ಕುಂದಾಪುರ (ಸೆ. ೧೭): ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡಿನಲ್ಲಿ ಹಲ್ಲೆಗೊಳಗಾದ ಅಮಾಸೆಬೈಲು ರಟ್ಟಾಡಿ ನಿವಾಸಿ ಮಂಜುನಾಥ ಶನಿವಾರದಂದು ಊರಿಗೆ ಆಗಮಿಸಿದ್ದು ಅನಾರೋಗ್ಯದ ಹಿನ್ನೆಲೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೆ.9 ಶುಕ್ರವಾರದಂದು ಮಂಜುನಾಥ ಅವರು ತನ್ನ ತಂದೆ ತಾಯಿ ಹಾಗೂ ಮನೆಯ ಆಸುಪಾಸಿನ ಒಟ್ಟು 12 ಮಂದಿಯೊಂದಿಗೆ ಕೋಣಿಯ ಆರ್ಸಿ ಕೋರ್ವಾಲ್ ಎನ್ನುವ ತನ್ನ ಸ್ನೇಹಿತನ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ರಾಮೇಶ್ವರ ಹಾಗೂ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಯಾತ್ರೆಗಾಗಿ ತೆರಳಿದ್ದರು. ಭಾನುವಾರ ರಾಮೇಶ್ವರ ತೆರಳಿದ ಇವರ ತಂಡವು ಅಲ್ಲಿ ದರ್ಶನ ಮುಗಿಸಿ ಸೋಮವಾರ ಮಧುರೈಗೆ ತೆರಳುತ್ತಿದ್ದಾಗ ರಾಮೇಶ್ವರದಲ್ಲಿ ನಿಲ್ಲಿಸಲಾದ ಇವರ ಟ್ರಾವೆಲ್ಲರ್ ವಾಹನವನ್ನು ಕಂಡ ನಾಮ್ ತಮಿಳಾರ್ ಇಯಕ್ಕಂ ಎಂಬ ತಮಿಳು ಮೂಲದ ಸಂಘಟನೆಯ ಒಂದಷ್ಟು ಮಂದಿ ಸದಸ್ಯರು ಮನಸೋ ಇಚ್ಛೆ ದಾಳಿ ನಡೆಸಿದರು. ದಾಳಿಯಿಂದಾಗಿ ಮಂಜುನಾಥ ಅವರ ಕಿವಿಗೆ ಗಾಯವಾಗಿದ್ದಲ್ಲದೇ ದೊಣ್ಣೆ ಮತ್ತು ಕೈಯಿಂದ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ನೋವು ಅನುಭವಿಸಿದ್ದರು. ಇದಾದ ತರುವಾಯ ಎರಡು ದಿನಗಳ ಬಳಿಕ ಮಂಜುನಾಥ ಅವರೊಂದಿಗೆ ತೆರಳಿದ್ದ 12 ಮಂದಿಯನ್ನು ಸುರಕ್ಷಿತವಾಗಿ ರೈಲು ಮೂಲಕ ಉಡುಪಿಗೆ ಕಳುಹಿಸಲಾಗಿತ್ತು. ಮಂಜುನಾಥ ತೆರಳಿದ ವಾಹನ ಜಖಂಗೊಂಡಿದ್ದ ಕಾರಣ ಹಾಗೂ ತಮಿಳುನಾಡಿನಲ್ಲಿ ಕೊಂಚ ಪ್ರಕ್ಷಿಉಬ್ದತೆ ಇದ್ದ ಕಾರಣ ಸೋಮವಾರದಿಂದಲೂ ಮಂಜುನಾಥ ತಮಿಳುನಾಡು ಪೊಲಿಸರ ರಕ್ಷಣೆಯಲ್ಲಿದ್ದರು.
ಗುರುವಾರ ಅವರನ್ನು ತಮಿಳುನಾಡು ಪೊಲಿಸರು ಭದ್ರತೆಯಲ್ಲಿ ಕರ್ನಾಟಕ ಗಡಿ ತಲುಪಿಸಿದ್ದು ಗುರುವಾರ ಬೆಂಗಳೂರಿನಲ್ಲಿ ತಂಗಿದ ಮಂಜುನಾಥ ಅವರು ಶುಕ್ರವಾರ ಅಲ್ಲಿ ತಮ್ಮ ವಾಹನವನ್ನು ದುರಸ್ಥಿಗೊಳಿಸಿ ಸಂಜೆ ಸುಮಾರಿಗೆ ಹೊರಟಿದ್ದು ಶನಿವಾರ ಮುಂಜಾನೆ ಕುಂದಾಪುರಕ್ಕೆ ಆಗಮಿಸಿದ್ದಾರೆ. ಆದರೇ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.