ಮಂಗಳೂರು : ಹಿಮಾಲಯದಿಂದ ಮಂಗಳೂರಿಗೆ 5,340 ಕಿ.ಮೀ. ಬೈಕ್ನಲ್ಲಿಯೇ ಏಕಾಂಗಿಯಾಗಿ ಪ್ರಯಾಣಿಸಿ 23 ದಿನಗಳಲ್ಲಿ ತಲುಪಲು ಸಾಧ್ಯವೇ ? ಹೌದು, ಮಂಗಳೂರಿನ ಯುವಕ ಅರುಣ್ ಕುಮಾರ್ ಕುಲಾಲ್ ಇಂತಹದೊಂದು ಸಾಧನೆ ಮಾಡಿದ್ದಾರೆ.
ಬೈಕ್ ರೈಡಿಂಗ್ ನಲ್ಲಿ ಇರುವ ಅಧಮ್ಯ ಪ್ರೀತಿ, ಹವ್ಯಾಸ ಇಂಥ ಸಾಹಸ ಮಾಡಲು ಪ್ರೇರಣೆ. 29ರ ಹರೆಯದ ಅರುಣ್ ಕುಮಾರ್ ಫರಂಗಿಪೇಟೆಯ ಸಮೀಪದ ದೇವು ಮೂಲ್ಯ- ಕಮಲಾಕ್ಷಿ ದಂಪತಿಯ ಪುತ್ರ. ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗಿ. ಎಳವೆಯಿಂದಲೇ ಅವರು ಬೈಕ್ ರೈಡಿಂಗ್ನಲ್ಲಿ ಆಸಕ್ತಿ ಬೆಳೆಸಿ, ಭಾರತದ ಆನೇಕ ಕಡೆಗಳಲ್ಲಿ ಸಂಚರಿಸಿದ ಅನುಭವವನ್ನು ಹೊಂದಿದ್ದಾರೆ.
ಹಿಮಾಲಯ ಬೈಕ್ ರೈಡಿಂಗ್ ನಲ್ಲಿ ಪ್ರತಿನಿತ್ಯ ಸರಿ ಸುಮಾರು 400-500 ಕಿ.ಮೀ. ದೂರ ಪ್ರಯಾಣಿಸಿ ಈ ಸಾಹಸ ಮಾಡಿದ್ದಾರೆ. ಬೈಕನ್ನು ಮೊದಲೇ ಚಂಡೀಗಢಕ್ಕೆ ರವಾನಿಸಿದ್ದರು. ಅಲ್ಲಿಂದ ಬಿಂದಾಸ್ ಆಗಿ ಬೈಕ್ ಸವಾರಿ ಆರಂಭಿಸಿದ್ದಾರೆ. ಚಂಡೀಗಢಕ್ಕೆ ವಿಮಾನದಲ್ಲಿ ಪ್ರಯಾಣಿಸಿ ಸೆಪ್ಟೆಂಬರ್ ೩ರಂದು ತನ್ನ KTM Duke 200 ಬೈಕ್ನಲ್ಲಿ ಪ್ರಯಾಣ ಆರಂಭಿಸಿ ಅಲ್ಲಿಂದ ಭಿಲಾಸ್ ಪುರ್, ಮನಾಲಿ, ಜಿಸ್ಪಾ, ರಾಂತ್ಸೆ ಪಟ್ಟಣ ಹಾದುಹೋಗಿ 23 ದಿನಗಳಲ್ಲಿ ಅಂದರೆ ಸೆ. ೨೫ರಂದು ಮಂಗಳೂರು ತಲುಪಿದ್ದಾರೆ.
ಭಾರತದ ಪ್ರಮುಖ ಭೂಭಾಗವನ್ನು ನೋಡುವುದು, ಅಲ್ಲಿನ ಜನರೊಡನೆ ಬೆರೆಯುವುದು ಉದ್ದೇಶವಾಗಿತ್ತು. `ಇದೊಂದು ವಿಶಿಷ್ಟ ಅನುಭವ. ಇದನ್ನು ಪದಗಳಲ್ಲಿ ವರ್ಣಿಸುವುದು ಸುಲಭವಲ್ಲ. ಬೈಕ್ ರೈಡಿಂಗ್ ಅತ್ಯಂತ ಕಠಿಣ ಸವಾಲು. ಲಾಂಗ್ ಡ್ರೈವ್ ಮಜಾವನ್ನು ಸ್ವತಃ ಅನುಭವಿಸಿದರೆ ಮಾತ್ರ ತಿಳಿಯಬಹುದು’ ಎನ್ನುತ್ತಾರೆ.
ಕಾಶ್ಮೀರದ ಕಣಿವೆಯಲ್ಲಿ ಮನಸ್ಸು ಮುಗುಳ್ನಗುತ್ತಾ ಉಸಿರಾಡಿ,ಲೇಹ್,ಲಡಾಕ್ ಮತ್ತು ಕಾರ್ಗೀಲ್ಗಳನ್ನು ಸುತ್ತಾಡಿ ನಂತರ ಊರು ತಲುಪಿದಾಗ ಮನಸ್ಸಿಗೆ ಏನೋ ಕಳೆದುಕೊಂಡಂತ ಕಳವಳ. ಮತ್ತೆ ಬರುವೆಯಾ ಎಂದು ಹೇಳಿ ಕೈಬೀಸಿ ಬಂದ ಊರುಗಳು ಕರೆಯುತ್ತಿವೆ ಅನಿಸುತ್ತಿತ್ತು.
ಕಳೆದ ೨೩ ದಿನಗಳ ಪ್ರತಿಯೊಂದು ಕ್ಷಣಗಳು, ಲೆಕ್ಕವಿಡದಷ್ಟು ಹೊಸ ಗೆಳೆಯರು ಮತ್ತು ನೆನಪುಗಳು. ಕಣ್ಣ ಮುಂದೆ ಆ ಎಂದೂ ಮುಗಿಯದ ರೋಮಾಂಚಕ ರಸ್ತೆಗಳು.. ನಾನು ಕಂಡಂತೆ ನಮ್ಮ ದೇಶ ನಮ್ಮ ಊಹೆಗಿಂತ ಮಿಗಿಲಾಗಿ ಸುಂದರವಾಗಿದೆ. ನೈಸರ್ಗಿಕವಾಗಿ ಇದು ನಿಜಕ್ಕೂ ಸ್ವರ್ಗ’ ಎಂದು ತಮ್ಮ ಅನುಭವವನ್ನು ವಿವರಿಸುತ್ತಾರೆ.