ಕುಂಬಾರರು ರಾಜಕೀಯವಾಗಿ ಬೆಳೆಯಬೇಕಿದೆ: ಸುನೀಲ್ ಶಿವ ಮೂಲ್ಯ
ಶಿರಿಯಾರ(ಅ.೩೦): ಕುಲಾಲ ಸಮಾಜ ಸುಧಾರಕ ಸಂಘ (ರಿ)ಶಿರಿಯಾರ ಮೆಕ್ಕೆಕಟ್ಟು ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭ ಶಿರಿಯಾರ ಮೆಕ್ಕೆಕಟ್ಟುವಿನ ಗಾಂಧಿ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕುಂಬಾರರ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸುನೀಲ್ ಶಿವ ಮೂಲ್ಯ ಮಾತನಾಡುತ್ತಾ ‘ಕುಂಬಾರರು ಕರಾವಳಿಯಲ್ಲು ಸಾಕಷ್ಟು ಜನ ಇದ್ದು ಸುಶಿಕ್ಷಿತ ಸಮುದಾಯವಾಗಿ ಬೆಳೆಯುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಕುಂಬಾರ ಸಮುದಾಯದ ಯುವಕರು ರಾಜಕೀಯವಾಗಿ ಬೆಳೆಯಬೇಕಾದ ಅಗತ್ಯ ಪ್ರಸ್ತುತ ಸಮಾಜದಲ್ಲಿದೆ. ಹಳ್ಳಿಯ ಮೂಲೆ ಮೂಲೆಯಲ್ಲು ಚದುರಿ ಹೋಗಿರುವ ಎಲ್ಲ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಸಂಘಟಿಸುವ ಕೆಲಸ ಸಮುದಾಯ ಸಂಘಟನೆಗಳಿಂದ ಆಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತೆಂಕನಿಡಿಯೂರು ಸರಕಾರಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಮಾಜಶಾಸ್ತ್ರ ಸಂಯೋಜಕರಾದ ದುಗ್ಗಪ್ಪ ಕಜೆಕಾರ್ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ಉನ್ನತ ಶಿಕ್ಷಣ ಕಲಿಯುವುದರತ್ತ ಕುಂಬಾರ ಸುಮುದಾಯದ ವಿದ್ಯಾರ್ಥಿಗಳು ಮನಸ್ಸು ಮಾಡಬೇಕಿದೆ. ಆಧುನಿಕ ಜಗತ್ತಿನ ಸ್ಪರ್ಧಾತ್ಮಕತೆಯ ಸವಾಲುಗಳನ್ನು ಎದುರಿಸುವುದರತ್ತ ಕುಂಬಾರ ಸಮುದಾಯದ ಯುವಕರು ಬೆಳೆಯಬೇಕಾದ ಅಗತ್ಯವಿದೆ ಎಂದರು.
ಕುಲಾಲ ಸಮಾಜ ಸುಧಾರಕ ಸಂಘ ಶಿರಿಯಾರ ಮೆಕ್ಕೆಕಟ್ಟು ಇದರ ಅಧ್ಯಕ್ಷರು ‘ಅಣ್ಣು’ ಸಿನಿಮಾದ ನಿರ್ಮಾಪಕರಾದ ರಾಘವೇಂದ್ರ ಶಿರಿಯಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ದ.ಕ. ಜಿಲ್ಲಾಧ್ಯಕ್ಷರಾದ ಜಯೇಶ್ ಕುಲಾಲ್, ಪೆರ್ಡೂರಿನ ಕುಂಬಾರರ ಗುಡಿಕೈಗಾರಿಕ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಕುಲಾಲ್ ಬ್ರಹ್ಮಾವರ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು, ಕುಲಾಲ ಸಮಾಜ ಸುಧಾರಕ ಸಂಘ ಶಿರಿಯಾರ ಮೆಕ್ಕೆಕಟ್ಟು ಇದರ ನಿಯೋಜಿತ ಅಧ್ಯಕ್ಷರಾದ ಈಶ್ವರ ಕುಲಾಲ್ ನೈಲಾಡಿ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸತೀಶ್ ಕುಲಾಲ್ ನಡೂರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಅಣ್ಣಪ್ಪ ಕುಲಾಲ್ ಶಿರೂರು, ಯಕ್ಷಗಾನ ಪ್ರಸಂಗಕರ್ತ ಸುರೇಶ್ ಕುಲಾಲ್ ಹಂದಿಗೆದ್ದೆ, ಕಿರುತೆರೆ ನಟಿ ನೇತ್ರಾ ವಡ್ಡರ್ಸೆ, ಬಿಜೆಪಿ ಜಿಲ್ಲಾ ಯುವಮೋರ್ಚಕ್ಕೆ ಸದಸ್ಯರಾಗಿ ಆಯ್ಕೆಯಾದ ಸತೀಶ್ ಕುಲಾಲ್ ನಡೂರು, ಬಿಜೆಪಿ ತಾಲೂಕು ಯುವಮೋರ್ಚಕ್ಕೆ ಸದಸ್ಯರಾಗಿ ಆಯ್ಕೆಯಾದ ಮಹೇಶ್ ಕುಲಾಲ್ ನಡೂರು ಅವರನ್ನು ಗುರುತಿಸಲಾಯಿತು.
ಸಂಘದ ಕೋಶಾಧಿಕಾರಿ ರವೀಂದ್ರ ಕುಲಾಲ್ ಶಿರಿಯಾರ ಸ್ವಾಗತಿಸಿದರು. ಸದಸ್ಯರಾದ ಉದಯ್ ಕುಲಾಲ್ ಶಿರಿಯಾರ ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.