ಬಂಟ್ವಾಳ(ನ.೦೩): ಪ್ರತಿ ಬಾರಿ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕುಲಾಲ, ಕುಂಬಾರ ಸಮುದಾಯದ ಜನರಿಗೆ ಅಧಿಕಾರದ ಆಮಿಷಗಳನ್ನು ತೋರಿಸಿ ಬಳಿಕ ಕಡೆಗಣಿಸಿದೆ. ಈ ಬಾರಿ ಸರಕಾರವೂ ಕೂಡ ನಿಗಮ ಮಂಡಳಿಗಳ ಆಯ್ಕೆಯ ವೇಳೆಗೆ ಅಧ್ಯಕ್ಷ ಸ್ಥಾನವನ್ನು ನೀಡದೆ ಕುಲಾಲ, ಕುಂಬಾರ ಸಮುದಾಯವನ್ನು ಕಡೆಗಣಿಸಿದೆ. ಎಂಎಲ್ಎ, ಎಂಎಲ್ಸಿಗಳ ಆಯ್ಕೆಯ ವೇಳೆಗೆ ಪ್ರಬಲ ವರ್ಗಗಳಿಗೆ ಅವಕಾಶ ನೀಡುವ ರಾಜಕೀಯ ಮುಖಂಡರು ನಿಗಮ ಮಂಡಳಿಗಳ ಅಧ್ಯಕ್ಷ ಆಯ್ಕೆಯ ವೇಳೆಗೆ ಕುಲಾಲ ಸಮುದಾಯದ ರಾಜಕೀಯ ನಾಯಕರಿಗೆ ಒಂದೇ ಒಂದು ಅವಕಾಶ ನೀಡದೆ ಇರುವುದು ಕುಲಾಲ ಸಮುದಾಯದ ಮುಖಂಡರ ಕಣ್ಣು ಕೆಂಪಾಗಿಸಿದೆ.
ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕುಲಾಲರನ್ನು ಬಳಸಿಕೊಂಡು, ಅಧಿಕಾರ ನೀಡುವ ವೇಳೆ ಜಾಣ ಕುರುಡು ಪ್ರದರ್ಶಿಸಿದ ಜನಪ್ರತಿನಿಧಿಗಳ ನಡವಳಿಕೆಯ ವಿರುದ್ದ ಕುಲಾಲ ಮುಖಂಡರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸುಮಾರು 20 ಲಕ್ಷ ಹಾಗೂ ಕರಾವಳಿಯಲ್ಲಿ 3 ಲಕ್ಷ ಕುಲಾಲ, ಕುಂಬಾರ ಜನ ಸಂಖ್ಯೆಯಿದೆ. ಬಹುತೇಕ ಹೆಚ್ಚಿನ ಸಮುದಾಯಗಳನ್ನು ಅಧ್ಯಕ್ಷ ಸ್ಥಾನದ ಹಂಚಿಕೆಯ ವೇಳೆ ಪರಿಗಣಿಸಿ ಕುಲಾಲ ಸಮುದಾಯವನ್ನು ಸರಕಾರ ನಿರ್ಲಕ್ಷಿಸಿದೆ ಎನ್ನುವ ಆರೋಪಗಳು ಕುಲಾಲ ಮುಖಂಡರಿಂದ ಕೇಳಿ ಬಂದಿವೆ.
ಕುಂಬಾರ ಸಮುದಾಯಕ್ಕೆ ಮೀಸಲಾಗಿರುವ ಕುಂಭಕಲಾ ನಿಗಮವನ್ನು ಹಿಂದೆ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದು, ಅದನ್ನ ದೇವರಾಜ ಅರಸು ನಿಗಮದಿಂದ ಬೇರ್ಪಡಿಸಿ ಕುಂಬಾರರಿಗೆ ಸ್ವತಂತ್ರ ಕುಂಭಕಲಾ ನಿಗಮ ನೀಡುವ ಅವಕಾಶ ರಾಜ್ಯ ಸರಕಾರಕ್ಕಿತ್ತು. ಆದರೆ ರಾಜ್ಯ ಸರ್ಕಾರ ಅದನ್ನೂ ಮಾಡದೇ ಬೇರೆ ನಿಗಮಗಳಲ್ಲೂ ಅವಕಾಶ ಕೊಡದೆ ಮೂಲೆಗುಂಪು ಮಾಡಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯ ಸಂದರ್ಭವೂ ಎಲ್ಲಾ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿದೆ ಎಂಬ ಆಕ್ರೋಶದ ಮಾತುಗಳು ಕುಲಾಲ ಸಮುದಾಯದ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಸರಕಾರ ಕುಲಾಲ, ಕುಂಬಾರ ಸಮುದಾಯದ ಬಗ್ಗೆ ತಳೆದಿರುವ ಈ ನಿರ್ಲಕ್ಷ್ಯ ಧೋರಣೆಯನ್ನು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ, ಹಾಗೂ ಕರಾವಳಿ ಕುಲಾಲ/ಕುಂಬಾರರ ಯುವ ವೇದಿಕೆ ಗಂಭೀರವಾಗಿ ಪರಿಗಣಿಸಿದ್ದು ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಸರಿಯಾದ ಉತ್ತರ ನೀಡಲು ಸಿದ್ದತೆ ನಡೆಸಿದೆ.
……………………………………
ನಿಗಮ ಮಂಡಳಿಗಳ ಅಧ್ಯಕ್ಷ ಆಯ್ಕೆಯ ವೇಳೆಗೆ ಕುಲಾಲ, ಕುಂಬಾರ ಸಮುದಯವನ್ನು ರಾಜ್ಯ ಸರಕಾರ ಕಡೆಗಣಿಸಿದೆ. ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅನುಸಿರಿಸುತ್ತಿದ್ದ ಮಾರ್ಗವನ್ನೇ ಸರಕಾರವೂ ಅನುಸರಿಸಿದೆ. ಅನೇಕ ಕುಲಾಲ ಸಮುದಾಯದ ನಾಯಕರು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಒಂದೂ ಅವಕಾಶ ನೀಡದಿರುವುದು ಖೇದಕರ. ಕುಂಭ ಕಲಾ ನಿಗಮವನ್ನು ದೇವರಾಜ ಅರಸು ನಿಗಮದಿಂದ ಪ್ರತ್ಯೇಕಿಸಿ ನಿಗಮದಲ್ಲಿ ಕುಲಾಲ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನು ನೀಡುವ ಅವಕಾಶ ಇದ್ದರೂ ಸರಕಾರ ಆ ಪ್ರಯತ್ನ ನಡೆಸಿಲ್ಲ. ಈ ನಿರ್ಲಕ್ಷತೆಯನ್ನು ಕುಲಾಲ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದೆ.
-ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ರಾಜ್ಯ ಕಾರ್ಯಧ್ಯಕ್ಷ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ
* ಸಂದೀಪ್ ಸಾಲ್ಯಾನ್