ಕುಂಬಾರ ಜನಾಂಗ ರಾಜಕೀಯ, ರಾಜಕಾರಣಿಗಳನ್ನು ತುಂಬಾ ವಿಶ್ವಾಸಕ್ಕಿಟ್ಟುಕೊಂಡಿದ್ದಾರೆ. ಈ ವಿಶ್ವಾಸ ತಪ್ಪಲ್ಲ, ಇರಲೇಕು. ಆದರೆ ಯಾರೊಂದಿಗೆ ಅತಿಯಾದ ವಿಶ್ವಾಸವಿಟ್ಟುಕೊಳ್ಳಬೇಕು ಎನ್ನುವುದನ್ನು ಅರ್ಥಮಾಡಿಕೊಂಡಿಲ್ಲ ಎನ್ನುವುದೇ ಬೇಸರ.
ನಮಗೆ 10 ಕೋಟಿ, 20 ಕೋಟಿ ರೂಪಾಯಿ ಅನುದಾನ ಸಿಕ್ಕಿದರೂ ಸಾಕು ಹೆಮ್ಮೆಪಡುತ್ತೇವೆ. ಆದರೆ ಉಳಿದ ಸಮೂಹಗಳಿಗೆ ಹೋಲಿಕೆ ಮಾಡಿದರೆ ಇದು ನಗಣ್ಯವೆನ್ನದೆ ಅರಿವೂ ನಮಗಿಲ್ಲ. ಇಷ್ಟಕ್ಕೂ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ ಎನ್ನುವುದು ರಾಜಕೀಯದವರಿಗೆ ಚೆನ್ನಾಗಿ ಗೊತ್ತು.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಇಂಥ ಅತಿಯಾದ ವ್ಯಾಮೋಹ ನಮ್ಮಲ್ಲೂ ಬಂತು. ಕಾರಣ ಅವರು ಅಹಿಂದ ನಾಯಕ ಎನ್ನುವ ಕಾರಣಕ್ಕೆ. ಇದು ಸುಳ್ಳು ಎನ್ನುವುದು ಕೂಡಾ ನಮಗೆ ಈಗ ಅರಿವಾಗುತ್ತಿದೆ. ಆದರೆ ನಾವು ಏನೂ ಮಾಡಲಾಗದಂಥ ಸ್ಥಿತಿಯಲ್ಲಿದ್ದೇವೆ. ಪಕ್ಷವನ್ನೇ ಬದಲಾಯಿಸಿಕೊಂಡರೆ ಹೇಗೆ ಎನ್ನುವ ಆಲೋಚನೆ ಕೂಡಾ ಬಹಳಷ್ಟು ನಾಯಕರಿಗಿದೆ. ಆದರೆ ಕ್ಷಮಿಸಿ ಪಕ್ಷ ಬದಲಾಯಿಸಿಕೊಂಡರೂ ನಮ್ಮ ಆಸೆ ಈಡೇರುವುದಿಲ್ಲ. ಯಾಕೆಂದರೆ ನಾವು ಬದಲಾದ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತೇವೆ, ಅಲ್ಲೂ ಒಂದಷ್ಟು ಕಾಲ ಇರುತ್ತೇವೆ. ಅಲ್ಲಿ ಕೂಡಾ ನಾವು ನಮ್ಮ ದೇಹವನ್ನು ಧಣಿಸುತ್ತೇವೆ… ದೇಹವನ್ನು ಅವರಿಗೆ ಕೊಡುತ್ತೇವೆ. ಯಾಕೆಂದರೆ ಇವರು ಏನಾದರೂ ಕೊಡಬಹುದೆಂಬ ಕಾರಣಕ್ಕೆ.
ಹೀಗೆ ನಾವು ಪಕ್ಷ ಬದಸಿಲಿಕೊಂಡು, ದುಡಿದು, ಧಣಿದು ಕಾಯುತ್ತೇವೆ. ಅದು ಕೈಗೂಡದಿದ್ದಾಗ ಶಪಿಸಿಕೊಂಡು ಹೊರಬರುತ್ತೇವೆ. ಇದು ನಿನ್ನೆ, ಮೊನ್ನೆ, ಇಂದು ಆದ ಕತೆಯಲ್ಲ. ನಿರಂತರವಾಗಿ ಆಗುತ್ತವೇ ಬಂದಿದೆ. ಆದರೂ ನಮಗೆ ಒಂದು ಆಸೆ, ನಾಳೆಗಳು ಬರಬಹುದು. ನಮ್ಮ ಆಸೆಗಳು ಈಡೇರಬಹುದು ಎನ್ನುವ ಕಾರಣಕ್ಕೆ.
ಕ್ಷಮಿಸಿ ನಾನು ತುಂಬಾ ನೊಂದುಕೊಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ನಾನು ಹೇಳುತ್ತಿರುವುದು ಐತಿಹಾಸಿಕ ಸತ್ಯ, ನಾವು-ನಮ್ಮ ಸಮಾಜ ಅನುಭವಿಸಿದ, ಅನುಭವಿಸುತ್ತಿರುವ ಸತ್ಯ. ಇದಕ್ಕಿಂತ ಭಿನ್ನವೂ, ಇತಿಹಾಸವನ್ನೇ ತಿರುಚುವ ಸತ್ಯವಿದ್ದರೆ ಹೇಳಿ, ನಾನೂ ಕೇಳುತ್ತೇನೆ.
-ಚಿದಂಬರ ಬೈಕಂಪಾಡಿ
(ಗೌರವ ಸಂಪಾದಕರು)



