ಕಾಪು(ಡಿ.೦೯): ಕೈ ಕಾಲು ಸೊಟ್ಟಗಾಗಿ ತೆವಳುತ್ತಲೇ ಸಾಗಿ ತಮ್ಮ ಜೀವ ಸವೆಸುತ್ತಿದ್ದರೂ ಬೇರೆಯವರಿಗೆ ಹೊರೆ ಆಗದಿರಲೆಂದು ಬೀಡಿ ಕಟ್ಟಿ ಸಂಸಾರ ನಡೆಸುತ್ತಾ ಸ್ವಾವಲಂಬಿಯಾಗಿ ಜೀವಿಸುತ್ತಿದ್ದ ವಿಶೇಷಚೇತನೆ ಯುವತಿ ಬೇಬಿ (40) ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾಳೆ.
ಕಾಪು ಸಮೀಪದ ಮಜೂರು ಗ್ರಾಮದ ಪಾದೂರು ಕೂರಾಲು ಹರಕು ಮನೆಯಲ್ಲಿ ವಾಸ ಇರುವ ದಿ| ಅಪ್ಪಿ ಹಾಗೂ ಚಂದು ಮೂಲ್ಯ ದಂಪತಿಯ ನಾಲ್ಕು ಮಕ್ಕಳಲ್ಲಿ ಹುಟ್ಟಿನಿಂದಲೇ ಸಂಪೂರ್ಣ ಅಂಗವಿಕಲರಾಗಿದ್ದ ಬೇಬಿ ಮೂಲ್ಯ ಮತ್ತು ಆಕೆಯ ಹಿರಿ ಸಹೋದರ ಹರೀಶ್ ಮೂಲ್ಯ (42) ಇಬ್ಬರೂ ಸ್ವಾವಲಂಬನೆ ಜೀವನ ನಡೆಸಬೇಕೆಂಬ ಉದ್ದೇಶದಿಂದ ಬೀಡಿ ಕಟ್ಟಿ ಕಷ್ಟದಲ್ಲಿಯೇ ಬದುಕು ರೂಪಿಸಿಕೊಂಡಿದ್ದರು. ಆದರೆ ದೇವರು ಇದಕ್ಕೂ ಕರುಣೆ ತೋರಲಿಲ್ಲ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಬೇಬಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿ. ೭ರಂದು ಸಾವನ್ನಪ್ಪಿದ್ದಾರೆ. ತನಗೆ ಬದುಕುವ ಛಲ, ಸ್ಥೈರ್ಯ ತುಂಬಿದ್ದ ತಂಗಿಯ ನಿಧನದಿಂದ ಇದೀಗ ಹರೀಶ್ ಒಬ್ಬಂಟಿಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಹರೀಶ ತನ್ನ ಕಾಲಿನ ಸ್ವಾಧೀನತೆ ಕಳೆದುಕೊಂಡು ಬೆನ್ನು ಹಾಗೂ ಹೊಟ್ಟೆಯನ್ನು ಒಂದಾಗಿಸಿಕೊಂಡಿದ್ದರೆ, ಬೇಬಿಯದ್ದು ಕಾಲಿನ ಸ್ವಾಧೀನ ಕಳೆದುಕೊಂಡು ಎಡ ಕೈ ಮುರುಟಿದ ಸ್ಥಿತಿಯಲ್ಲಿತ್ತು. ಇವರ ಸಹೋದರ ವಿಠಲ ಇವರ ಸಂಸಾರಕ್ಕೆ ಸಹಾಯ ಮಾಡುವ ಮೊದಲೇ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾನೆ. ಇವರ ಸಹೋದರಿ ಪುಷ್ಪ ಮದುವೆಯಾಗಿ ಗಂಡನ ಮನೆಗೆ ತೆರಳಿದ್ದಾಳೆ. ಇವರನ್ನು ಮಗುವಿನಂತೆ ಸಲಹುತ್ತಿದ್ದ ತಾಯಿಯೂ ವರ್ಷಗಳ ಹಿಂದೆಯೇ ಇವರನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ತೆರಳಿದಾಗ ಇವರ ಜೀವನದಲ್ಲಿ ಸಂಪೂರ್ಣ ಕತ್ತಲು ಕವಿದಿತ್ತು. ಅಣ್ಣ ಹಾಗೂ ಅಕ್ಕನ ಸೇವೆಗಾಗಿ ಕಿರಿಯ ಸಹೋದರಿ ಟೊಂಕ ಕಟ್ಟಿದ್ದಳು . ಮುಂಬೈಯಲ್ಲಿ ಕೆಲಸ ಮಾಡುತ್ತಿರುವ ತನ್ನ ಗಂಡನ ಮನವೊಲಿಸಿ ತನ್ನ ತಾಯಿಯ ಮನೆಗೆ ತನ್ನಿಬ್ಬರು ಮಕ್ಕಳ ಜೊತೆ ಬಂದು ಆಕೆ ಸೇರಿಕೊಂಡು ಆರೈಕೆ ಮಾಡುತ್ತಿದ್ದಳು.
ಬೀಡಿಯೇ ಇವರಿಗೆ ಮೂಲಾಧಾರವಾಗಿತ್ತು :
ತಮ್ಮ ಅಕ್ಕಳಿಗೆ ನಮ್ಮಿಂದ ತೊಂದರೆ ಆಗದಿರಲೆಂದು ಅಣ್ಣ-ತಂಗಿಯರಿಬ್ಬರೂ ಬೀಡಿ ಕಟ್ಟುವಿಕೆಯತ್ತ ತಮ್ಮ ಮುಖ ಮಾಡಿದ್ದರು. ಹರೀಶ ಬೀಡಿ ಎಲೆ ಕತ್ತರಿಸಿ ತಂಗಿಗೆ ಬೀಡಿ ಕಟ್ಟಲು ಸಹಾಯ ಮಾಡಿಕೊಡುತ್ತಿದ್ದರೆ, ತಂಗಿ ತನ್ನ ಮುರುಟಿದ ಕೈಯಲ್ಲಿಯೇ ಬೀಡಿಯನ್ನು ಸುರುಳಿ ಮಾಡಿ ನೂಲು ಸುತ್ತಿ ಬೀಡಿಯನ್ನು ಕಟ್ಟುತ್ತಿದ್ದಳು. ಅಣ್ಣ ತಂಗಿ ಸೇರಿ ದಿನವೊಂದಕ್ಕೆ 500 ಬೀಡಿ ಕಟ್ಟುತ್ತಿದ್ದು, ಕಟ್ಟಿದ ಬೀಡಿಯನ್ನು ಕಿರಿಯ ಸಹೋದರಿ ಪುಷ್ಪ ಬೀಡಿ ಬ್ರಾಂಚಿಗೆ ಕೊಂಡೊಯ್ಯಲು, ಊಟ, ತಿಂಡಿ ಮತ್ತಿತರ ಅತ್ಯಾವಶ್ಯಕತೆಯನ್ನು ಪೂರೈಸಲು ಸಹಕಾರ ಮಾಡುತ್ತಿದ್ದಳು.
ನೆರವಾದ ರೋಟರಾಕ್ಟ್ ಸದಸ್ಯರು :
ಬೇಬಿ ಮೂಲ್ಯ ಅವರ ಅನಾರೋಗ್ಯದ ಕುರಿತು ತಿಳಿದ ಸಾಮಾಜಿಕ ಕಾರ್ಯಕರ್ತ ವಿಷು ಶೆಟ್ಟಿ ಅವರು ಸುಭಾಸ್ ನಗರದ ರೋಟರಾಕ್ಟ್ ಕ್ಲಬ್ ಸದಸ್ಯರೊಂದಿಗೆ ಸೇರಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದರು. ಅಲ್ಲದೇ ಅಂತಿಮ ಸಂಸ್ಕಾರಕ್ಕೂ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಇದೀಗ ಸಹೋದರಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿರುವ ಹರೀಶ್ ಅವರಿಗೆ ನೆರವಾಗಬಯಸುವ ದಾನಿಗಳು ಕಾಪುವಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಬ್ಯಾಂಕ್ ಖಾತೆ ಸಂಖ್ಯೆ : 01252210021722 (Harish) IFSC code : SYNBO 000125ಗೆ ಹಣ ಸಂದಾಯ ಮಾಡಬಹುದು.
* ದಿನೇಶ್ ಇರ್ವತ್ತೂರು (kulalworld.com)