ಜಾತಿ-ಮತ-ಪಂಥವೆಂಬ ದ್ವೇಷ ಬಿಟ್ಟು ಸರ್ವರನ್ನೂ ಪ್ರೀತಿಸಿ ವಿಶ್ವಶಾಂತಿಗಾಗಿ ಪ್ರಾರ್ಥಿಸಿ : ಮಾಣಿಲ ಸ್ವಾಮೀಜಿ
ಉಡುಪಿ(ನ.೨೮): ಸಮಾಜವನ್ನು ಪ್ರೀತಿಸಿದಾಗ ಸಮುದಾಯ ಸದೃಢವಾಗುತ್ತದೆ. ಮಾನವೀಯ ಮೌಲ್ಯಗಳನ್ನು ಪ್ರೀತಿಸುವುದು, ಅದರ ನೆಲೆಯಲ್ಲಿ ಸಹಾಯ ಮಾಡುವಂತಹ ಒಳ್ಳೆಯ ಕೆಲಸಗಳು ನಮ್ಮ ಕಷ್ಟ ಕಾಲದಲ್ಲಿ ರಕ್ಷಣೆಗೆ ನಿಲ್ಲುತ್ತದೆ. ಅಂತಹ ಸಂಸ್ಕಾರಯುತ ಕೆಲಸಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ನ. ೨೭ರಂದು ಕುಲಾಲ ಸಂಘ ನಾನಿಲ್ತಾರ್ (ರಿ.) ಮುಲ್ಲಡ್ಕ ಮುಂಡ್ಕೂರು ಇದರ ವತಿಯಿಂದ ನಿರ್ಮಾಣವಾದ ನೂತನ ಸಮುದಾಯ ಭವನದ ಉದ್ಘಾಟನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಾವು ಬದುಕಿದರೆ ಸಾಲದು, ಬದುಕಿದ ಸಮಯದಲ್ಲಿ ಸಮಾಜಕ್ಕೆ ಕೊಡುಗೆ ಏನು ಎಂಬುದನ್ನು ನಾವು ಅರಿತಾಗ ಮಾತ್ರ ಸಮಾಜ ಅಭಿವದ್ಧಿ ಹೊಂದಲು ಸಾಧ್ಯವಾಗುತ್ತದೆ. ಜಗತ್ತೇ ಒಂದು ದೇವರ ಕೋಣೆಯಿದ್ದಂತೆ. ನಾವು, ಜಾತಿ-ಮತ-ಪಂಥವೆಂಬ ದ್ವೇಷವನ್ನು ಬಿಟ್ಟು ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಅಗತ್ಯವಿದೆ. ಸುಖ, ಸಂಪತ್ತಿನ ಬೆನ್ನುಹತ್ತುವ ಬದಲು ನಮ್ಮಲ್ಲಿ ಉತ್ತಮ ಸಂಸ್ಕಾರ ನೆಲೆಯೂರಬೇಕಾಗಿದೆ. ಸಮಾಜದಲ್ಲಿ ನಮ್ಮದು ಎನ್ನುವ ಭಾವನೆ ಮೂಡಿದಾಗ ದೇಶ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಶಾಸಕ ವಿನಯ ಕುಮಾರ್ ಸೊರಕೆ ಕುಲಾಲ ಸಮಾಜ ಸಾತ್ವಿಕ ಸಮಾಜವಾಗಿದೆ. ಧಾರ್ಮಿಕ ಹಾಗೂ ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡುತ್ತಿರುವ ಸಮುದಾಯ ಎಲ್ಲರ ಸಹಕಾರದೊಂದಿಗೆ ಮುಂದುವರಿದರೆ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಈ ಸಂದರ್ಭ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಂಗೀತಾ ಕುಲಾಲ್ ಬೋಳ, ತಾಪಂ ಉಪಾಧ್ಯಕ್ಷ ಗೋಪಾಲ ಮೂಲ್ಯ, ರಂಗನಟ ಸುಧಾಕರ ಸಾಲ್ಯಾನ್, ಯಕ್ಷಗಾನ ಪಟು ಸುಧಾಕರ ಕುಲಾಲ್, ಕರಾಟೆ ಪಟುಗಳಾದ ತೃಪ್ತಿ, ದೀಪ್ತಿ, ಜಿಪಂ ಸದಸ್ಯೆ ಪ್ರಮೀಳಾ ಮೂಲ್ಯ ಹಾಗೂ ಸಂಘದ ಏಳಿಗೆಗಾಗಿ ದುಡಿದವರು ಮತ್ತು ದಾನಿಗಳನ್ನು ಗೌರವಿಸಲಾಯಿತು.
ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಮಂಜಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಬೆಳ್ಮ ಣ್ ಚರ್ಚ್ ನ ಧರ್ಮಗುರು ಸುನಿಲ್ ವೇಗಸ್, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಳದ ಅರ್ಚಕ ರಾಮ್ ದಾಸ್ ಆಚಾರ್, ಮುಂಬಯಿಯ ಎಂ.ಜಿ ಕರ್ಕೇರ, ಹರ್ಷ ಮೊಯಿಲಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಶುಭಾ ಶೆಟ್ಟಿ, ಸುಪ್ರೀತ್ ಶೆಟ್ಟಿ, ಸುಜೀರ್ ಕುಡುಪು, ಗಿರೀಶ್ ಸಾಲ್ಯಾನ್ ಮುಂಬಯಿ, ಭೋಜ ಕುಲಾಲ್, ರಾಜೇಶ್ ಕುಲಾಲ್, ಗೋಪಾಲ ಬಂಗೇರ, ಪ್ರಭಾಕರ ಮೂಲ್ಯ, ರಾಮ ಕುಲಾಲ್ ಪಕ್ಕಾಲು, ಮೋಹನ್ ದಾಸ್ ಶೆಟ್ಟಿ, ರವೀಂದ್ರ ಶೆಟ್ಟಿ, ದೇವದಾಸ್ ಕುಲಾಲ್ ಮುಂಬಯಿ, ಐತು ಮೂಲ್ಯ, ವಸಂತ ಬಂಗೇರ, ಸುಂದರ ಮೂಲ್ಯ, ಜಯರಾಮ ಮೂಲ್ಯ, ಸುಜಾತ ಮೂಲ್ಯ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಕುಶಾ ಆರ್ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೀಪ್ ಸಾಲ್ಯಾನ್ ಹಾಗು ಅರುಣಾ ಕುಲಾಲ್ ಉಳೆಪಾಡಿ ಕಾರ್ಯಕ್ರಮ ನಿರ್ವಹಿಸಿದರು.