ಮಂಗಳೂರು(ನ.೦೩) : ಕನ್ನಡ ಸಾಹಿತ್ಯ ಪರಿಷತ್ ಸಾರಥ್ಯದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿದ್ದು ಸಾಹಿತ್ಯ ಸಮ್ಮೇಳನ ಕನ್ನಡಿಗರೆಲ್ಲರೂ ಅಭಿಮಾನ ಮತ್ತು ಹೆಮ್ಮೆ ಪಡುವ ಸಂಗತಿ. ಆದರೆ ಪ್ರಾಜ್ಞರೇ ಸೇರಿ ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ದಾರ್ಶನಿಕ ಕವಿ ಸರ್ವಜ್ಞನ ತ್ರಿಪದಿಯನ್ನು ತಿರುಚಿ ಸರಕಾರದ ಸಾಧನೆಗೆ ಬಳಸಿ ಅಪಹಾಸ್ಯ ಮಾಡಲಾಗಿದೆ. ಈ ಹೀನ ಕೃತ್ಯವನ್ನು ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಖಂಡಿಸಿದೆ.
ವಾಸಕ್ಕೆ ಅಶ್ರಯ ಮನೆ ಇರಲು
ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತಿರಲು
ರಾತ್ರಿ ನಶೆಗೆ ಅಗ್ಗದ ಮದ್ಯವಿರಲು
ಕೂಲಿ ಕೆಲಸಕ್ಕೆ ಬೆಂಕಿ ಹಂಚ್ಚೆಂದ ಸರ್ವಜ್ಞ…
ಹೀಗೆಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಕಲಾದ ಬ್ಯಾನರಿನಲ್ಲಿ ಬರೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಾರ್ಥಕ್ಕಾಗಿ ಕೆಲವರು ಸರ್ವಜ್ಞನ ತ್ರಿಪದಿಗಳನ್ನು ತಿರುಚುವ ಕೆಲಸವನ್ನು ನಿರತಂರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ಕೇವಲ ಪಡ್ಡೆ ಹುಡುಗರು ಮತ್ತು ಅವಕಾಶವಾದಿ ಸಂಶೋಧಕರು ಮಾಡುತ್ತಾರೆ ಎಂದು ನಂಬಿಕೊಂಡಿದ್ದೆವು. ಆದರೆ ಸರ್ವಜ್ಞನ ತ್ರಿಪದಿಗಳನ್ನು ತಿರುಚಿ ಈ ತರಹದ ಒಂದು ತ್ರಿಪದಿಯನ್ನು ಬರೆದು ಪೋಸ್ಟರ್ ಮಾಡಿಸಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಕಿರುವುದು ದೊಡ್ಡ ದುರಂತ. ಇದರ ಹೊಣೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಥವಾ ಸಾಹಿತ್ಯ ಸಮ್ಮೇಳನದ ಆಯೋಜಕರು ಹೊತ್ತುಕೊಂಡು ಜನಗಳಿಗೆ ಮತ್ತು ಸರ್ವಜ್ಞನನ ಅನುಯಾಯಿಗಳಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿರುವ ಸಂಘದ ಮುಖಂಡರು ಬಡ ಲಿಂಗಾಯತ ಕುಂಬಾರ ಸಮುದಾಯದಲ್ಲಿ ಹುಟ್ಟಿದ, ತನ್ನ ವಚನಗಳ ಮೂಲಕ ಸಮಾಜದ ಡೊಂಕನ್ನ ತಿದ್ದಲು ಪ್ರಯತ್ನಿಸಿ ಸಫಲರಾದ ಸರ್ವಜ್ಞರನ್ನು ಅಪಹಾಸ್ಯ ಮಾಡುವ ಹಾಗು ಅವರ ಹೆಸರನ್ನ ದುರ್ಬಳಕೆ ಮಾಡಿಕೊಂಡದ್ದನ್ನು ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಸೇರಿ ಎಲ್ಲರೂ ಖಂಡಿಸಬೇಕು. ಇನ್ನೊಮ್ಮೆ ಇಂತಹ ಅಚಾತುರ್ಯ ನಡೆಯಬಾರದು. ಶ್ರೇಷ್ಠ ವಚನಕಾರರನ್ನು ಅಪಹಾಸ್ಯ ಮಾಡುವ ಪ್ರವೃತ್ತಿಯನ್ನು ಕರ್ನಾಟಕದ 20 ಲಕ್ಷ ಕುಂಬಾರ ಸಮುದಾಯ ಖಂಡಿಸುತ್ತದೆ ಎಂದು ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಮುಖಂಡ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫ್ಲೆಕ್ಸ್ ತೆರವು
ಸಮ್ಮೇಳನದ ಪ್ರಧಾನ ವೇದಿಕೆಯ ಹಿಂಭಾಗದಲ್ಲಿ ಸಮಾನಾಂತರ ವೇದಿಕೆಗೆ ಹೋಗುವ ರಸ್ತೆಯಲ್ಲಿ ಬರುವ ವೃತ್ತದ ಎಡಭಾಗದ ತಿರುವಿನಲ್ಲಿರುವ ಬೇಲಿಯ ಬಳಿ ಈ ಫ್ಲೆಕ್ಸ್ ಕಂಡು ಬಂದಿತ್ತು. ಶನಿವಾರ ಬೆಳಗ್ಗೆ 8.30ರ ವರೆಗೆ ಆ ಫ್ಲೆಕ್ಸ್ ಅಲ್ಲಿಯೇ ಇತ್ತು. ಫ್ಲೆಕ್ಸ್ ಬರಹದ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಅದನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.
ಕಿಡಿಗೇಡಿಗಳ ಕೃತ್ಯ
‘ವಿವಾದಕ್ಕೆ ಕಾರಣವಾದ ಫ್ಲೆಕ್ಸ್ ಅನ್ನು ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಜತೆಗೆ ಮಾತನಾಡಿದ್ದೇನೆ. ಫ್ಲೆಕ್ಸ್ ಹಾಕಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಮನವಿ ಮಾಡಿದ್ದೇನೆ’
–ಮನು ಬಳಿಗಾರ್,
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ