ಉಡುಪಿ: ಕಾವೇರಿ ವಿಚಾರವಾಗಿ ಕನ್ನಡಿಗನಿಗೆ ತಮಿಳರು ಥಳಿಸಿದ್ದು ಬೆಂಗಳೂರನ್ನು ಹೊತ್ತಿ ಉರಿಸಿತ್ತು. ರಾಮೇಶ್ವರಂನಲ್ಲಿ ಹಲ್ಲೆಗೀಡಾಗಿದ್ದ ಕನ್ನಡಿಗ ಮಂಜುನಾಥ್ ಕುಲಾಲ್ ಈಗ ತವರಿಗೆ ವಾಪಾಸಾಗಿದ್ದಾರೆ. ಆದರೆ ತಮಿಳು ಪುಂಡರು ನಡೆಸಿದ ಹಲ್ಲೆಯ ಗಾಯ ಮಾತ್ರ ಇನ್ನೂ ವಾಸಿಯಾಗಿಲ್ಲ.
ಮಂಜುನಾಥ್ ಸುರಕ್ಷಿತವಾಗಿ ತವರಿಗೆ ವಾಪಸ್ ಆಗಬೇಕೆಂದು ಮಾಧ್ಯಮದ ಮೂಲಕ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಸುದ್ದಿ ಮುಟ್ಟಿಸಿತ್ತು. ಕೊನೆಗೆ ಶೋಭಾ ಕರಂದ್ಲಾಜೆ ಹಾಗೂ ರಾಮೇಶ್ವರಂ ಸಂಸದ ಅನ್ವರ್ ಮಧ್ಯಸ್ಥಿಕೆಯಿಂದ ಮಂಜುನಾಥ್ ಸುರಕ್ಷಿತವಾಗಿ ಊರು ತಲುಪಿದ್ದಾರೆ.
ಮಂಜುನಾಥ ಕುಲಾಲ್ ಸುರಕ್ಷಿತವಾಗಿ ಮನೆಯೇನೋ ಸೇರಿದ್ದಾರೆ. ಆದರೆ ನಿಷ್ಕರುಣಿ ತಮಿಳ ಅಟ್ಟಹಾಸಕ್ಕೆ ಭುಜ ಮೂಳೆ ಮುರಿದಿದೆ. ಕಿವಿ ತಮಟೆ ಡ್ಯಾಮೇಜ್ ಆಗಿದೆ. ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರೋ ಮಂಜುನಾಥ್ ಎಕ್ಸ್- ರೇ ಮಾಡಿಸಿದ್ದು, ಭುಜದ ಮೂಳೆ (ಕಾಲರ್ ಬೋನ್) ಮುರಿದಿರುವುದು ಗೊತ್ತಾಗಿದೆ. ಅಲ್ಲದೆ ಎಡ ಕಿವಿಯ ತಮಟೆ ಒಡೆದುಹೋಗಿರುವುದಾಗಿ ವೈದ್ಯರು ಹೇಳಿದ್ದಾರೆ.
ಟೆಂಪೋ ಟ್ರಾವೆಲ್ಲರ್ ಡ್ರೈವರ್ ಆಗಿ ಕೆಲಸ ಮಾಡುವ ಮಂಜುನಾಥ ಒಂದು ವಾರ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ಹೇಳಿದ್ದಾರೆ. ಮೂಳೆ ಸಂಧಿಸುವವರೆಗೆ ಒಂದು ತಿಂಗಳು ಡ್ರೈವಿಂಗ್ ಮಾಡಬಾರದೆಂದು ಹೇಳಿದ್ದಾರೆ. ಆಸ್ಪತ್ರೆ ಖರ್ಚು, ಔಷಧ ಹಾಗೂ ಸ್ಕ್ಯಾನಿಂಗ್ಗೆ ಸುಮಾರು 25 ಸಾವಿರ ರೂಪಾಯಿ ವೆಚ್ಚವಾಗಲಿದೆ. ಈ ಬಡ ಸ್ವಾಭಿಮಾನಿ ಕನ್ನಡಿಗನ ಚಿಕಿತ್ಸೆಗೆ ಸಹಾಯ ಬೇಕಾಗಿದೆ.