ಉಡುಪಿ : ತುಳುನಾಡಿನಲ್ಲಿ ಪ್ರಾಚೀನ ಕಾಲದಿಂದಲ್ಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ನಾಗಪೂಜೆಗೆ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ಆರಾಧನಾ ಕೇಂದ್ರಗಳಿವೆ. ನಾಗಬನ, ನಾಗನ ಕಟ್ಟೆ, ನಾಗನಕಲ್ಲು, ನಾಗನಹುತ್ತ, ನಾಗದೇವಾಲಯ, ಮೂಲಸ್ಥಾನ ಮತ್ತು ಆಲಡೆಗಳಲ್ಲಿ ನಾಗಪೂಜೆಯ ಮೂಲಕ ನಾಗನನ್ನು ಸಂತೃಪ್ತಿಪಡಿಸುವ ವಿಧಿ-ವಿಧಾನಗಳು ನಿರಂತರವಾಗಿರುತ್ತವೆ.
ತುಳುನಾಡಿನ ವಿವಿಧ ಜಾತಿಯ ಪ್ರತಿ ಗೋತ್ರಕ್ಕೆ (ಬರಿ) ಸಂಬಂಧಿಸಿದಂತೆ ನಾಗಮೂಲಸ್ಥಾನಗಳಿದ್ದು, ಕಾಲ ಕಾಲಕ್ಕೆ ಪೂಜಾ ವಿಧಿ ವಿಧಾನಗಳು ನಡೆಯಬೇಕೆಂಬ ಸಂಪ್ರದಾಯವಿದೆ. ತಪ್ಪಿದಲ್ಲಿ ಕುಟುಂಬಸ್ಥರು ವಿವಿಧ ಕಷ್ಟ ಕಾರ್ಪಣ್ಯಗಳಿಗೆ ತುತ್ತಾಗುತ್ತಾರೆಂಬ ನಂಬಿಕೆ ಇದೆ. ಆದರೆ ನಾಗ ಮೂಲಸ್ಥಾನ ಎಲ್ಲಿದೆ ಎಂದೇ ತಿಳಿಯದ ಕುಟುಂಬಸ್ಥರ ಗತಿಯೇನು ?
ಹೀಗೆ ನಾಗಮೂಲಸ್ಥಾನ ಪತ್ತೆಯಾಗದೇ ವಿವಿಧ ಸಂಕಷ್ಟಕ್ಕೆ ಸಿಲುಕಿ, ಪರಿಹಾರಕ್ಕೆಂದು ಮೂಲಸ್ಥಾನ ಯಾವುದೆಂದು ತಿಳಿಯದೇ ಕಂಗಾಲಾಗಿರುವ ಕುಲಾಲ ಸಮಾಜದ ಕುಟುಂಬವೊಂದು ತಮ್ಮ ನಾಗ ಸಾನಿಧ್ಯ ಪತ್ತೆಗಾಗಿ ಸಾರ್ವಜನಿಕರ ನೆರವು ಯಾಚಿಸಿದ್ದಾರೆ. ಕಾಪು ಸಮೀಪದ ವಾಸವಾಗಿರುವ ಬೆಂಕೆನ್ನ (ಬೆಂಕ್ಯಾನ್) ಗೋತ್ರದ (ಬರಿಯ) ಕುಟುಂಬಸ್ಥರಿಗೆ ಇಂತಹ ಒಂದು ಸಹಾಯ ಬೇಕಾಗಿದೆ.
ಕುಟುಂಬಿಕರಲ್ಲಿ ಸದಾ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ಇದರ ಪರಿಹಾರಕ್ಕಾಗಿ ಜ್ಯೋತಿಷಿಗಳ ಬಳಿ ಪ್ರಶ್ನೆ ಚಿಂತನೆ ನಡೆಸಲಾಗಿದ್ದು, ಇದಕ್ಕೆ ಕುಟುಂಬದ ಹಿರಿಯರಿಂದ ಕಡೆಗಣಿಸಲ್ಪಟ್ಟ, ಜೀರ್ಣಾವಸ್ಥೆಯಲ್ಲಿರುವ ಮೂಲಸ್ಥಾನದ ನಾಗದೋಷ ಕಾರಣ ಎಂದು ತಿಳಿದು ಬಂದಿದೆ. ಹೀಗಾಗಿ ನಾಗಮೂಲ ಯಾವುದು ಎಂಬುದು ಪತ್ತೆಯಾಗಬೇಕಿದೆ. ಜ್ಯೋತಿಷಿ ತಿಳಿಸಿದ ಸೂಚನೆಯನ್ನು ಆಧರಿಸಿ ಹಲವು ಕಡೆ ಇದರ ಪತ್ತೆಗಾಗಿ ಶ್ರಮಿಸಿದರೂ ಅದು ಫಲದಾಯಕವಾಗಿಲ್ಲ. ಹೀಗಾಗಿ ಜ್ಯೋತಿಷಿಗಳು ನೀಡಿದ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು, ಯಾರಿಗಾದರೂ ಇಂಥ ಸ್ಥಳ ತಿಳಿದಿದ್ದರೆ ಮಾಹಿತಿ ನೀಡಲು ಕೋರಲಾಗಿದೆ.
* ಕುಟುಂಬದ ನಾಗಬನ ಪಶ್ಚಿಮ ದಿಕ್ಕಿನಲ್ಲಿದೆ.
* ನಾಗಬನ/ಸನ್ನಿಧಿ ಇರುವ ಸಮೀಪ ಬ್ರಾಹ್ಮಣರ ಮನೆ ಹಾಗೂ ಬಿಲ್ಲವರ (ಪೂಜಾರಿಗಳ) ಮನೆ ಇದೆ.
* ನಾಗ ಸನ್ನಿಧಿಯ ನೈರುತ್ಯ ದಿಕ್ಕಿನಲ್ಲಿ ಮಾವಿನ ಮರ ಇದೆ.
* ನಾಗನ ಸನ್ನಿಧಿಯ ಪೂರ್ವ ದಿಕ್ಕಿನಲ್ಲಿ ಒಂದು ದೊಡ್ಡ ಗುಂಡಿ(ತೋಡು) ಇದೆ.
* ನಾಗನ ಸನ್ನಿಧಿಯ ಆಸುಪಾಸಿನಲ್ಲಿ ಈಶ್ವರ ದೇವಸ್ಥಾನ ಇದೆ.
* ನಾಗನ ಸನ್ನಿಧಿಯ ಬಳಿ ಮಂಗಗಳು ಜಾಸ್ತಿ ನೆಲೆಸಿವೆ.
* ನಾಗನ ಸನ್ನಿಧಿಯ ಜಾಗದ ಬಳಿ ಕಾರಣಿಕದ ಗುಳಿಗ ಭೂತ ಕೂಡಾ ಇದೆ.
ಮೇಲೆ ತಿಳಿಸಿದ ಜಾಗದ ಕುರಿತಾಗಿ ಯಾರಿಗಾದರೂ ಮಾಹಿತಿ ಇದ್ದಲ್ಲಿ 09969058147 ಅಥವಾ 8828272771 ನಂಬರನ್ನು ಸಂಪರ್ಕಿಸಲು ಮನವಿ.