ಖಂಡಿತಾ ಇವತ್ತು ಅಲ್ಯೂಮಿನಿಯಂ-ಸ್ಟೀಲ್ ಪಾತ್ರೆಗಳ ಸೀಸನ್ ಇದ್ದಿರಬಹುದು. ಕುಂಬಾರರ ಮಡಿಕೆಗಳು ಮೌಲ್ಯ ಕಳೆದುಕೊಂಡಿರಬಹುದು. ಕುಂಬಾರಿಕೆ ಲಾಭತರದ ಉದ್ಯೋಗವಾಗಿರಬಹುದು. ಮಡಿಕೆ ಕುಡಿಕೆಗಳೆಂದರೆ ಜನ ಮೂಗು ಮುರಿಯುತ್ತಿರಬಹುದು.ಆದರೆ…?
1. ಈ ನಾಗರಿಕತೆಯ ಹುಟ್ಟಿನೊಂದಿಗೆ ತಾನು ಹುಟ್ಟಿ ಮಣ್ಣು, ನೀರು, ಬೆಂಕಿಗಳಂತಹ ಪಂಚಭೂತಾತ್ಮಗಳನ್ನೆ ಮೂಲ ಬಂಡವಾಳವನ್ನಾಗಿಸಿಕೊಂಡು ಜನ್ಮ ಪಡೆದ ಈ ಜಗದ ಏಕಮೇವ ವೃತ್ತಿ ಅದು ಕುಂಬಾರಿಕೆ ಮಾತ್ರ!!
2. ಇತಿಹಾಸದ ಪುಟ ಸೇರಿದ ಹರಪ್ಪ, ಮೆಹಂಜೋದಾರೋ ಸೇರಿದಂತೆ ಮಣ್ಣಿನಡಿ ಹೂತು ಹೋಗಿರುವ ಈ ಜಗದ ನಾನಾ ವೈಭವಪೂರ್ಣ ನಾಗರಿಕತೆಗಳ ಕುರುಹುಗಳಾಗಿ ಇತಿಹಾಸಜ್ಞರು ನೆಲವನ್ನು ಬಗೆದಾಗ ಅವರಿಗೆ ಸಿಗುವ ಅತ್ಯಮೂಲ್ಯ ವಸ್ತುಗಳಲ್ಲಿ ಕುಂಬಾರಿಕೆಯ ಮಡಿಕೆ-ಕುಡಿಕೆಗಳೇ ಅತ್ಯಂತ ಪ್ರಧಾನವಾದ್ದದ್ದು. ಇವೇ ಇತಿಹಾಸದ ಪ್ರಮುಖ ಕೊಂಡಿಗಳು. ಶತ ಶತಮಾನಗಳಿಂದಲೂ ಮಣ್ಣಿನಡಿ ಇದ್ದರೂ ಹಾಳಾಗದೆ ಇತಿಹಾಸ ಅಧ್ಯಯನಕಾರರಿಗೆ ಸಿಗುವ ಅನಘ್ಯ ರತ್ನಗಳು!!
3. ಬಹಳ ಮುಖ್ಯವಾಗಿ ಇವತ್ತಿನ ಎಲ್ಲ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲ ಇರುವುದು ಕುಂಬಾರಿಕೆಯಲ್ಲೇ. ಚಕ್ರವೊಂದು ಗರಗರನೇ ತಿರುಗಿದರೆ ಅಲ್ಲೊಂದು ಅದ್ಭುತ ತಂತ್ರಜ್ಞಾನ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಡಿಕೆ ಮಾಡುವ ಮೂಲಕ ತೋರಿಸಿಕೊಟ್ಟ ಮೊದಲ ತಂತ್ರಜ್ಞನವೂ ಕುಂಬಾರಿಕೆಯೇ ಆಗಿತ್ತಲ್ಲವೇ? ಯೋಚಿಸಿ!!
5. ಪಳ ಪಳನೇ ಹೊಳೆವ ನೂರಾರು ಬಗೆಯ ಪಾತ್ರೆ ಪಗಡೆಗಳು ಇವತ್ತು ಮಾರುಕಟ್ಟೆಗೆ ಲಗ್ಗೆ ಇಟ್ಟಿರಬಹುದು. ಆದರೆ ಎಲ್ಲ ವರ್ತಮಾನ ಕಾಲಗಳಿಗೂ ಹೊಂದಿಕೊಳ್ಳುವ ಅತ್ಯಂತ ಆರೋಗ್ಯವರ್ಧಕ ಪಾತ್ರೆಗಳು ಇವತ್ತಿಗೂ ಅದು ಮಡಿಕೆ ಮತ್ತು ಪರಿಶುದ್ಧ ಮಣ್ಣಿನಿಂದ ತಯಾರಾದ ಕುಂಬಾರಿಕೆಯ ವಿವಿಧ ಪರಿಕರಗಳು ಮಾತ್ರ. ಮಡಿಕೆ ಎಂದರೆ ಅದು ನ್ಯಾಚುರಲ್ ಎಸಿ- ಪ್ರಾಕೃತಿಕ ತಂಪು ಸಾಧನ!!
6. ಇವತ್ತಿಗೂ ಭಾಗಶಃ 90 ಶೇಖಡ ಮನೆಗಳಲ್ಲಿ ಹುಟ್ಟಿನ ಸಂಭ್ರಮಕ್ಕೆ ಕುಂಬಾರಿಕೆಯ ಮಡಿಕೆಗಳು ಬೇಕು. ಸಾವಿನ ಸೂತಕಕ್ಕೂ ಮಣ್ಣಿನ ಕುಡಿಕೆಗಳೇ ಬೇಕು.!!
7. ಕಾಯಕವೇ ಕೈಲಾಸ ಎಂದು ನಾವಿವತ್ತು ಎಲ್ಲೆಡೆಯೂ ಹೇಳುತ್ತೇವಲ್ಲ ? ಆದರೆ ಮುಂಜಾನೆದ್ದು ಕುಂಬಾರಣ್ಣ ಎಂಬ ಪ್ರಸಿದ್ಧ ಜನಪದೀಯ ಸೊಲ್ಲನ್ನು ಗಮನಿಸಿದ್ದೀರಾ?? ಅದರ ಕೊನೆಯ ಚರಣ ಹೀಗಿದೆ.. “”ಕುಂಬಾರಣ್ಣನ ಮಡದಿ ಕಡುಗದ ಕೈಯಿಕ್ಕಿ ಕೊಡದ ಮ್ಯಾಲೇನೋ ಬರೆದಾಳ! ಕೊಡದ ಮ್ಯಾಲೇನೋ ಬರೆದಾಳ! ಕಲ್ಯಾಣದ ಶರಣ ಬಸವನ ನಿಲಿಸ್ಯಾಳ!! ಮಾಡುವ ಕಾಯಕದಲಿ ದೇವತ್ವವನ್ನು ಕಂಡ ಅಪರೂಪದ ಕಾಯಕ ಅದು ಕುಂಬಾರಿಕೆ ಅನ್ನುವುದನ್ನು ನಮ್ಮ ಜನಪದರು ಸಾರಿದ ಆ ಸೊಲ್ಲನ್ನು ಇನ್ನೊಮ್ಮೆ ಓದಿಕೊಳ್ಳಿ. ಅರ್ಥಮಾಡಿಕೊಳ್ಳಿ!!
8.ಇವತ್ತಿಗೂ ಕರಾವಳಿಯ ಕರ್ನಾಟಕದ ರುಚಿ ರುಚಿ ಮೀನುಗಸಿಗಳಿಗೆ ಕುಂಬಾರಿಕೆಯ ‘ಅಳಿಗೆ'(ಮಣ್ಣಿನ ಪಾತ್ರೆ)ಯೇ ಉಪಯೋಗವಾಗುತ್ತವೆ. ಮಣ್ಣಿನ ಪಾತ್ರೆಗಳಲ್ಲಿ ತಯಾರಾದ ಪದಾರ್ಥಗಳಿಗೆ ಇರುವಷ್ಟು ಸ್ವಾದ ಇನ್ಯಾವುದೇ ಮಾಡರ್ನ್ ಪಾತ್ರೆಗಳಲ್ಲಿ ತಯಾರಾದ ವಸ್ತುಗಳಿಗಿಲ್ಲ ಎಂಬುದು ಎಲ್ಲರ ಮನೆಯ ಗೃಹಿಣಿಯರ ಅಭಿಮತ..ವಿಚಾರಿಸಿ ನೋಡಿ!!
ಆದ್ದರಿಂದ ನಾವು ಅರ್ಥಮಾಡಿಕೊಳ್ಳಬೇಕಾದಿಷ್ಟೆ. ಕಾಲ ಬದಲಾಗಿದೆ ಮಡಿಕೆ ಕುಡಿಕೆಗಳು ಬೆಲೆ ಕಳೆದುಕೊಂಡಿದೆ ಎಂದು ನಾವು ಕುಂಬಾರಿಕೆಯನ್ನು ಕೇವಲ ಮಾಡುವ ಮೊದಲು ಅದರ ಹಿಂದಿರುವ ಮಹತ್ವಿಕೆಯ ಅಂಶಗಳನ್ನು ಅರಿತು ಗೌರವಿಸೋಣ. ಈ ನೆಲದ ಮೂಲ ಬದುಕಿಗೆ ಇಂಬು ಇದೇ ಎಂಬ ಹೆಮ್ಮೆಯಲಿ ತಲೆಬಾಗೋಣ!!
ಕೇವಲ ಜಾತಿ, ಪಂಗಡ, ಮತಗಳೆಂಬ ದೃಷ್ಟಿಕೋನದ ನಡುವೆ ಕುಂಬಾರಿಕೆಯನ್ನು ಅಳೆಯುದು ಬೇಡ..ಅನಾಗರಿಕತೆಯಿಂದ ನಾಗರಿಕ ಸಮಾಜದತ್ತ ಸಮಸ್ತ ಮಾನವ ಜನಾಂಗವನ್ನು ಕರೆತಂದ ಕುಂಬಾರಿಕೆ ಸಂಸ್ಕೃತಿಗೆ ಗೌರವದಿಂದ ತಲೆಬಾಗೋಣ.
ಬರಹ : ಮಂಜುನಾಥ್ ಹಿಲಿಯಾಣ



