ಬಂಟ್ವಾಳ : ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಮುಂದಿನ ಜೀವನದಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಮರ್ತಾಜೆ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಬಿ.ಸಿ.ರೋಡ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಹಿಂದುಳಿದ ವರ್ಗದವರಿಗೆ ವಿದ್ಯೆಯೇ ರಕ್ಷಣೆ ಒದಗಿಸುವುದು . ಯಾವುದೇ ಶಿಫಾರಸು ಲಂಚ-ರುಷುವತ್ತುಗಳನ್ನು ನಂಬದೆ ಪ್ರತಿಭೆಗೆ ಹೆಚ್ಚಿನ ಮಹತ್ವ ನೀಡಿ ಕಠಿಣ ಪರಿಶ್ರಮದಿಂದ ಉನ್ನತ ಮಟ್ಟ ತಲುಪಲು ಸಾಧ್ಯವಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಯೇ ದೊರಕುತ್ತದೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಬಿ.ಸತೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ರವರವನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 25 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಬಂಗೇರ, ಬಂಟ್ವಾಳ ಕುಲಾಲ ಸಂಘದ ಕಾರ್ಯಾಧ್ಯಕ್ಷ ಎ.ಲಿಂಗಪ್ಪ , ಮಹಿಳಾ ವಿಭಾಗದ ಅಧ್ಯಕ್ಷೆ ಜಲಜಾಕ್ಷಿ ಕುಲಾಲ್, ಸೇವಾ ದಳಪತಿ ಯಾದವ ಅಗ್ರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಎಂ.ಕುಲಾಲ್ ಸ್ವಾಗತಿಸಿ ಪ್ರಸ್ತಾಪಿಸಿದರು. ಕಾರ್ಯದರ್ಶಿ ಮನೋಹರ್ ನೇರಂಬೋಳು ವಂದಿಸಿದರು. ಮಾಜಿ ಅಧ್ಯಕ್ಷ ಬಿ.ಲಿಂಗಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ : ಸಂದೀಪ್ ಸಾಲ್ಯಾನ್