ಕೋಲಾರ: ‘ದೇಶದಲ್ಲಿ ಮನುಷ್ಯನ ಹುಟ್ಟಿನ ಜತೆಯೇ ಯಾರು ಶಿಫಾರಸು ಮಾಡದಿದ್ದರೂ ಜಾತಿ ಮತ್ತು ಕುಲ ಕಸುಬು ಬರುತ್ತದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಹೇಳಿದರು.
ಜಿಲ್ಲೆಯ ವಿವಿಧ ಜಾತಿ ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ, ಕಾಗುಣಿತ ದೋಷ ತಿದ್ದುಪಡಿ ಉದ್ದೇಶಕ್ಕಾಗಿ ಮನವಿ ಸಲ್ಲಿಸಲು ಹಾಗೂ ಅರ್ಜಿಗಳ ವಿಚಾರಣೆಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿಯು ಅಚಲ. ಇದಕ್ಕೆ ಚಲನೆ ಇಲ್ಲ. ದೇಶದ ವ್ಯವಸ್ಥೆಯಲ್ಲಿ ಜಾತಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ, ಕುಲಕಸುಬು ಬೇಕಾದರೆ ಬಿಡಬಹುದು. ಎಲ್ಲ ಸಣ್ಣ ಸಮಾಜಗಳ ಸದಸ್ಯರು ಬೆಂಗಳೂರಿನಲ್ಲಿನ ಆಯೋಗದ ಕಚೇರಿಗೆ ಬಂದು ಅಹವಾಲು ಹೇಳಿಕೊಳ್ಳಲು ಆಗುವುದಿಲ್ಲ. ಈ ಕಾರಣಕ್ಕಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ರೀತಿಯ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಾತಿ ಪ್ರಮಾಣಪತ್ರ ಪ್ರತಿಯೊಬ್ಬರಿಗೂ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಕೊಡದಿದ್ದರೆ ಅವರ ಭವಿಷ್ಯವೇ ಡೋಲಾಯಮಾನವಾಗುತ್ತದೆ. ಪ್ರಮಾಣಪತ್ರ ನೀಡಲು ಸಮುದಾಯದ ಜನಸಂಖ್ಯೆ ಮುಖ್ಯವಲ್ಲ. ಸಮುದಾಯದಲ್ಲಿ ಒಂದೇ ಕುಟುಂಬವಿದ್ದರೂ ಪ್ರಮಾಣಪತ್ರ ಕೊಡಲೇಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ವ್ಯಕ್ತಿ ತನ್ನ ಜಾತಿಯ ಬಗ್ಗೆ ಕೀಳರಿಮೆ ಇಟ್ಟುಕೊಂಡು ಬೇರೆ ಜಾತಿಯ ಹೆಸರು ಹೇಳಬಾರದು. ಅರ್ಜಿದಾರರ ಬಳಿ ಜಾತಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆಪತ್ರಗಳು ಇಲ್ಲದಿದ್ದರೂ ತಹಶೀಲ್ದಾರ್ಗಳು ಅರ್ಜಿದಾರರ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮತ್ತು ನೆರೆಹೊರೆಯವರ ವಿಚಾರಣೆ ಮಾಡಿ ಪ್ರಮಾಣಪತ್ರ ನೀಡಬೇಕು. ಅರ್ಜಿದಾರರು ತಮ್ಮ ವಂಶವೃಕ್ಷ ಸಲ್ಲಿಸಿ ಜಾತಿ ಪ್ರಮಾಣಪತ್ರ ಪಡೆಯಬಹುದು ಎಂದರು.
ಅಧಿಕಾರಿಗಳ ಹಿಂದೇಟು: ಜಿಲ್ಲಾ ಉಪ್ಪಾರ ಜನಾಂಗದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ‘ಜಿಲ್ಲೆಯಲ್ಲಿ ಉಪ್ಪಾರ ಜಾತಿಯ ಜನಸಂಖ್ಯೆ ತುಂಬಾ ಕಡಿಮೆ ಇದೆ. ಜತೆಗೆ ಜಾತಿಯ ಜನ ಬಲಿಜಿಗ ಜನಾಂಗದೊಂದಿಗೆ ಗುರುತಿಸಿಕೊಂಡು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ನಾಯ್ಡು ಮತ್ತು ಬಲಿಜಿಗ ಸಮುದಾಯದ ಜನ ಉಪ್ಪಾರ ಜಾತಿಗೆ ಸೇರ್ಪಡೆಯಾಗಲು ಕೋರಿಕೆ ಮುಂದಿಟ್ಟಿದ್ದಾರೆ. ಆದರೆ, ಅಧಿಕಾರಿಗಳು ಅವರಿಗೆ ಉಪ್ಪಾರ ಜಾತಿಯ ಪ್ರಮಾಣಪತ್ರ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಸಾಕಷ್ಟು ಸಮಸ್ಯೆಯಾಗಿದೆ’ ಎಂದು ಅಧ್ಯಕ್ಷರ ಎದುರು ಅಳಲು ತೋಡಿಕೊಂಡರು.
ಪ್ರಾತಿನಿಧ್ಯ ಸಿಗುತ್ತಿಲ್ಲ: ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ‘ಸವಿತಾ, ಮಡಿವಾಳ ಹಾಗೂ ಕುಂಬಾರ ಜನಾಂಗಗಳನ್ನು ಪ್ರವರ್ಗ–2ಎ ಗೆ ಸೇರಿಸಲಾಗಿದೆ. ಆದರೆ, ಪ್ರವರ್ಗ– 2ಎನಲ್ಲಿ 160ಕ್ಕೂ ಹೆಚ್ಚು ಜಾತಿಗಳಿವೆ. ಹೀಗಾಗಿ ಸವಿತಾ, ಮಡಿವಾಳ ಹಾಗೂ ಕುಂಬಾರ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಾತಿನಿಧ್ಯ ಸಿಗುತ್ತಿಲ್ಲ. ಜತೆಗೆ ಪ್ರಬಲ ಜಾತಿಗಳ ಜತೆ ಸ್ಪರ್ಧೆ ಮಾಡಲು ಆಗುತ್ತಿಲ್ಲ’ ಎಂದು ಹೇಳಿದರು.
ಈ ಮೂರೂ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ, ರಾಜಕೀಯ ಹಾಗೂ ಶೈಕ್ಷಣಿಕ ಪ್ರಾತಿನಿಧ್ಯ ಮತ್ತು ಒಳ ಮೀಸಲಾತಿ ನೀಡಬೇಕು. ಜತೆಗೆ ಮೊರಾರ್ಜಿ ವಸತಿ ಶಾಲೆಗಳ ಮಾದರಿಯಲ್ಲಿ ಸಮುದಾಯದ ಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.