ಮಂಗಳೂರು(ಅ. ೨೧) : ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಸಂಸಾರ ನಿಭಾಯಿಸಲು ಕಷ್ಟಪಡುವ ಕೂಲಿ ಕಾರ್ಮಿಕ ದಂಪತಿ, ಇದೆಲ್ಲದರ ನಡುವೆ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಮನೆಯ ಯಜಮಾನನೇ ಮಾರಣಾಂತಿಕ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿ ದುಡಿಯಲಾಗದ ಸ್ಥಿತಿ ತಲುಪಿದ್ದಾರೆ. ಚಿಕಿತ್ಸೆಯ ವೆಚ್ಚ, ಮಕ್ಕಳ ಶಿಕ್ಷಣ, ದೈನಂದಿನ ಖರ್ಚಿಗಾಗಿ ಇತರರನ್ನು ಆಶ್ರಯಿಸಬೇಕಾದ ದೈನೇಸಿ ಸ್ಥಿತಿಯನ್ನು ನೆನೆದು ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಬಡ ದಂಪತಿ ಕಣ್ಣೀರಿಡುತ್ತಿದ್ದಾರೆ.
ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ವಾಸವಾಗಿರುವ ಕುಲಾಲ ಸಮುದಾಯಕ್ಕೆ ಸೇರಿರುವ ದಾಮೋದರ ಮೂಲ್ಯ-ಲೀಲಾವತಿ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಮೊದಲ ಮಗಳು ದಾಕ್ಷಿಣಿ (೨೦) ಅಂತಿಮ ಬಿ.ಕಾಂ ವಿದ್ಯಾರ್ಥಿನಿ, ಎರಡನೇಯವಳು ಮಲ್ಲಿಕಾ (೧೯) ದ್ವಿತೀಯ ಬಿ.ಎಯಾದರೆ ಕೊನೆಯವಳು ಅರ್ಚನಾ (೧೬) ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಸದಾ ಚಟುವಟಿಕೆಯಿಂದಿದ್ದು, ಮೇಸ್ತ್ರಿ ಕೆಲಸ ಮಾಡುತ್ತಾ ಕುಟುಂಬ ಸಲಹುತ್ತಿದ್ದ ದಾಮೋದರ(48) ಅವರು ವರ್ಷಗಳ ಹಿಂದೆ ಹಠಾತ್ ಅನಾರೋಗ್ಯಕ್ಕೆ ತುತ್ತಾದರು. ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಲಾಗಿ, ವೈದ್ಯರು ಹೇಳಿದ ಮಾತನ್ನು ಕೇಳಿ ಆಕಾಶ ತಲೆಯ ಮೇಲೆ ಕುಸಿಯುವುದೊಂದೇ ಬಾಕಿ. ಅವರಿಗೆ ಬ್ರೈನ್ ಟ್ಯೂಮರ್ (ವೈದ್ಯಕೀಯ ಭಾಷೆಯಲ್ಲಿ low grade glioma) ಜೀವಕ್ಕೆ ಅಪಾಯ ತರುವಂತಹ ಕಾಯಿಲೆಯಾಗಿದ್ದು, ಪ್ರಾರಂಭದ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದ ಫಲವಾಗಿ ಸಂಪೂರ್ಣ ಗುಣಪಡಿಸುವುದು ಅಸಾಧ್ಯವಾಗಿದೆ. ಆದರೆ ನಿರಂತರ ಔಷಧಿ ಸೇವನೆಯಿಂದ ಖಾಯಿಲೆಯನ್ನು ಹತೋಟಿಗೆ ತರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಂಗಳೂರು ಕೆಎಂಸಿ ಆಸ್ಪತ್ರೆ ವೈದ್ಯರ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಮೋದರ ಅವರ ಪತ್ನಿ ಲೀಲಾವತಿ ಬೀಡಿ ಕಟ್ಟಿ ಬರುವ ಅಲ್ಪ ಆದಾಯ ಒಪ್ಪೊತ್ತಿಗೆ ಸಾಕಾಗುವುದಿಲ್ಲ. ಸಂಸಾರದ ರಥವನ್ನು ಎಳೆಯುವುದಕ್ಕೆ ಈ ಸಂಸಾರ ಪಡುವ ಕಷ್ಟದ ಮೇಲೆ ಅನಾರೋಗ್ಯ ಮುತ್ತಿಕ್ಕಿ ಇವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸಂಕಷ್ಟದಲ್ಲಿ ಬದುಕು ಸವೆಸುತ್ತಿರುವ ಇವರು ಹಣದ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ.
ದಾಮೋದರ ಅವರ ಆರೋಗ್ಯವಾಗಿದ್ದಾಗ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದ್ದು, ಇದೀಗ ಸಾಲದ ಕಂತು ಕಟ್ಟಲೂ ಅಸಾಧ್ಯವಾಗಿದೆ. ಊಟ, ಬಟ್ಟೆ, ಬರೆಗಳಿಗೇ ತತ್ವಾರವಾಗಿರುವಾಗ ಅವರ ಔಷಧಿಗೆ ದುಡ್ಡು ಹೊಂದಿಸಲು ಸಾಧ್ಯವೇ ? ಬಡಕುಟುಂಬ ಬೇರೆ ದಾರಿ ಕಾಣದೆ ಸಹೃದಯ ಬಾಂಧವರಲ್ಲಿ ತಮ್ಮ ಅಳಲನ್ನು ತೋಡಿಕೊಂಡು ಮನೆಯೊಡೆಯನನ್ನು ಬದುಕಿಸಿಕೊಡಿ ಎಂದು ಮೊರೆಯಿಡುತ್ತಿರುವ ದೃಶ್ಯ ಕಲ್ಲು ಹೃದಯವನ್ನು ಕರಗಿಸುತ್ತದೆ.
ಸಹೃದಯಿ ಜಾತಿ ಬಾಂಧವರು, ದಾನಿಗಳು, ಸಂಘ-ಸಂಸ್ಥೆಗಳು ತಮ್ಮ ಕೈಲಾದ ಸಹಾಯ ನೀಡಿದಲ್ಲಿ ಬಡ ಕುಟುಂಬಕ್ಕೆ ಅಲ್ಪ ನೆಮ್ಮದಿಯಾದರೂ ಸಿಕ್ಕೀತು. ಧನಸಹಾಯ ಮಾಡಲಿಚ್ಛಿಸುವವರು ದಾಮೋದರ ಅವರ ಹಿರಿ ಮಗಳು ದಾಕ್ಷಿಣಿ ಅವರ ಹೆಸರಲ್ಲಿರುವ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಬಹುದು ಅಥವಾ ಅವರ ಕುಟುಂಬವನ್ನು ಮೊಬೈಲ್ 99027 49796 ಮೂಲಕವೂ ಸಂಪರ್ಕಿಸಬಹುದು.
Ms. Dakshini
SB Account no: 2019 429 2309
State Bank of India
Branch Kinnigoli (Moorukaveri)
Ifsc code: SBIN0007903