ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು : ಸುಜೀರ್ ಕುಡುಪು
ವೇಣೂರು(ನ.೨೩): ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಪೂರಕವಾಗಿದ್ದು, ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದ.ಕ ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು ಹೇಳಿದರು.
ಬೆಳ್ತಂಗಡಿ ತಾಲೂಕಿನ ಗೋಳಿಯಂಗಡಿ ಕುಂಭ ನಿಧಿ ಮೂಲ್ಯರ ಯಾನೆ ಕುಂಬಾರರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡೋತ್ಸವ `ಸರ್ವಜ್ಞ ಟ್ರೋಫಿ’ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ವಿಗೊಳಿಸುವುದು ಕಷ್ಟಕರ. ಅದನ್ನು ಸವಾಲಾಗಿ ಸ್ವೀಕರಿಸಿ ಇಲ್ಲಿ ಯಶಸ್ವಿಯಾಗಿ ನಡೆಸುವ ಜೊತೆಗೆ ಸಂಘಟನೆಗಳು ಸಂಸ್ಕಾರ, ಸಂಸ್ಕೃತಿ ಉಳಿಸುವ ಕಾರ್ಯವನ್ನೂ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ `ಕ್ರೀಡೆ ಕುರಿತು ಉತ್ತಮ ತರಬೇತಿ ನೀಡಿದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಗಳು ಬೆಳೆಯಲು ಸಾಧ್ಯ. ಯುವಕರಲ್ಲಿ ಕ್ರೀಡಾ ಸ್ಫೂರ್ತಿಯನ್ನು ತುಂಬಿ ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಮುನ್ನೆಡೆಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು. ಹರೀಶ್ ಮೂಲ್ಯ ಗೋಳಿಯಂಗಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಾಲಿವುಡ್ ನಟ, ಮಿಸ್ಟರ್ ಇಂಡಿಯಾ ಹಾಗು ಮಿಸ್ಟರ್ ಮಹಾರಾಷ್ಟ್ರ ಪ್ರಶಸ್ತಿ ವಿಜೇತ ರಾಜೇಶ್ ಮೂಲ್ಯ (ಶೌರ್ಯ) ಅವರು ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಸಭೆಗೆ ಮೆರುಗು ತಂದರು.
ಸಮಾರಂಭದಲ್ಲಿ ಬೆಳ್ತಂಗಡಿ ತಾಪಂ ಉಪಾಧ್ಯಕ್ಷೆ ವೇದಾವತಿ, ಕುಲಾಲ/ಕುಂಬಾರ ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ನಾವೂರು, ನಿವೃತ್ತ ಬ್ಯಾಂಕ್ ಅಧಿಕಾರಿ ಸೋಮಯ್ಯ ಮೂಲ್ಯ ಅಮೈನಡೆ, ತಾಪಂ ಸದಸ್ಯೆ ವಸಂತಿ, ಉಡುಪಿ ಕುಲಾಲ/ಕುಂಬಾರ ಯುವ ವೇದಿಕೆಯ ಸತೀಶ್ ನಡೂರು, ಕುಂಭಶ್ರೀ ವಿದ್ಯಾಸಂಸ್ಥೆಯ ಗಿರೀಶ್ ಕೆ ಎಚ್, ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು, ತುಳು ಅಕಾಡಮಿ ಸದಸ್ಯ ಡಿ ಎಂ ಕುಲಾಲ್, ವೈದ್ಯಾಧಿಕಾರಿ ಡಾ. ಚೇತನ್, ಬಂದಾರು ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್, ಕಲಾ ಕುಂಭ ಸಾಂಸ್ಕೃತಿಕ ವೇದಿಕೆಯ ನಾಗೇಶ್ ಕುಲಾಲ್, ಕುಕ್ಕೇಡಿ ಗ್ರಾಪಂ ಸದಸ್ಯೆ ಗೌರಿ, ವೇಣೂರು ಠಾಣೆಯ ಇನ್ಸ್ ಪೆಕ್ಟರ್ ಲೋಲಾಕ್ಷ , ನ್ಯಾಯವಾದಿ ಹರೀಶ್ ಪೂಂಜಾ, ಕುಂಬಾರ ಸರಕಾರೀ ನೌಕರರ ಸಂಘದ ಆನಂದ್ ಬಂಜನ್, ಸತೀಶ್ ಬಂಟ್ವಾಳ, ವಿಶ್ವನಾಥ್ ಕುವೆಟ್ಟು ಮುಂತಾದವರು ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರುತಿ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಕುಂಭನಿಧಿ ಕುಂಬಾರರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ್ ಕುಲಾಲ್ ಕುಂಡದಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಕ್ಕೇಡಿ ಗ್ರಾಪಂ ಮಾಜಿ ಅಧ್ಯಕ್ಷ ಸೋಮನಾಥ್ ಸ್ವಾಗತಿಸಿ, ಜಗದೀಶ್ ಕುಲಾಲ್ ವಂದಿಸಿದರು. ಸಂತೋಷ್ ಕುಲಾಲ್ ಸಿದ್ಧಕಟ್ಟೆ ಹಾಗು ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.