಗಳಿಂದ ಕೆಲವೇ ಸಮುದಾಯ, ಜಾತಿಗಳಿಗೆ ಸೀಮಿತವಾಗಿರಿಸಿ ಎಂಎಲ್ಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇದು ನಿಲ್ಲಬೇಕು, ರಾಜಕೀಯ ಅವಕಾಶ ವಂಚಿತವಾಗಿರುವ ಕುಲಾಲ ಸಮುದಾಯಕ್ಕೆ ವಿಧಾನ ಪರಿಷತ್ ಸ್ಥಾನವನ್ನು ನೀಡುವ ಮೂಲಕ ಕುಲಾಲ ಸಮುದಾಯಕ್ಕ ಮಾನ್ಯತೆ ನೀಡಬೇಕು ಎಂದು ಕುಲಾಲ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖಂಡರನ್ನು ಆಗ್ರಹಿಸಿದೆ.
ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರಾವಳಿ ಕುಲಾಲ, ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷರಾಗಿರುವ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಧ್ಯಕ್ಷರಾಗಿರುವ ಕುಲಾಲ ಸಮುದಾಯದ ಮುಖಂಡ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಆದ್ಯತೆಯ ನೆಲೆಯಲ್ಲಿ ಎಂಎಲ್ಸಿ ಸ್ಥಾನವನ್ನು ಒದಗಿಸಿಕೊಡಬೇಕು, ಅವರಿಗೆ ವಿಧಾನಪರಿಷತ್ ಸದಸ್ಯರಾಗುವ ಎಲ್ಲಾ ಅರ್ಹತೆಗಳಿದ್ದರೂ ಈವರೆಗೆ ಯಾವುದೇ ಪಕ್ಷಗಳು ಮನ್ನಣೆ ನೀಡಿಲ್ಲ, ರಾಜೀವಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಲು ಕಳೆದ 5 ವರ್ಷಗಳ ಅವಧಿಯಲ್ಲಿ ಇವರ ಹೆಸರು ಶಿಫಾರಸ್ಸುಗೊಂಡು ರಾಜ್ಯಪಾಲರವರೆಗೆ ಹೋದರೂ ಕೊನೆಗಳಿಗೆಯಲ್ಲಿ ಅವಕಾಶ ಕೈ ತಪ್ಪುತ್ತಿದೆ. ಕುಲಾಲ ಸಮುದಾಯ ಸಾಮಾಜಿಕವಾಗಿ ಬಲಾಢ್ಯವಾಗಿಲ್ಲ ಎನ್ನುವ ಭ್ರಮೆಯಿಂದ ರಾಜಕೀಯ ಪಕ್ಷಗಳು ಈ ನಿರ್ಲಕ್ಷ ಧೋರಣೆಯನ್ನು ತಾಳಿವೆ. ಆದರೆ ಸಮುದಾಯ ಬಲಿಷ್ಟಗೊಳ್ಳುತ್ತಿದ್ದು ನ್ಯಾಯುತವಾಗಿಯೇ ಕುಲಾಲ ಸಮುದಾಯದ ಮುಖಂಡ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ವಿಧಾನಪರಿಷತ್ ಸದಸ್ಯತ್ವ ನೀಡಬೇಕು ಎಂದು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾ ಘಟಕ ಆಗ್ರಹಿಸಿದೆ.
ಡಾ. ಅಣ್ಣಯ್ಯರನ್ನು ಶಾಸಕ ಮಾಡುವಂತೆ ಒತ್ತಾಯ:
ಈ ಬಾರಿ ಕುಲಾಲ, ಕುಂಬಾರ ಸಮುದಾಯಕ್ಕೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸ್ಥಾನ ಸಗಲೇ ಬೇಕು, ಡಾ. ಎಂ.ಅಣ್ಣಯ್ಯ ಕುಲಾಲ್ ಅವರನ್ನು ಸಂಘಟನೆಗಳಿಗಾಗಿ ಮಾತ್ರ ಪಕ್ಷಗಳು ಬಳಸಿಕೊಳ್ಳದೆ ಅವರನ್ನು ಶಾಸಕರನ್ನಾಗಿ ಮಾಡಬೇಕು ಎಂದು ಮಂಗಳೂರು ವಿವಿಯ ಮಾಜಿ ಕುಲಸಚಿವ ಡಾ.ಜನಾರ್ದನ ಕೊಣಾಜೆ ಒತ್ತಾಯಿಸಿದ್ದಾರೆ.
ನೀರುಮಾರ್ಗದ ಕುಲಾಲ ಸಂಘದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಸಾಮಾಜಿಕ, ವೈದ್ಯಕೀಯ ಸೇವೆಯೊಂದಿಗೆ ರಾಜಕೀಯ ನಾಯಕತ್ವ ವಹಿಸಿಕೊಂಡು ಮುನ್ನಡೆಯುತ್ತಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಎಲ್ಲಾ ರೀತಿಯಲ್ಲೂ ವಿಧಾನಸಭೆ ಹಗೂ ಪರಿಷತ್ಗೆ ಪ್ರವೇಶಿಸಬಲ್ಲ ಚಾಕಚಕ್ಯತೆಯೊಂದಿಗೆ ಅರ್ಹತೆಯುಳ್ಳ ವ್ಯಕ್ತಿಯಾಗಿದ್ದಾರೆ. ಡಾ. ಅಣ್ಣಯ್ಯ ಕುಲಾಲ್ ಅವರಿಗೆ ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಟ್ಟು ಕುಲಾಲ ಕುಂಬಾರ ಸಮುದಾಯಕ್ಕೆ ರಾಜಕೀಯ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.
kulalworld.com


