ಉಡುಪಿ(ನ.೨೫): ನವದೆಹಲಿಯ ಸಿಟಿಜನ್ ಇಂಟಿಗ್ರೇಷನ್ ಪೀಸ್ ಸೊಸೈಟಿಯು ಸಮಾಜದ ಸೇವೆಗಾಗಿ ನೀಡುವ ಪ್ರತಿಷ್ಠಿತ ‘ಭಾರತ್ ಗೌರವ ರಾಷ್ಟ್ರೀಯ ಪ್ರಶಸ್ತಿ’ ಯನ್ನು ಸಮಾಜ ಸೇವಕ, ಸಂಘಟಕ ರಾದ ಪೆರ್ಡೂರು ಪಕ್ಕಾಲು ರಾಮ ಕುಲಾಲ್ ಅವರಿಗೆ ಈಚೆಗೆ ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಮಾಜಿ ರಾಜ್ಯಪಾಲ ಡಾ.ಭೀಷ್ಮ ನಾರಾಯಣ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ತಾನು ಬೆಳೆಯುವ ಜತೆಗೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ವಿಶೇಷ ಮುತುವರ್ಜಿಯಲ್ಲಿ ತನ್ನ ಅಂದಿನ ಬಡತನವನ್ನು ನೆನೆದು 40 ವರ್ಷಗಳಿಂದ ಸಮಾಜಸೇವೆ, ಸಂಘ ಟನೆ, ಶೋಷಿತರ ಪರ ಹೋರಾಟದ ಮೂಲಕ ಜನಪರವಾಗಿ ರಾಮ ಕುಲಾಲ್ ಗುರುತಿಸಿಕೊಂಡಿದ್ದಾರೆ. ಬಡವರಿಗೆ ಶಿಕ್ಷಣ, ಆರೋಗ್ಯ, ಮದುವೆ ಮಾಡಲು ನೆರವು ನೀಡಿ ಜನಮನವನ್ನು ಗೆದ್ದಿದ್ದಾರೆ.
ಪೆರ್ಡೂರು ಪರಿಸರದಲ್ಲಿ ಕುಲಾಲ ಸಮುದಾಯವನ್ನು ಎಲ್ಲರೊಂದಿಗೆ ಸೇರಿ ಯಶಸ್ವಿಯಾಗಿ ಸಂಘಟಿಸಿ ಭವ್ಯವಾದ ಕುಲಾಲ ಭವನದ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಬಳಿಕ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುಲಾಲ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯ ಕ್ಷರಾಗಿ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.