ಶಾರದಾ ಕುಲಾಲ್
ಮೂಡಬಿದ್ರೆ(ನ.೨೮): ಕಿತ್ತು ತಿನ್ನುವ ಬಡತನ, ವಾಸಕ್ಕೆ ಸೂರು ಬಿಟ್ಟರೆ ಆಸರೆಗಾಗಿ ಪತಿ, ಮಕ್ಕಳು ಯಾರು ಇಲ್ಲ. ಕೂಲಿ ಮಾಡದ ಹೊರತು ಹೊಟ್ಟೆ ತುಂಬುವುದಿಲ್ಲ. ಇನ್ನೊಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಆಕಸ್ಮಾತ್ ಬಿದ್ದು ಸೊಂಟ ಮುರಿದುಕೊಂಡು ಒಪ್ಪೊತ್ತಿನ ಊಟಕ್ಕೂ ಪರದಾಡ ಬೇಕಾದ ದಯನೀಯ ಸ್ಥಿತಿಯಲ್ಲಿರುವ ಮಹಿಳೆಯೊಬ್ಬರ ಕರುಣಾಜನಕ ಕಥೆ ಇದು.
ಮೂಡಬಿದ್ರಿ ಸಮೀಪದ ತೋಡಾರು ಗ್ರಾಮದ ಸುಮಾರು ನಲವತ್ತೈದು ವರ್ಷ ವಯಸ್ಸಿನ ಶಾರದಾ ಕುಲಾಲ್ ತಮ್ಮ ವಯೋವೃದ್ಧ ತಾಯಿ ಸುಂದರಿ ಅವರ ಜೊತೆ ವಿದೇತ ನಗರ ಎಂಬಲ್ಲಿ ವಾಸಿಸುತ್ತಿದ್ದು, ಅನಾರೋಗ್ಯ ಮತ್ತು ತೀರಾ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿದ್ದಾರೆ. ಮದುವೆಯಾಗಿ ಕೆಲ ವರ್ಷವಾದರೂ ಮಕ್ಕಳಾಗಿಲ್ಲ ಎನ್ನುವ ಚಿಂತೆ ಬಿಟ್ಟರೆ ಶಾರದಾ ಅವರ ಸಂಸಾರ ಚೆನ್ನಾಗಿಯೇ ಇತ್ತು. ಟ್ಯಾಕ್ಸಿ ಚಾಲಕರಾಗಿ ಬದುಕಿಗೆ ಊರುಗೋಲಾಗಿದ್ದ ಪತಿ ಅಶೋಕ್ ಕುಲಾಲ್ ಯಾವಾಗ ತೀರಿ ಹೋದರೋ ಅಂದಿನಿಂದ ಸಂಕಷ್ಟ ಬೆನ್ನುಹತ್ತತೊಡಗಿತು.
ಶಾರದಾ ಅವರು ತಾಯಿ ಸುಂದರಿ ಜೊತೆ..
ಮೊದಲೇ ಬಡತನದ ಬೇಗೆಯಲ್ಲಿ ಬೆಂದುಂಡ ಕುಟುಂಬ. ಗೃಹಿಣಿಯಾಗಿದ್ದ ಶಾರದಾ ತನ್ನ ತಾಯಿಯನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡರು. ಹೆಚ್ಚೇನೂ ಓದದ ಅವರು ತೋಡಾರಿನ ಎಂಐಟಿಇ(ಮೈಟ್) ಕಾಲೇಜು ಬಳಿಯ ಕ್ಯಾಂಟೀನ್ ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ಬರುತ್ತಿದ್ದ ಅಲ್ಪ ಆದಾಯದಿಂದ ಇನ್ನೇನು ಹೊಟ್ಟೆ-ಬಟ್ಟೆಗೆ ದಾರಿಯಾಯಿತು ಎನ್ನುವಷ್ಟರಲ್ಲೇ ಮತ್ತೊಂದು ಆಘಾತ ಸಿಡಿಲಿನಂತೆ ಬಂದೆರಗಿತು. ಇತ್ತೀಚೆಗಷ್ಟೇ ತಮ್ಮ ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು ಶಾರದಾ ಅವರು ಸೊಂಟದ ಭಾಗಕ್ಕೆ ಬಲವಾದ ಏಟು ಮಾಡಿಕೊಂಡರು. ಎದ್ದೇಳಲಾಗದ ಸ್ಥಿತಿಯಲ್ಲಿದ್ದ ಇವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಸೊಂಟದ ಭಾಗದಲ್ಲಿ ಸರ್ಜರಿ ನಡೆಸಿದ್ದು, ದುಡಿದ ಅಷ್ಟಿಷ್ಟು ಹಣ ಚಿಕಿತ್ಸೆಗೆ ಸಾಕಾಗಲಿಲ್ಲ. ಅವರಿವರು ನೆರವು ನೀಡಿದ ಫಲವಾಗಿ ಆಸ್ಪತ್ರೆಯಿಂದ ಬಿಡುಗಡೆ ಸಿಕ್ಕಿತು. ಚಿಕಿತ್ಸೆಯಿಂದ ಮತ್ತೆ ಮೊದಲಿನಂತೆ ಚೈತನ್ಯ ಪಡೆಯುವ ಕನಸು ಕಾಣುತ್ತಿದ್ದಾರೆ. ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ದುಡಿಯದಿದ್ದರೆ ತನಗೆ ಮತ್ತು ತನ್ನನ್ನೇ ನಂಬಿಕೊಂಡಿರುವ ತಾಯಿ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಎಂಬಂತಾಗಿದೆ.
ಶಾರದಾ ಪತಿ ದಿ. ಅಶೋಕ್ ಕುಲಾಲ್
ಬದುಕು ಸಾಗಿಸುದೇ ಕಷ್ಟದಾಯಕವಾದ ಪರಿಸ್ಥಿತಿಯಲ್ಲಿರುವ ಈ ಕುಟುಂಬ ಆರ್ಥಿಕ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲಿ ಬೆಂಡಾಗಿದೆ. ಮುಂದಿನ ದಾರಿ ಏನೆಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ಸಹೃದಯಿಗಳ ಸಹಾಯದ ಆವಶ್ಯಕತೆ ಇದ್ದು, ಉದಾರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಛಿಸುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.
Sharada
A/c no: 1015 0105 1000 182
Ifsc code: VIJB0001015
Vijaya bank, Badaga Mijar Branch, Dakshina Kannada,
ಸಂಪರ್ಕ ಸಂಖ್ಯೆ : 8152069408
(ಚಿತ್ರ-ಮಾಹಿತಿ : ಹೇಮಂತ್ ಕುಮಾರ್, ರಂಜಿತ್ ಕುಮಾರ್)