ಬೆಂಗಳೂರು(ನ.೨೬) : ಹಣ ಕಳವು ಮಾಡಿದ್ದಾನೆಂಬ ಮ್ಯಾನೇಜರ್ ಆರೋಪಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮುಡಿಪು ನಿವಾಸಿ, ಯಶವಂತಪು ಮತ್ತಿಕೆರೆ ಸುಬ್ಬಯ್ಯ ಆಸ್ಪತ್ರೆಯಲ್ಲಿ ಮೆಡಿಕಲ್ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂದೇಶ್ ಕುಲಾಲ್ (27)ಆತ್ಮಹತ್ಯೆಗೈದ ಯುವಕ. ಆಸ್ಪತ್ರೆ ಮ್ಯಾನೇಜರ್ ಚಕ್ರವರ್ತಿ, ಸಂದೇಶ್ ಕುಲಾಲ್ ವಿರುದ್ಧ 25 ಸಾವಿರ ರೂ.(ಸರಕಾರ ರದ್ದು ಮಾಡಿದ ೫೦೦-೧೦೦೦ ನೋಟುಗಳು) ಕಳ್ಳತನದ ಆರೋಪ ಮಾಡಿದ್ದು, ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂದೇಶ್ ಸಾವಿಗೆ ಚಕ್ರವರ್ತಿ ಕಾರಣ ಎಂದು ಸಂದೇಶ್ ಅವರ ಸಹೋದರ ದಿನೇಶ್ ಆರೋಪಿಸಿದ್ದಾರೆ.
ನೇಣಿಗೆ ಶರಣಾದ ಸಂದೇಶ್ ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಮ್ಯಾನೇಜರ್ ಚಕ್ರವರ್ತಿ ಬಳಿ ತಾನು ಕಳ್ಳತನ ಮಾಡಿಲ್ಲ, ಹಣದ ಬಗ್ಗೆ ಗೊತ್ತಿಲ್ಲ, ಬೇಕಿದ್ದರೆ ಆಸ್ಪತ್ರೆಯ ಸಿಸಿ ಟಿವಿಯನ್ನು ಪರಿಶೀಲಿಸುವಂತೆ ತಿಳಿಸಿದ್ದರು. ಅದರಂತೆ ಸಿಸಿ ಟಿವಿಯನ್ನೂ ಪರಿಶೀಲಿಸಲಾಗಿದ್ದು, ಇದರಲ್ಲಿ ಅಂತಹ ಯಾವುದೇ ಕುರುಹು ಸಿಕ್ಕಿರಲಿಲ್ಲ. ಆ ಬಳಿಕವೂ ಮ್ಯಾನೇಜರ್ ತನ್ನ ಕಿರುಕುಳವನ್ನು ಮುಂದುವರಿಸಿದ್ದು, ಕಳ್ಳತನ ಒಪ್ಪಿಕೊಳ್ಳುವಂತೆ ಪೀಡಿಸುತ್ತಿದ್ದ. ಇದರಿಂದ ನೊಂದ ಸಂದೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.