ಕುಂದಾಪುರ(ಅ.೨೫): ಸಾವಯವ ಕೃಷಿಕ, ಕುಂದಗನ್ನಡ ಜನಪದ ಕಲಾವಿದ ಬೇಳೂರು ಕನ್ನಡಜಡ್ಡು ನಿವಾಸಿ ಸೂರ ಕುಲಾಲ್ (೮೫) ಅಸೌಖ್ಯದಿಂದ ಇತ್ತೀಚೆಗೆ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ದೇಸಿ ಕಲೆಗಳು ನಾಶವಾಗುತ್ತಿರುವ ಕಾಲಘಟ್ಟದಲ್ಲಿ ಸಂಸ್ಕೃತಿಯ ಭಾಗವಾಗಿರುವ ಹಾಗೂ ಕುಂದಗನ್ನಡ ಗ್ರಾಮೀಣ ಸೊಗಡಿನ ಕಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನಗೈದಿರುವ ಇವರು ಗತಕಾಲದ ಕೃಷಿ ಸಂಪ್ರದಾಯದಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿರುವ ಅಕ್ಕಿಮುಡಿ ಹಾಗೂ ಭತ್ತದ ಕಣಜ (ತಿರಿ) ಕಟ್ಟುವ ಕಾಯಕದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದರು. ಬೇಳೂರು ಪರಿಸರದಲ್ಲಿ ನಿರ್ಮಾಣವಾಗುತ್ತಿದ್ದ ಹುಲ್ಲಿನ ಮನೆಯ ಮೇಲ್ಛಾವಣಿಗೆ ಹುಲ್ಲು ಹೊದಿಸುವ ಕಾರ್ಯದಲ್ಲೂಯೂ ಇವರು ನೈಪುಣ್ಯತೆಯನ್ನು ಹೊಂದಿದ್ದು, ಈ ಭಾಗದಲ್ಲಿ ಪ್ರಸಿದ್ದರಾಗಿದ್ದರು.
ಹಲವು ವರ್ಷಗಳಿಂದ ದೇಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪರಿಚಾರಕರಾಗಿ ಸೇವೆಸಲ್ಲಿಸಿದ್ದ ಅವರು ಧಾರ್ಮಿಕವಾಗಿ ಆಹೋರಾತ್ರಿ ಕುಣಿತ ಭಜನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಇತರರಿಗೂ ಮಾರ್ಗದರ್ಶಕರಾಗಿದ್ದರು. ಸಂಪ್ರದಾಯದಂತೆ ಶ್ರೀರಾಮ ನವಮಿಯ ದಿನ ಗ್ರಾಮದಲ್ಲಿ ಧಾರ್ಮಿಕ ಭಾವನೆಯನ್ನು ಮೂಡಿಸುವ ನಿಟ್ಟಿನಿಂದ ಹನುಮ ವೇಷ ಧರಿಸುತ್ತಿದ್ದರು. ಸೂರ ಕುಲಾಲ್ ಅವರು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಉಪಾಧ್ಯಕ್ಷರಾದ ಹಾಗೂ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘದ ಕರಾವಳಿ ವಿಭಾಗದ ಅಧ್ಯಕ್ಷರಾದ ಮಹಾಬಲ ಕುಲಾಲ್ ನೀರುಮಾರ್ಗ ಇವರ ಹಿರಿಯ ಸಹೋದರರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.