ನೀರುಮಾರ್ಗ ಕುಲಾಲ ಸಂಘದ ವಾರ್ಷಿಕೋತ್ಸವ
ಮಂಗಳೂರು : ಅವಕಾಶವಂಚಿತ ಕುಲಾಲ/ಕುಂಬಾರ ಸಮುದಾಯದ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ವಿಧಾನಸಭೆ ಅಥವಾ ವಿಧಾನ ಪರಿಷತ್ ಸ್ಥಾನಕ್ಕೆ ಸೀಟು ನೀಡುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ಪರಿಗಣಿಸುವ ಮೂಲಕ ರಾಜಕೀಯ ನ್ಯಾಯ ನೀಡಬೇಕು ಎಂದು ಮಂಗಳೂರು ವಿವಿಯ ಮಾಜಿ ಕುಲಸಚಿವ ಡಾ. ಜನಾರ್ಧನ್ ಕೊಣಾಜೆ ಒತ್ತಾಯಿಸಿದರು.
ಡಿ.೧೧ರಂದು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ನಡೆದ ನೀರುಮಾರ್ಗ ಕುಲಾಲರ ಯಾನೆ ಕುಂಬಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಾಮಾಜಿಕ, ಶೈಕ್ಷಣಿಕ ವೈದ್ಯಕೀಯ ಸೇವೆಯ ಜೊತೆಗೆ ರಾಜಕೀಯ ನಾಯಕತ್ವ ವಹಿಸಿಕೊಂಡು ಮುನ್ನೆಡೆಯುತ್ತಿರುವ ಡಾ ಅಣ್ಣಯ್ಯ ಕುಲಾಲ್ ರಂಥವರನ್ನು ಸಂಘಟನೆಗಾಗಿ ಮಾತ್ರ ಪಕ್ಷಗಳು ಬಳಸಿಕೊಳ್ಳದೇ ಅವರನ್ನು ಶಾಸಕರನ್ನಾಗಿ ಮಾಡಬೇಕು. ಇದು ನಮ್ಮ ಸಮುದಾಯದ ಜನರ ಒತ್ತಾಯವಾಗಿದೆ ಎಂದರು.
ಸಂಘದ ಅಧ್ಯಕ್ಷ ಮಹಾಬಲ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದ. ಕ. ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಸುಜೀರ್ ಕುಡುಪು, ಕುಲಾಲ ಸಮಾಜದ ಮುಖಂಡರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ವಿಹಿಂಪ ನಾಗೂರಿ ವಲಯದ ಕಾರ್ಯಾಧ್ಯಕ್ಷ ಭಾಸ್ಕರ ಕುಡುಪು, ರಸಿಕಾ ಸತೀಶ್, ಡಾ. ಶ್ರುತಿ ಜಿ. ಪ್ರಸಾದ್, ಹರೀಶ್ ಮಲ್ಲೂರು, ಸುಂದರ ಮೂಲ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಡಾ. ಅಣ್ಣಯ್ಯ ಕುಲಾಲ್ ಸಹಿತ ಹಲವು ಗಣ್ಯರನ್ನು ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗುರುತಿಸಲಾಯಿತು.