ಒಳಪಂಗಡಗಳು ಒಗ್ಗೂಡಲಿ : ಮುರಘಾಮಠ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ
ಧಾರವಾಡ(ನ.೦೯) : ಶತಮಾನದ ಹಿಂದೆ ಕಾಯಕದ ವೃತ್ತಿ ಆಧಾರಿತದ ಮೇಲೆ ಜಾತಿಗಳ ಒಳಪಂಗಡಗಳು ಹುಟ್ಟಿಕೊಂಡಿದ್ದವು ಅವುಗಳನ್ನೆಲ್ಲವನ್ನು ಒಗ್ಗೂಡಿಸಿ ಲಿಂಗಾಯತ ಎಂಬ ವಿನೂತನ ಧರ್ಮವನ್ನು ಸ್ಥಾಪಿಸಿದ ಬಸವಾದಿ ಶರಣರ ವಚನಗಳು ಪ್ರತಿಯೊಂದು ಒಳಪಂಗಡಗಳಿಗೂ ಅವಶ್ಯವಾಗಿವೆ ಎಂದು ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.
ಮದಿಹಾಳದಲ್ಲಿನ ಜೋಶಿ ಮಂಗಲ ಕಾರ್ಯಾಲಯದಲ್ಲಿಂದು ಕರ್ನಾಟಕ ಪ್ರದೇಶ ಕುಂಬಾರರ ಸಂಘ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ ಕುಂಬಾರ ಬಾಂಧವರ ವಧು ವರರ ಸಮಾವೇಶ ಉದ್ಘಾಟನೆ ಹಾಗೂ ನಿವೃತ್ ಯೋಧರಾದ ಬಿ.ಬಿ.ಚಕ್ರಸಾಲಿ ವಿರಚಿತ ಗುರು ಪ್ರಕಾಶ ವಚನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಒಳಪಂಗಡಗಳ ಒಗ್ಗಟ್ಟು ಹಾಗೂ ಸಂಘಟನೆ ಮತ್ತು ಪ್ರದರ್ಶನ ಮಾಡುತ್ತಾ ಹೋದರೆ ಅಖಂಡ ಲಿಂಗಾಯತ ಸಮಾಜಕ್ಕೆ ಧಕ್ಕೆ ಉಂಟಾಗಲಿದೆ. ಪಂಗಡ ಯಾವುದೆ ಇರಲಿ ಇಷ್ಟಲಿಂಗ ಧರಿಸಿ ವಚನಗಳನ್ನು ಪಠಣ ಮಾಡುವ ಪ್ರತಿಯೊಬ್ಬರೂ ಲಿಂಗಾಯತ ಎನ್ನಬೇಕು ಅಂತಹ ಮನೋಭಾವನೆ ಪ್ರತಿಯೊಬ್ಬ ಲಿಂಗಾಯತರಲ್ಲಿ ಮೂಡಿ ಬರಬೇಕಿದೆ ಎಂದರು.
ಪಾಲಿಕೆ ಸದಸ್ಯ ಶೈಲಾ ಕಾಮರಡ್ಡಿ ಮಾತನಾಡಿ, ಕುಂಬಾರ ಸಮಾಜದ ಬಾಂಧವರು ವಧು ವರರ ಸಮಾವೇಶ ಏರ್ಪಡಿಸಿ ಹಿರಿಯರ ಸಮ್ಮುಖದಲ್ಲಿ ವಧುವರರ ಆಯ್ಕೆ ಮಾಡುತ್ತಿರುವುದು ಶ್ಲಾಘನೀಯ. ಪ್ರೇಮ ವಿವಾಹಗಳು ಕೆಲವೇ ದಿನದಲ್ಲಿ ಪತಿ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಮೂಡಿ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಪ್ರೇಮ ವಿವಾಹ, ಅಂತರಜಾತಿ ವಿವಾಹ ಶತಮಾನದಿಂದಲೂ ನಡೆದು ಬಂದಿದೆ. ಆದರೆ ಅಂದಿನ ದಿನಕ್ಕೂ ಇಂದಿನ ದಿನಕ್ಕೂ ಅತ್ಯಂತ ವ್ಯತ್ಯಾಸ ಕಂಡು ಬಂದಿದೆ. ಧಾರ್ಮಿಕ ತತ್ವದ ಮೇಲೆ ಸಮಾವೇಶಗಳು ಹಾಗೂ ಸಮಾಜ ಸಂಘಟನೆಗಳು ಬಲಗೊಳ್ಳುವ ಬದಲಾಗಿ ವೈಚಾರಿಕತೆ ಚಿಂತನೆಗಳ ಸಂದೇಶ ಸಿಗುವಂತಾಗಬೇಕು ಎಂದರು.
ಕುಂಬಾರ ಸಮಾಜದ ಗೌರವಾಧ್ಯಕ್ಷ ಈರಣ್ಣ ಹೊಸಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ ಹುಣಸಿಮರದ, ಎಚ್.ಎಂ.ದಿನೇಶ, ಡಾ.ಎಸ್.ಆರ್.ಅಂಗಡಿ, ಜಿ.ಎನ್.ರಾಜಶೇಖರ ಉಪಸ್ಥಿತರಿದ್ದರು. ಸಿ.ಟಿ.ಕುಂಬಾರ ನಿರೂಪಿಸಿದರು. ಬಿ.ಬಿ.ಚಕ್ರಸಾಲಿ ವಂದಿಸಿದರು.