ಮಂಗಳೂರು (ಅ.೦೮) : ಮಹಾನ್ ದಾರ್ಶನಿಕರ ಹೆಸರಿನಲ್ಲಿ ರಾಜ್ಯ ಸರ್ಕಾರ 62 ಜಯಂತಿಗಳನ್ನು ಆಚರಿಸುತ್ತಿದೆ. ಈ ಜಯಂತಿಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು ಸರ್ವಜ್ಞ ಜಯಂತಿ ಬಗ್ಗೆ ಉದಾಸೀನ ಮನೋಭಾವ ಹೊಂದಿದ್ದಾರೆ. ಹೀಗಾಗಿ ಈ ಆಚರಣೆಗೆ ಜಿಲ್ಲಾಡಳಿತವನ್ನು ಒತ್ತಾಯಿಸುವ, ಪೂರ್ವಭಾವಿ ಸಿದ್ಧತೆ ನಡೆಸುವ ಕೆಲಸವನ್ನು ಈಗಿಂದೀಗಲೇ ಆರಂಭಿಸಬೇಕು ಎಂದು ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ಹೇಳಿದ್ದಾರೆ.
ಕುಂಬಾರರು ಸಂಘಟಿತರಾಗದಿರುವುದೇ ರಾಜಕಾರಣಿಗಳ ಅಸಡ್ಡೆಗೆ ಮುಖ್ಯ ಕಾರಣ. ಅವರೆಲ್ಲರೂ ಒಂದು ಚೌಕಟ್ಟಿಗೆ ಬಂದು ನಿಂತಾಗ ಸರ್ಕಾರವೂ ಜನಾಂಗದತ್ತ ತಿರುಗಿ ನೋಡುತ್ತದೆ. ಆಗ ಆರ್ಥಿಕ, ಶೈಕ್ಷಣಿಕ ನೆಲೆ ಹಾಗೂ ಮೀಸಲಾತಿ ಪಡೆಯಲು ಸಾಧ್ಯವಾಗುವುದು. 2014 ರಲ್ಲಿ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ಹೋರಾಟದ ಫಲವಾಗಿ ಸರಕಾರವು ಸರ್ವಜ್ಞ ಜಯಂತಿಯನ್ನು ಆಚರಿಸಲು ಘೋಷಿಸಿದೆ. ಪ್ರತಿ ವರ್ಷ ಪ್ರತೀ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರ್ವಜ್ಞ ಜಯಂತಿ ಆಚರಿಸುವಂತೆ ಸರಕಾರದ ನೀಡಿದ ಆದೇಶಕ್ಕೆ ಎಲ್ಲಾ ಕಡೆಗಳಲ್ಲಿ ಬೆಲೆ ನೀಡುತ್ತಿಲ್ಲ. ಕರಾವಳಿಯಲ್ಲಿ ಮಂಗಳೂರು ಜಿಲ್ಲೆಯಲ್ಲಿ ಮಾತ್ರ ಸಂಘಟನೆಗಳ ಒತ್ತಡ ದಿಂದ ಕಳೆದ ಎರಡು ವರ್ಷಗಳಲ್ಲಿ ಆಚರಣೆ ನಡೆದಿವೆ. ಆದರೆ ಉಡುಪಿ, ಕಾರವಾರ ಜಿಲ್ಲೆಯಲ್ಲಿ ಸರ್ವಜ್ಞ ಜಯಂತಿ ನಡೆದಿಲ್ಲ. ಪ್ರತಿವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿ ಆಚರಣೆ ನಡೆಸುವ ನಿಟ್ಟಿನಲ್ಲಿ ಸಂಘಟನೆಗಳು ಕಾರ್ಯಕ್ರಮಕ್ಕೆ ಈಗಲೇ ತಯಾರಿ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಬೇಕು. ಸರಕಾರ ಪ್ರತೀ ಜಿಲ್ಲೆ ಹಾಗು ತಾಲೂಕು ಮಟ್ಟದ ಆಚರಣೆಗೆಂದು ಹಣದ ಒಂದು ನಿರ್ದಿಷ್ಟ ಮೊತ್ತವನ್ನು ನೀಡುತ್ತದೆ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಡಿಸಿ ಅಥವಾ ಎಸಿ ಯ ಮೂಲಕ ಆಚರಿಸಲು ಒತ್ತಡ ಹೇರುವ ಕಾರ್ಯ ನಡೆಸುವ ಮೂಲಕ ಕಷ್ಟ ಪಟ್ಟು ಪಡೆದದ್ದನ್ನು ಕುಲಾಲ-ಕುಂಬಾರ ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕು ಅಲ್ಲದೆ ಎಲ್ಲಾ ವರ್ಗದ ಜನರು ಸರ್ವಜ್ಞ ಜಯಂತಿಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸುವಂತೆ ಮಾಡಬೇಕಾಗಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ಸಲಹೆ ನೀಡಿದ್ದಾರೆ.