ಬೆಳ್ತಂಗಡಿ (ಸೆ.೨೫): ಕನಿಕರಿಸುವ ಹೃದಯಕ್ಕಿಂತ, ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ನಮ್ಮ ಯುವಕರ ತಂಡ ತೋರಿಸಿಕೊಟ್ಟಿದೆ. ಮಾನವೀಯತೆ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ `ಕುಲಾಲ್ ವರ್ಲ್ಡ್’ ಎಂಬ ಸಮಾನಮನಸ್ಕ ಯುವಕರನ್ನು ಹೊಂದಿರುವ ವಾಟ್ಸಪ್ ಗ್ರೂಪಿನ ಸದಸ್ಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ಇಂದಬೆಟ್ಟು ಗ್ರಾಮದ ತನಿಯಪ್ಪ ಮೂಲ್ಯ ಅವರಿಗೆ ಒಟ್ಟು ಒಂದು ಲಕ್ಷದ ಹನ್ನೊಂದು ಸಾವಿರದ ನೂರಾ ಹನ್ನೊಂದು ರೂ. (1,11,111 ) ಸಂಗ್ರಹಿಸಿ ನೀಡುವ ಮೂಲಕ ಅವರ ನೋವಿಗೆ ಆಸರೆಯಾಗಿದ್ದಾರೆ. ಆ ಮೂಲಕ ನಮ್ಮಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎಂದು ತೋರಿಸಿಕೊಟ್ಟಿದ್ದಾರೆ.
`ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು ಹಾಗೂ ಅಡ್ಮಿನ್ ಗಳಾದ ನರೇಶ್ ಕೆ ಟಿ, ಹೇಮಂತ್ ಕುಮಾರ್, ಸದಸ್ಯರಾದ ಗುರುಪ್ರಸಾದ್, ಕಿರಣ್ ಕುಲಾಲ್ ಮುಂತಾದವರ ನೇತೃತ್ವದಲ್ಲಿ ತನಿಯಪ್ಪ ಮೂಲ್ಯ ಅವರ ಚಿಕಿತ್ಸೆಗೆ ಹಣ ಸಂಗ್ರಹ ನಡೆಸಲಾಗಿತ್ತು. ಇದಕ್ಕೆ ನೂರಾರು ಊರ-ಪರವೂರ ಹೃದಯವಂತ ದಾನಿಗಳು ಸ್ಪಂದಿಸಿದ್ದರು. ಸಂಗ್ರಹವಾದ ಹಣವನ್ನು ಇಂದು (ಸೆ. ೨೫) ಬೆಳಿಗ್ಗೆ ಇಂದಬೆಟ್ಟಿನಲ್ಲಿರುವ ತನಿಯಪ್ಪ ಮೂಲ್ಯ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭ ನರೇಶ್ ಕೆ. ಟಿ, ಹೇಮಂತ ಕುಮಾರ್ ಕಿನ್ನಿಗೋಳಿ ,ಗುರುಪ್ರಸಾದ್, ರಾಕೇಶ್ ಕೊಣಾಜೆ, ಉಮೇಶ್ ಕುಲಾಲ್ ಗುರುವಾಯನಕೆರೆ, ನಿತೇಶ್ ಕುಕ್ಯಾನ್ ಏಳಿಂಜೆ , ರಮೇಶ್ ಕುಮಾರ್ ವಗ್ಗ , ವಿಮಲಾ ಕುಲಾಲ್ ಕಂಚಿಂಜ, ದಯಾನಂದ ಕಿನ್ನಿಗೋಳಿ, ದಾಮೋದರ ಗುರುವಾಯನಕೆರೆ, ಲೋಕೇಶ್ ಕುಲಾಲ್ ಗುರುವಾಯನಕೆರೆ ಮುಂತಾದವರು ಉಪಸ್ಥಿತರಿದ್ದರು.
ಹಣ ಸ್ವೀಕರಿಸಿ ಮಾತನಾಡಿದ ತನಿಯಪ್ಪ ಮೂಲ್ಯ ಮತ್ತು ಅವರ ಪತ್ನಿ `ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದೆವು. ಈ ಸಂದರ್ಭ ದೇವರಂತೆ ಬಂದು ಸಮಾಜ ಬಾಂಧವರು ನೆರವಾಗಿದ್ದಾರೆ. ಇವರ ಉಪಕಾರ ಎಂದೆಂದಿಗೂ ಮರೆಯಲಾಗದು’ ಎಂದು ಹೇಳಿ ಕಣ್ಣೀರೊರೆಸಿಕೊಂಡರು.
ಈ ಹಿಂದೆ ಇದೆ ಗ್ರೂಪಿನ ವತಿಯಿಂದ ಅಪಘಾತದಿಂದ ಸೊಂಟದ ಬಲವನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಮೂಡಬಿದ್ರೆ ಒಂಟಿಕಟ್ಟೆ ಐದು ಸೆಂಟ್ಸ್ ನಾಗವೇಣಿ ನಿವಾಸದ ಎಂ.ಕೆ ಭಾಸ್ಕರ್ ಮೂಲ್ಯ ಅವರಿಗೆ ಹಣ ಸಂಗ್ರಹಿಸಿ 30,462 ರೂ. ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ ಅವರ ನವಜಾತ ಶಿಶುವಿನ ಚಿಕಿತ್ಸೆಗೆ ಒಟ್ಟು 76,200 ರೂಪಾಯಿಯನ್ನು ಸಂಗ್ರಹಿಸಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತನಿಯಪ್ಪ ಮೂಲ್ಯರ ಕರುಣಾಜನಕ ಕಥೆ..
ಕೊಡಂಗೆ ಮನೆ, ಇಂದಬೆಟ್ಟು ಗ್ರಾಮದ ತನಿಯಪ್ಪ ಮೂಲ್ಯ (50) ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮಧುಮೇಹದ ಕಾರಣ ಒಂದು ಕಣ್ಣನ್ನೂ ಕಳೆದುಕೊಂಡಿದ್ದಾರೆ. ಮೂಲತಃ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆ ಬಳಿಕ ಸಾಲ ಮಾಡಿ ಗೂಡ್ಸ್ ರಿಕ್ಷಾ ಖರೀದಿಸಿ ದುಡಿಯುತ್ತಿದ್ದರು. ಆದರೆ ಅನಾರೋಗ್ಯದ ಕಾರಣ ಈಗ ಚಿಕ್ಕ ಗೂಡಂಗಡಿ ಇಟ್ಟಿದ್ದಾರೆ. ಆದರೆ ದಿನಕ್ಕೆ ಐವತ್ತು ರೂ. ವ್ಯಾಪಾರ ಕೂಡಾ ಆಗುತ್ತಿಲ್ಲ. ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿರುವ ಈ ಕುಟುಂಬವು ಇದೀಗ ಚಿಕಿತ್ಸೆ ಮುಂದುವರಿಸಲು ದಾನಿಗಳ ಸಹಾಯ ಯಾಚಿಸಿದ್ದರು.
ಜೀವನ್ಮರಣ ಹೋರಾಟ ನಡೆಸುತ್ತಿರುವ ತನಿಯಪ್ಪ ಮೂಲ್ಯರಿಗೆ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ತನಿಯಪ್ಪರ ಪತ್ನಿ ಪುಷ್ಪಾ ಬಂಗಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಹಾಯಕಿ. ಅವರ ಸಂಬಳವೇ ಜೀವನಾಧಾರ. ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಚಿಕಿತ್ಸೆ ಕೊಡಿಸಿದಾಗ ಮೂರೂವರೆ ಲಕ್ಷ ರೂ. ಬಿಲ್ ಆಗಿತ್ತು. ರಿಕ್ಷಾ ಚಾಲಕರು, ಊರವರು, ಬಂಧುಗಳು ಒಟ್ಟಾಗಿ ಹಣ ಸಂಗ್ರಹಿಸಿ ಆಸ್ಪತ್ರೆ ವಾಸದಿಂದ ಮುಕ್ತಿ ನೀಡಿದರು. ಇದಾಗಿ ವರ್ಷ ಕಳೆಯಿತು. ಈಗ ವಾರಕ್ಕೆ ಎರಡು ದಿನ ಡಯಾಲಿಸಿಸ್ ಕಡ್ಡಾಯ. ಪುತ್ತೂರಿನ ಆಸ್ಪತ್ರೆಗೆ ಹೋಗಿ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಜೀವನಾಧಾರಕ್ಕೆ ಇದ್ದ ರಿಕ್ಷಾ ಮಾರಿ ಆಗಿದೆ. ಚಿಕಿತ್ಸೆಗಾಗಿ ಇದೀಗ ಇರುವ ಮುರುಕು ಮನೆಯನ್ನೂ ಮಾರಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ತನಿಯಪ್ಪ ಮೂಲ್ಯರ ದಯನೀಯ ಸ್ಥಿತಿಯನ್ನು ಕಂಡು ಮಾನವೀಯ ನೆಲೆಯಲ್ಲಿ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಪರವಾಗಿ ಆರ್ಥಿಕ ಸಹಾಯ ನೀಡಲು ಯೋಜಿಸಲಾಗಿತ್ತು.
ಹಣಕಾಸಿನ ನೆರವು ನೀಡುವವರಿಗೆ :
ತನಿಯಪ್ಪ ಮೂಲ್ಯ. ಬಂಗಾಡಿ ಸಿಂಡಿಕೇಟ್ ಬ್ಯಾಂಕ್. ಐಎಫ್ಎಸ್ಸಿ : ಎಸ್ವೈಎನ್ಬಿ 0000198. ಎಕೌಂಟ್ ನಂಬರ್ : 01982200028628.
ದೂರವಾಣಿ : 8277408410