ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿ : ಡಾ. ರಕ್ಷಿತ್ ಬಂಗೇರ
ಪುತ್ತೂರು(ನ.೧೪): ಮಕ್ಕಳು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ.ಇದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಶಾಲೆಯಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳು ಸಾಮಾಜಿಕವಾಗಿ ಬೆರೆಯುತ್ತಾರೆ ಮತ್ತು ಇತರರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇದು ಕೇವಲ ಬಹುಮಾನ ಗಳಿಸುವ ಮಾರ್ಗವಾಗಿರದೆ, ಬಾಂಧವ್ಯ ಬೆಸೆಯುವ ಮಾರ್ಗವಾಗಬೇಕು. ನಿರಂತರ ಪ್ರಯತ್ನದೀನದ ಯಶಸ್ಸು ಸಾಧ್ಯ ಎಂದು ಮಂಗಳಾ ಫಿಸಿಯೋಥೆರಪಿ ಕ್ಲಿನಿಕ್ ನ ಡಾ. ರಕ್ಷಿತ್ ಬಂಗೇರ ಹೇಳಿದರು.
ಪುತ್ತೂರು ಕುಲಾಲ ಸಮಾಜ ಸೇವಾ ಸಂಘ ಹಾಗೂ ಕುಲಾಲ ಸಮಾಜ ಮಹಿಳಾ ಘಟಕದ ವತಿಯಿಂದ ನೆಹರೂ ನಗರದಲ್ಲಿರುವ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನವೆಂಬರ್ 13, ಆದಿತ್ಯವಾರದಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ದಿನೇಶ್ ಪಿ ವಿ ಮಾತನಾಡುತ್ತಾ, ಕ್ರೀಡೆಯಲ್ಲಿ ಗ್ರಾಮೀಣ ಜನರಿಗೆ ಉತ್ತೇಜನ ನೀಡಿ, ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಕ್ಕಳ ಪ್ರತಿಭೆ ಹೊರಹಾಕಲು ವೇದಿಕೆ ಸಿಕ್ಕಂತಾಗುತ್ತದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ. ಧರ್ಣಪ್ಪ ಮೂಲ್ಯ , ಸಂಘದ ಉಪಾಧ್ಯಕ್ಷ ಸಚ್ಚಿದಾನಂದ, ಕೋಶಾಧಿಕಾರಿ ಧರ್ಣಪ್ಪ ಮೂಲ್ಯ , ಜೊತೆ ಕಾರ್ಯದರ್ಶಿ ಚಂದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.