ಮಂಗಳೂರು(ನ. ೧೩): ಅದು ಕೂಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬ. ಕೂಲಿಯಿಲ್ಲದಿದ್ದರೆ ಜೀವನ ಸಾಗಿಸುವುದೇ ಅಸಾಧ್ಯವೆಂಬ ಪರಿಸ್ಥಿತಿ. ಆದರೆ ಇಂತಹ ಕಷ್ಟದಲ್ಲಿಯೂ ಅವರ ಮಗನಿಗೆ ಕಾನ್ಸರ್ ಎಂಬ ಮಹಾಮಾರಿ ಬಂದಪ್ಪಳಿಸಿ ಕುಟುಂಬವನ್ನೇ ಕಂಗೆಡಿಸಿತ್ತು. ಪೋಷಕರು ಮಗನಿಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ತಪ್ಪಿಸಬೇಕು ಪರದಾಡುತ್ತಿದ್ದರು. ಅದಕ್ಕಾಗಿ ಹಣವಿಲ್ಲದೆ ಕಂಗಾಲಾಗಿದ್ದ ಕುಟುಂಬಕ್ಕೆ ಕಾಪು ಕುಲಾಲ ಯುವ ವೇದಿಕೆಯ ಸಹೃದಯ ಸದಸ್ಯರು ನೆರವು ನೀಡಿ ಆಸರೆಯಾಗಿದ್ದಾರೆ.
ಸುರತ್ಕಲ್ ಕಾಟಿಪಳ್ಳದಲ್ಲಿ ವಾಸ್ತವ್ಯ ಇರುವ ಕಾಪು ಪಾದೂರಿನ ಶಂಕರ ಕುಲಾಲ್ ಮತ್ತು ಬೋಳ ಮಿತ್ತಬೈಲಿನ ಜಯಂತಿ ಮೂಲ್ಯ ದಂಪತಿಗಳ 6 ವರ್ಷದ ಪುಟ್ಟ ಕಂದ ಯಶ್ವಿನ್ ಕುಲಾಲ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಹಣಕಾಸಿನ ಮುಗ್ಗಟ್ಟು ಇರುವ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆಯ ಸದಸ್ಯರು ಹಣ ಸಂಗ್ರಹ ನಡೆಸಿದ್ದರು.
ವೇದಿಕೆಯ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು ಅವರ ನೇತೃತ್ವದಲ್ಲಿ ವಾಟ್ಸಪ್ ಸ್ನೇಹಿತರ ಮೂಲಕ ಹಣ ಸಂಗ್ರಹ ನಡೆಸಿದ್ದು, ಅನೇಕ ದಾನಿಗಳು ನೆರವಿನ ಹಸ್ತ ಚಾಚಿದ್ದರು. ಆ ಫಲವಾಗಿ ಸ್ವಲ್ಪ ಸಮಯದಲ್ಲೇ 70 ಸಾವಿರ ರೂ. ಸಂಗ್ರಹವಾಗಿತ್ತು. ಸಂಗ್ರಹಗೊಂಡ ಹಣವನ್ನು ಇಂದು (ನ. ೧೩) ಅಪರಾಹ್ನ ೨ ಗಂಟೆಗೆ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಶ್ವಿನ್ ಕುಟುಂಬಕ್ಕೆ ಹಸ್ತಾ೦ತರ ಮಾಡಲಾಯಿತು.
ಈ ಸಂದರ್ಭ ಕುಲಾಲ ಯುವ ವೇದಿಕೆಯ ಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಕಾಪು ಘಟಕದ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು, ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕಾಪು ಪುರಸಭೆ ಸದಸ್ಯೆ ಶಾಂಭವಿ ಕುಲಾಲ್, ನ್ಯಾಯವಾದಿ ಸುನಿಲ್ ಮೂಲ್ಯ, ಅರುಣ್ ಕುಲಾಲ್, ಸಂತೋಷ್ ಕುಲಾಲ್ ಪದವು, ಹೇಮಂತ್ ಕುಮಾರ್ ಕಿನ್ನಿಗೋಳಿ ಮುಂತಾದವರು ಉಪಸ್ಥಿತರಿದ್ದರು.
ಚಾಲಕ ವೃತ್ತಿಯನ್ನು ನಡೆಸುತ್ತಿರುವ ಶಂಕರ ಕುಲಾಲ್ ಮತ್ತವರ ಕುಟುಂಬ ತೀರಾ ಕಷ್ಟದಿಂದ ಜೀವನ ನಡೆಸುತ್ತಿದ್ದು, ಮಗುವಿನ ಚಿಕಿತ್ಸೆಗೆ 6 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣದ ಅವಶ್ಯಕತೆ ಇದೆ. ಆರ್ಥಿಕವಾಗಿ ನೆರವಾಗ ಬಯಸುವ ದಾನಿಗಳು ಶಂಕರ್ ಕುಲಾಲ್ ಅವರ ಬ್ಯಾಂಕ್ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Shankar .C.
Vijaya Bank. Main Road, Surathkal, Mangaluru
SB A/c No.120301010007589
IFSC code- VIJB0001203