ತಿಪಟೂರು(ನ.೧೦): ಮಾನವನ ನಾಗರೀಕತೆಗೆ ಮೂಲಭೂತ ಕೊಡುಗೆ ನೀಡಿರುವ ಕುಂಬಾರ ಜನಾಂಗದ ಪ್ರಗತಿಗೆ ಎಲ್ಲ ರೀತಿಯ ಸಹಕಾರ ಅತ್ಯಗತ್ಯ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಶಾಲಿವಾಹನ ಕುಂಬಾರ ಸೇವಾ ಸಂಘದಿಂದ ನಗರದ ಕೆರಗೋಡಿ ರಸ್ತೆ ಚಾಮುಂಡೇಶ್ವರಿ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಡಕೆ, ಕುಡಿಕೆಯ ಜನಕರಾದ ಕುಂಬಾರರು ಆಧುನಿಕತೆ ನಡುವೆ ಕುಲ ಕಸುಬು ನೆಚ್ಚಿ ಬದುಕಲಾರದ ಸ್ಥಿತಿ ತಲುಪಿದ್ದಾರೆ. ಮಡಕೆಯಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸತ್ಯ ಎಲ್ಲರಿಗೂ ಗೊತ್ತಿದ್ದರೂ ಪರಿಸ್ಥಿತಿ ಬದಲಾಗಿದೆ. ಬದಲಾದ ಜೀವನ ಪದ್ಧತಿಯಲ್ಲಿ ಮಡಕೆಗೆ ಬೇಡಿಕೆ ಇಲ್ಲವಾಗಿದೆ. ಈ ಜನಾಂಗ ಬೇರೆ ಸನ್ಮಾರ್ಗಗಳ ಮೂಲಕ ಅಭಿವೃದ್ಧಿ ಕಾಣಬೇಕು. ಶಿಕ್ಷಣ, ಕೃಷಿಯಂತಹ ಮಾರ್ಗಗಳ ಮೂಲಕ ಮಾತ್ರ ಪ್ರಗತಿ ಹಾದಿಯಲ್ಲಿ ಸಾಗಬೇಕಿದೆ. ಇದಕ್ಕಾಗಿ ಸಮಾಜ ಪರಸ್ಪರ ಸಹಕಾರದೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ಹಾಸ್ಟೆಲ್, ವಿದ್ಯಾರ್ಥಿವೇತನ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಈ ಜನಾಂಗದ ಕಟ್ಟಡ ನಿರ್ಮಾಣಕ್ಕೆ ತಮ್ಮ ಅನುದಾನದಿಂದ ₹ 4.80 ಲಕ್ಷ ನೀಡುವುದಾಗಿ ಅವರು ಭರವಸೆ ನೀಡಿದರು. ಈಗಿರುವ ನಿವೇಶನ ತುಂಬಾ ಚಿಕ್ಕದಾಗಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ನಗರ ಹೊರ ವಲಯದಲ್ಲಿ ಸೂಕ್ತ ಜಾಗ ದೊರಕಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಅಡ್ಡಿಗಳಿದ್ದರೂ ನಿವಾರಿಸಿ ಕುಂಬಾರ ಜನಾಂಗಕ್ಕೆ ಸೂಕ್ತ ಜಾಗ ದೊರಕಿಸಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ತೀರಾ ಕಡಿಮೆ ಸಂಖ್ಯೆಯಲ್ಲಿರುವ ಕುಂಬಾರ ಜನಾಂಗ ಈಗಲಾದರೂ ಸಂಘಟಿತರಾಗಿರುವುದು ಶ್ಲಾಘನೀಯ. ಈ ಸಮಾಜದ ಬೆಳವಣಿಗೆಗೆ ಪೂರಕವಾಗಿ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಾಲ್ಲೂಕು ಪಂಚಾಯಿತಿಯಿಂದ ಕೂಡ ಸಾಧ್ಯವಾದ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್ ಮಾತನಾಡಿ, ಬೆರಳೆಣಿಕೆಯಷ್ಟಿರುವ ಈ ಜನಾಂಗವನ್ನು ರಾಜಕೀಯ ದೃಷ್ಟಿಯಿಂದ ಗುರುತಿಸಿ ಗಮನ ಕೊಡುವುದು ವಿರಳ. ಅಪಾರ ಕೊಡುಗೆ ನೀಡಿರುವ ಕುಂಬಾರರ ಪ್ರಗತಿಗೆ ಎಲ್ಲ ರೀತಿಯ ನೆರವು ನೀಡಬೇಕಾದ ಹೊಣೆ ಸಮಾಜದ ಮೇಲಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ಮಾಡಿದ್ದ ಸಣ್ಣ ನಿವೇಶನದಲ್ಲಿ ಈಗ ಕಟ್ಟಡ ಕಟ್ಟುವ ಪ್ರಯತ್ನ ಸಾಗಿದೆ. ಆದರೆ ಈ ಜನಾಂಗದ ಹಾಸ್ಟೆಲ್ ಮತ್ತಿತರ ಅನುಕೂಲಕ್ಕೆ ಶಾಸಕರು ನಗರ ಸಮೀಪದಲ್ಲಿ ಸೂಕ್ತ ಜಾಗ ದೊರಕಿಸಿಕೊಡಬೇಕು ಎಂದು ಕೋರಿದರು.
ವಿಪ್ರೋ ಫ್ಲುಯಿಡ್ ಪವರ್ ಕಂಪನಿ ಜನರಲ್ ಮೇನೇಜರ್ ಜೆ. ವೆಂಕಟೇಶ್ ಮಾತನಾಡಿ, ಸಂಘಟನೆಯಲ್ಲಿ ಮುಂದಾಳತ್ವ ವಹಿಸಿದವರಿಗೆ ಎಲ್ಲರೂ ಸಹಕಾರ ನೀಡಬೇಕು. ಕೊಂಕು ತೆಗೆಯದೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಪರಸ್ಪರ ಕೈ ಜೋಡಿಸಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ನಗರಸಭೆ ಉಪಾಧ್ಯಕ್ಷೆ ಜಹೀರಾ ಜಬೀನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ, ಮಾಜಿ ಶಾಸಕ ಬಿ.ಸಿ. ನಾಗೇಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪಿ. ಗೋವಿಂದರಾಜು ಸ್ವಾಗತಿಸಿದರು. ಸುಂದರ್ ನಿರೂಪಿಸಿದರು. ಸೋಮಶೇಖರ್ ವಂದಿಸಿದರು.
ನಾಗರಿಕತೆಗೆ ಕುಂಬಾರರ ಕೊಡುಗೆ ಅಪಾರ : ತಿಪಟೂರು ಶಾಸಕ ಕೆ.ಷಡಕ್ಷರಿ
Kulal news
2 Mins Read