ಕುಂದಾಪುರ(ಸೆ.೨೮): ಆಶ್ರಯ ಮನೆ ಹಂಚಿಕೆ ವಿವಾದದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಲಾಲ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಮೊಳಹಳ್ಳಿ ದಿನೇಶ್ ಹೆಗ್ಡೆ, ಹೊರ್ನಾಡಿ ಉದಯ ಕುಮಾರ್ ಶೆಟ್ಟಿ, ಮಾಸ್ತಿಕಟ್ಟೆ ಉದಯ ಶೆಟ್ಟಿ, ವಾಣಿ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಹಲ್ಲೆ ನಡೆಸಿರುವ ಆರೋಪಿಗಳು.
ಗ್ರಾಮ ಪಂಚಾಯತ್ ಅಧ್ಯಕ್ಷ ಬೆಳಗೋಡು ಉದಯ ಕುಲಾಲ್ ಅವರು ಆಶ್ರಯ ಮನೆ ಹಂಚಿಕೆ ಕುರಿತಂತೆ ವಿಶೇಷ ಗ್ರಾಮ ಸಭೆಗೆ ಆಹ್ವಾನ ಮಾಡಿದ್ದರು.
ಮೊಳಹಳ್ಳಿ ಗ್ರಾಮ ಪಂಚಾಯಿತಿಗೆ ಮಂಜೂರಾಗಿದ್ದ 12 ಮನೆಗಳ ವಿತರಣೆ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಮನೆ ಹಂಚಿಕೆಯ ಕುರಿತಂತೆ ಅಧ್ಯಕ್ಷ ಹಾಗೂ ಸದಸ್ಯರೊಬ್ಬರ ನಡುವೆ ಕಾವೇರಿದ ಚರ್ಚೆ ನಡೆದಿತ್ತು.
ಆ ಬಳಿಕ ತಮ್ಮ ಕಚೇರಿಯಲ್ಲಿ ಇದ್ದರು. ಈ ಸಂದರ್ಭ ಅಲ್ಲಿಗೆ ನುಗ್ಗಿದ ಆರೋಪಿಗಳು ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದು, ಇದಕ್ಕೆ ಉದಯ ಪ್ರತಿರೋಧ ಒಡ್ಡಿ ತಪ್ಪಿಸಿಕೊಂಡರು ಎನ್ನಲಾಗಿದೆ. ಆ ಬಳಿಕ ನಡೆದ ಹೊಯ್ ಕೈಯಲ್ಲಿ ಉದಯ ಕುಲಾಲ್ ಅವರಿಗೆ ಗಾಯವಾಗಿದ್ದು ಅವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉದಯ ಅವರು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರಾಗಿದ್ದು, ಹಲ್ಲೆ ನಡೆಸಿದವರು ಕಾಂಗ್ರೆಸ್ ಬೆಂಬಲಿಗರು ಎಂದು ತಿಳಿದು ಬಂದಿದೆ.
ಮೊಳಹಳ್ಳಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಮೊದಲಾದ ಅವ್ಯವಹಾರಗಳು ನಡೆಯುತ್ತಿದೆ. ಇನ್ನು ಇಸ್ಫೀಟ್ ಕ್ಲಬ್ ನಡೆಸಲು ಪರವಾನಿಗೆ ನೀಡಲು ಕೇಳಿಕೊಳ್ಳಲಾಗಿದ್ದು ಇದ್ಯಾವುದಕ್ಕೂ ಸಹಕರಿಸಿದ ಹಿನ್ನೆಲೆ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ.
ಬಂದ್ ಗೆ ಕರೆ :
ಉದಯ ಕುಲಾಲ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಸೆ.೨೮ ರಂದು ಮೊಳಹಳ್ಳಿ ಪಂಚಾಯತ್ ವ್ಯಾಪ್ತಿಯಳ್ಳಿ ಬಂದ್ ಕರೆ ನೀಡಲಾಗಿದೆ. ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟನಾ ಸಭೆಯೂ ನಡೆದಿದೆ.
ಘಟನೆಯನ್ನು ಕರಾವಳಿ ಕುಲಾಲ ಕುಂಬಾರ ವೇದಿಕೆಯ ಸ್ಥಾಪಕ ಅಣ್ಣಯ್ಯ ಕುಲಾಲ್, ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು ಖಂಡಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.