ದೋಹಾ(ನ.೦೯) : ಬ್ಲಡ್ ಕ್ಯಾನ್ಸರ್’ನಿಂದ ಬಳಲುತ್ತಿರುವ ಕಾಪು ಪಾದೂರಿನ ಶಂಕರ್ ಕುಲಾಲ್ -ಜಯಂತಿ ಕುಲಾಲ್ ದಂಪತಿಯ ಮಗ ಯಶ್ವಿನ್ ಕುಲಾಲ್ ಚಿಕಿತ್ಸೆಗೆ ದೋಹಾ ಕತಾರ್ ಫ್ರೆಂಡ್ಸ್ ನ ಪ್ರಮುಖರಾದ ಆನಂದ್ ಕುಂಬಾರ ಅವರು ವೈಯಕ್ತಿಕವಾಗಿ 25,000 ರೂಪಾಯಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೂಲತಃ ಕುಂದಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶ ಕೆದೂರಿನ ಕೃಷಿಕ ಕುಟುಂಬದವರಾದ ಆನಂದ್ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಕಳೆದ ಹದಿನೈದು ವರ್ಷಗಳಿಂದ ಸರಕಾರಿ ಸ್ವಾಮ್ಯದ ಕತಾರ್ ಕೆಮಿಕಲ್ಸ್ ಕಂಪೆನಿಯಲ್ಲಿ ಕಾರ್ಯಾಚರಣಾ ಅಧೀಕ್ಷಕರಾಗಿ ದುಡಿಯುತ್ತಿದ್ದಾರೆ. ಸಂಪಾದನೆ ಮಾಡಿದ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಎಂಬ ಆಶಯ ಹೊಂದಿರುವ ಇವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿ ಪಾಲ್ಗೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡವರು. ದೋಹಾ ಕತಾರ್ ನಲ್ಲಿ ಕುಲಾಲ ಸಮಾಜದವರನ್ನು ಸಂಘಟಿಸಿ, ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ನಿರಂತರ ನೆರವು ನೀಡುವ ಮೂಲಕ ಸ್ಪೂರ್ತಿ ತುಂಬುತ್ತಿದ್ದಾರೆ.
ಸುರತ್ಕಲ್ ಕಾಟಿಪಳ್ಳದಲ್ಲಿ ವಾಸ್ತವ್ಯ ಇರುವ ಕಾಪು ಪಾದೂರಿನ ಶಂಕರ ಕುಲಾಲ್ ಅವರ 6 ವರ್ಷದ ಮಗ ಯಶ್ವಿನ್ ಬ್ಲಡ್ ಕ್ಯಾನ್ಸರ್’ಗೆ ತುತ್ತಾಗಿದ್ದು, ಆತನಿಗೆ ತುರ್ತಾಗಿ ಮಗುವಿಗೆ ಚಿಕಿತ್ಸೆ ನೀಡಬೇಕಾಗಿದ್ದು ಇದಕ್ಕೆ 6 ಲಕ್ಷಕ್ಕೂ ಅಧಿಕ ಮೊತ್ತದ ಅವಶ್ಯಕತೆ ಇದೆ. ಹೀಗಾಗಿ ಅವರು ಸಹೃದಯ ದಾನಿಗಳ ನೆರವು ಯಾಚಿಸಿದ್ದರು. ಈ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್ ‘ ವರದಿ ಪ್ರಕಟಿಸಿತ್ತು. ಇದಕ್ಕೆ ಹಲವು ಮಂದಿ ಸ್ಪಂದಿಸಿ ನೆರವು ನೀಡುತ್ತಿದ್ದಾರೆ.