ಕಾಪು : ಇಲ್ಲಿ ಕಡು ಬಡತನ ಮೈಚಾಚಿ ಮಲಗಿದೆ. ಮನೆಯ ಆಧಾರಸ್ತಂಭವಾಗಿದ್ದ ಯಜಮಾನ ತನ್ನ ಎಡ ಕಾಲಿನ ಆಧಾರವನ್ನೆ ಕಳೆದುಕೊಂಡು ದುಡಿಯಲಾಗದ ಸ್ಥಿತಿ ತಲುಪಿದ್ದಾನೆ. ಮೂರೊತ್ತಿನ ಗಂಜಿಗೆ ಹೆಂಡತಿಯೇ ದುಡಿಯಬೇಕಾದ ಸ್ಥಿತಿ ಬಂದೊಂದಗಿದೆ. ಪತ್ನಿ ಬೀಡಿ ಕಟ್ಟುತ್ತಾ ಪುಟ್ಟ ಹೆಣ್ಣು ಮಗುವಿನ ಪಾಲನೆ, ಗಂಡನ ಪೋಷಣೆ, ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ಈ ಕುಟುಂಬದಲ್ಲಿ ನಗು ಮಾಸಿದೆ, ಖುಷಿ ಮಾಯವಾಗಿದೆ. ಢಾಳಾದ ನೋವು ಮತ್ತು ಕಣ್ಣೀರು ಮಾತ್ರ ಇವರನ್ನು ಬಾಧಿಸುತ್ತಿದೆ. ನೋಡಿದರೆ ನಮ್ಮೆಲ್ಲರ ಕರುಳು ಚುರುಕ್ ಎನ್ನುತ್ತಿದೆ..
ಹೌದು. ಉಡುಪಿ ತಾಲೂಕಿನ ಕಾಪು ಸಮೀಪದ ಮೂಳೂರು ಎಸ್ . ಎಸ್ ರೋಡ್ ಬಳಿಯ ನಿವಾಸಿ ದಯಾನಂದ ಮೂಲ್ಯ ಕುಟುಂಬದ ಕಣ್ಣೀರಿನ ಕಥೆಯಿದು.
ಸುಮಾರು ಹತ್ತು ವರ್ಷಗಳ ಹಿಂದೆ ಕಾಡಿದ ಅನಾರೋಗ್ಯದಿಂದ ಎಡಕಾಲಿನ ಸ್ವಾಧೀನವನ್ನೇ ಕಳೆದುಕೊಂಡ ದಯಾನಂದ ಮೂಲ್ಯರಿಗೆ ಕನಿಷ್ಟ ತಮ್ಮ ದೈನಂದಿನ ಕೆಲಸ ಮಾಡಿಕೊಳ್ಳಲು ಇನ್ನೋಬ್ಬರ ಸಹಾಯವೇ ಬೇಕಾಗಿದೆ. ಬೀಡಿ ಕಟ್ಟುವ ಕಾಯಕವೊಂದರಿಂದಲೇ ಮನೆಯ ಖರ್ಚು ವೆಚ್ಚ ನಿಭಾಯಿಸಬೇಕಾದ ಸ್ಥಿತಿ ಪತ್ನಿ ಗಿರಿಜಾ ಅವರದ್ದಾಗಿದೆ. ಕಾಲು ಸ್ವಾಧೀನವಿಲ್ಲದ ಗಂಡನ ಹಾಗೂ ಪುಟ್ಟ ಕಂದಮ್ಮನನ್ನು ಸಾಕಿ ಸಲಹಬೇಕಾದ ಅಗತ್ಯೆಯಿರುವ ಗಿರಿಜ ಹಗಲೂ-ರಾತ್ರಿ ಬೀಡಿ ಕಟ್ಟಿ ಸಂಸಾರ ಸಾಗಿಸಬೇಕಾದ ದುಸ್ಥಿತಿ ಬಂದೊದಗಿದೆ. ಅದೂ ದಿನನಿತ್ಯದ ಅಗತ್ಯದ ಸಾಮಾನಿನ ಬೆಲೆ ಗಗನಕ್ಕೇರಿತ್ತಿರುವ ಈ ದಿನಮಾನದಲ್ಲಿ ಕನಿಷ್ಟ ತಿಂಗಳಿಗೆ ಸಾವಿರ ರೂಪಾಯಿಯೂ ಸಿಗದ ಈ ಬೀಡಿ ಕಾಯಕದಿಂದ ಗಿರಿಜಾ ಸಂಸಾರ ಹೇಗೆ ಸಾಗಿಸಿಯಾರು? ಸರಕಾರದಿಂದ ಸಿಗುವ ವಿಕಲಾಂಗ ವೇತನ ಗಂಡನ ಔಷಧ ಖರ್ಚಿಗೂ ಸಾಕಾಗದು. ಕನಿಷ್ಟ ಮೂಲಭೂತ ಸೌಕರ್ಯಗಳಿಂದಲೂ ದೂರವಾಗಿರುವ ಈ ಬಡ ಕುಟುಂಬ ಸಮುದಾಯ ಬಾಂಧವರ, ಸಂಘ-ಸಂಸ್ಥೆಗಳ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿ ಸೆರಗೊಡ್ಡಿ ನಿಂತಿದೆ.
ಕುಡಿಯುವ ನೀರಿನದ್ದೇ ಒಂದು ದೊಡ್ಡ ಸಮಸ್ಯೆ:
ಮನೆಯಲ್ಲಿ ನೀರಿಲ್ಲದೆ ಬದುಕುವುದು ಹೇಗೆ ಹೇಳಿ? ಆದರೆ ಈ ಕುಟುಂಬಕ್ಕೆ ನೀರಿನದ್ದೆ ಒಂದು ದೊಡ್ಡ ಸಮಸ್ಯೆ. ಮೈಲಿಗಟ್ಟಲೆ ದೂರದಿಂದ ತಂಬಿಗೆಯಲ್ಲಿ ನೀರನ್ನು ತಂದು ಬದುಕು ಸಾಗಿಸಬೇಕಾದ ಸ್ಥಿತಿ ಇವರದ್ದಾಗಿದೆ. ಹಾಗಾಗಿ ಈ ಬಡ ಕುಟುಂಬ ಕಾಪು ಕುಲಾಲ ಯುವ ವೇದಿಕೆಯನ್ನು ಸಂಪರ್ಕಿಸಿ ನಮಗೇನಾದರೂ ಸಹಾಯ ಮಾಡಬಹುದೇ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದೆ.
ನಮ್ಮ ಸಮುದಾಯದವರು ಸ್ಪಂದಿಸಿಯಾರೇ?
ಖಂಡಿತಾ ನಮ್ಮೆಲ್ಲರ ಮನೆಯಲ್ಲೂ ಸಮಸ್ಯೆ ಇದೆ. ಆದರೆ ಈ ದಯಾನಂದ ಮೂಲ್ಯರ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಈ ಬಡಕುಟುಂಬವನ್ನು ಮೇಲೆತ್ತುವ ದೊಡ್ಡ ಮನಸ್ಸನ್ನು ಸಮುದಾಯ ಬಾಂಧವರು ಮಾಡಿಯಾರೇ? ಕನಿಷ್ಟ ಮೊತ್ತದ ಆರ್ಥಿಕ ಸಹಕಾರವನ್ನು ಈ ಕುಟುಂಬಕ್ಕೆ ನೀಡುವ ಮನಸ್ಸನ್ನು ಕುಲಾಲ ಯುವ ನಾಯಕರು ಮಾಡಬೇಕಿದೆ. ಆ ಮೂಲಕ ಸಂಘಟನೆಯೊಂದು ಹೇಗೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎಂದು ಎಲ್ಲರಿಗೆ ತೋರಿಸಬೇಕಿದೆ.
ಬರೀ ನೀರವ ಮೌನ, ಬಡತನ, ನೋವೇ ತುಂಬಿರುವ ಈ ಸಂಸಾರದಲ್ಲಿ ನಗುವಿನ ತಂಗಾಳಿ ಬೀಸುವಂತೆ ನೀವೆಲ್ಲರು ಸ್ಪಂದಿಸಬಹುದೇ? ಪುಟ್ಟ ಕಂದಮ್ಮನ ಕಿಲ ಕಿಲ ನಗುವಿಗೆ ನೀವು ಕಾರಣವಾಗಬಹುದೇ? ಈ ಬಡ ಸಂಸಾರಕ್ಕೆ ಕನಿಷ್ಟ ಮೂಲಭೂತ ಸೌಕರ್ಯಗಳಿಗಾಗುವಷ್ಟು ಆರ್ಥಿಕ ಸಹಾಯವನ್ನು ಮಾಡಬಹುದೇ? ಈ ಬಡ ಸಂಸಾರ ನಿರೀಕ್ಷೆಯಲ್ಲಿದೆ.
ಹಣದ ಸಹಾಯ ಮಾಡುವವರು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು ಅಥವಾ ಕಾಪು ಕುಲಾಲ ಯುವ ವೇದಿಕೆಯನ್ನು (9844344253,9964897246 ಸಂಪರ್ಕಿಸಿಯೂ ಸಹಾಯ ಮಾಡಬಹುದು.
Dayanand Mulya
Syndicate Bank,
Branch : Kaup Main Road
SB A/c no. 01252210039546
IFSC Code:SYNB0000125