ವೃದ್ಧ ಚೀನಿ ಮಹಿಳೆಯೊಬ್ಬರು ಪ್ರತಿದಿನ ನದಿಯಿಂದ ಎರಡು ದೊಡ್ಡ ಮಡಕೆಗಳಲ್ಲಿ ನೀರು ತುಂಬಿಸಿ ಹೆಗಲ ಮೇಲೆ ಕಟ್ಟಿಗೆ ಕಟ್ಟಿದ ಹಗ್ಗದಲ್ಲಿರಿಸಿಕೊಂಡು ಬರುತ್ತಿದ್ದರು. ಆದರೆ ಒಂದು ಮಡಕೆಯು ಬಿರುಕು ಬಿಟ್ಟಿತ್ತು ಮತ್ತು ಇನ್ನೊಂದು ಮಡಕೆಯು ಸಂಪೂರ್ಣ ನೀರನ್ನು ತರಲು ಯೋಗ್ಯವಾಗಿತ್ತು. ಪ್ರತಿದಿನ ಮಹಿಳೆಯು ತೊರೆಯಿಂದ ನೀರು ಹೊತ್ತು ಮನೆಗೆ ತಲುಪುವಾಗ ಅರ್ಧ ಮಡಕೆ ನೀರು ಮಾತ್ರ ತರಲು ಸಾಧ್ಯವಾಗುತ್ತಿತ್ತು. ಹೀಗಿರುತ್ತಾ ತುಂಬಿದ ಮಡಕೆಗೆ ಬಿರುಕು ಬಿಟ್ಟ ಮಡಕೆಯನ್ನು ಕಾಣುವಾಗ ತಾತ್ಸರದ ಭಾವನೆ ಬೆಳೆಯಿತು. ಆದರೆ ಬಿರುಕುಗೊಂಡ ಮಡಕೆ ತನ್ನ ಬಗ್ಗೆ ತಾನೇ ಹಳಿದುಕೊಳ್ಳುತ್ತಿತ್ತು.
ಎರಡು ವರ್ಷಗಳ ಕಾಲ ಇದೇ ಕ್ರಮ ಮುಂದುವರಿಯಿತು. ಬಿರುಕು ಬಿಟ್ಟ ಮಡಕೆ ಮೌನ ಮುರಿದು ಮಹಿಳೆಯ ಬಳಿ ಮಾತನಾಡಲು ತೀರ್ಮಾನಿಸಿತು.
“ನನಗೆ ನನ್ನ ಬಗೆ ನಾಚಿಕೆ ಯಾಗುತ್ತಿದೆ. ಒಂದು ಭಾಗದಲ್ಲಿ ಬಿರುಕು ಬಿಟ್ಟಿರುವ ಕಾರಣ ಸಂಪೂರ್ಣ ನೀರು ನನಗೆ ಹಿಡಿದಿಡಲಾಗುತ್ತಿಲ್ಲ. ಮನೆಗೆ ಬರುವಾಗ ಅರ್ಧ ಮಡಕೆ ನೀರು ತರುವಷ್ಟು ಯೋಗ್ಯತೆ ಮಾತ್ರ ನನಗಿದೆ” ಎಂದು ಮಡಕೆ ತನ್ನ ಗೋಳನ್ನು ಹೇಳಿಕೊಂಡಿತು.
ಆಗ ವೃದ್ಧ ಮಹಿಳೆ ನಗುತ್ತಾ ಹೀಗೆ ಉತ್ತರಿಸಿದಳು,
“ನಾನು ನೀರು ಹೊತ್ತು ಬರುವಾಗ ನಿನ್ನ ಭಾಗದಲ್ಲಿ ಸುಂದರ ಹೂವುಗಳು ಅರಳಿ ನಿಂತಿರುವುದನ್ನು, ಸಂಪೂರ್ಣ ನೀರು ತರುವ ಮಡಕೆಯ ಭಾಗದಲ್ಲಿ ಏನೂ ಇಲ್ಲದಿರುವುದನ್ನು ನೀನು ಗಮನಿಸಲಿಲ್ಲವೇ? ನೀನು ನಿನ್ನ ಬಗ್ಗೆ ಜಿಗುಪ್ಸೆ ಪಟ್ಟುಕೊಂಡಿದ್ದೀಯ ಎಂದು ಯಾವಾಗ ನನಗೆ ಅರಿವಾಯ್ತೋ ಆ ದಿನವೇ ನಾನು ನಿನ್ನ ಮಾರ್ಗದ ಬಳಿ ಹೂವಿನ ಗಿಡದ ಬೀಜಗಳನ್ನು ಬಿತ್ತಿದೆ. ನಿನ್ನಿಂದ ಸುರಿಯುತ್ತಿದ್ದ ಹನಿ ಹನಿ ನೀರು ಇಂದು ಸುಂದರ ಹೂದೋಟವಾಗಿದೆ. ಅಲ್ಲಿಂದ ಸುಂದರ ಹೂವುಗಳನ್ನು ಕಿತ್ತು ಮನೆಯಲ್ಲಿ ಶೃಂಗರಿಸಿ ಸುಗಂಧಮಯ ವಾತಾವರಣ ನನ್ನ ಮನೆಯಲ್ಲಿ ಆವರಿಸಿದೆ. ನಿನ್ನ ಕೊಡುಗೆಯಿಂದಲೇ ಇಂದು ನನ್ನ ಮನಸ್ಸು ಅರಳಿ ನಿಂತ ಹೂಗಳ ತಲೆದೂಗುವಿಕೆಯಲ್ಲಿ ಸಂತಸ ಪಡುತ್ತಿದೆ” ಎಂದಳು.
ಬಿರುಕು ಬಿಟ್ಟ ಮಡಕೆ ಅರಳಿ ನಿಂತ ಹೂಗಳನ್ನೆಲ್ಲಾ ನೋಡಿ ಸಂತೋಷದಿಂದ ಕೇಕೆ ಹಾಕಿತು.
ನೀತಿ: ಪ್ರತಿಯೊಬ್ಬರಲ್ಲಿಯೂ ನ್ಯೂನ್ಯತೆಗಳಿವೆ. ನಾವೆಲ್ಲರೂ ಬಿರುಕು ಬಿಟ್ಟ ಮಡಕೆಗಳಾಗಿರಬಹುದು. ಆದರೆ ಭಗವಂತನ ಸಹಾಯದಿಂದ ನಾವು ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಮುಂದಾಗಬೇಕು. ನಮ್ಮ ನ್ಯೂನತೆಗಳನ್ನು, ಸಾಮರ್ಥ್ಯಗಳನ್ನು ಅರಿತು ಅವುಗಳೆರಡನ್ನು ಬೆರೆಸಿ ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಪ್ರಯತ್ನಿಸಬೇಕು.
ಬಿರುಕು ಬಿಟ್ಟ ಮಡಕೆ (ನೀತಿ ಕಥೆ)
story and poems
2 Mins Read