ಜೋಕುಮಾರನಿಗೂ ಮತ್ತು ಕುಂಬಾರರಿಗೂ ಗಾಢವಾದ ನಂಟು. ಮೊದಲೆಲ್ಲ ಕುಂಬಾರ ಸಮುದಾಯ ದವರೇ ಜೋಕುಮಾರ ನನ್ನು ತಯಾರಿಸಿ, ಮನೆ ಮನೆಗೆ ಕಳುಹಿಸು ವಂತಹ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಆಚರಣೆ ಸ್ವರೂಪವೂ ಸಹ ನಿಧಾನವಾಗಿ ಭಿನ್ನವಾಗತೊಡಗಿದೆ.
ಕಲಬುರ್ಗಿ: ಸಂತಸ, ಸಂಭ್ರಮ ತಂದ ಗಣಪ ವಿಸರ್ಜನೆಗೊಂಡರೆ, ಈಗ ಜೋಕುಮಾರಸ್ವಾಮಿಯ ಸರದಿ. ಆತನಿಗೆ ಮನೆ ಮನೆಗೆ ಬಂದು ಹರ್ಷ ಮೂಡಿಸುವ ತವಕ. ಜೋಕುಮಾರ ಕಾಣಿಸಿಕೊಂಡರೆ ಆಯಾ ಪ್ರದೇಶದ ಮನೆಗಳಿಗೆ ಅಷ್ಟೇ ಅಲ್ಲ, ಇಡೀ ಊರಿಗೆ ಸಮೃದ್ಧಿ ಎಂಬ ನಂಬಿಕೆಯಿದೆ.
ನಗರದ ಪ್ರಮುಖ ಬೀದಿಗಳಲ್ಲಿ ಇಬ್ಬರು ಮಹಿಳೆಯರು ಬುಟ್ಟಿಯಲ್ಲಿ ಜೋಕುಮಾರನನ್ನು ಹೊತ್ತು ಮನೆ ಮನೆಗೆ ಹೊರಟಿದ್ದಾರೆ. ಮನೆಬಾಗಿಲ ಮುಂಭಾಗದಲ್ಲಿ ಜೋಕುಮಾರನನ್ನು ಇಟ್ಟು ಪದಗಳನ್ನು ಹಾಡುವ ಅವರು ಕಷ್ಟಸುಖ ಹಂಚಿಕೊಳ್ಳುತ್ತಾರೆ. ಆಪ್ತವಾಗಿ ಮಾತನಾಡಿದ ಬಳಿಕ ಮತ್ತೆ ಮುಂದಿನ ಮನೆಯತ್ತ ಹೊರಡುತ್ತಾರೆ.
ಜೋಕುಮಾರನಿಗೂ ಮತ್ತು ಕುಂಬಾರರಿಗೂ ಗಾಢವಾದ ನಂಟು. ಮೊದಲೆಲ್ಲ ಕುಂಬಾರ ಸಮುದಾಯ ದವರೇ ಜೋಕುಮಾರ ನನ್ನು ತಯಾರಿಸಿ, ಮನೆ ಮನೆಗೆ ಕಳುಹಿಸು ವಂತಹ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಆಚರಣೆ ಸ್ವರೂಪವೂ ಸಹ ನಿಧಾನವಾಗಿ ಭಿನ್ನವಾಗತೊಡಗಿದೆ.
‘ಜೋಕುಮಾರ ಎಂದು ಕೆಲವರು ಹಾಸ್ಯ ಮಾಡುತ್ತಾರೆ. ಆದರೆ ಆತ ಕಬ್ಬಲಿಗರ ದೇವರು. ಪ್ರತಿ ವರ್ಷ ಗಣೇಶನನ್ನು ಕೂರಿಸಿದ 5ನೇ ದಿನಕ್ಕೆ ಹುಟ್ಟುವ ಜೋಕುಮಾರ ಗಣೇಶ ವಿಸರ್ಜನೆಗೊಳ್ಳುವ 11ನೇ ದಿನಕ್ಕೆ ನಿರ್ಗಮಿಸುತ್ತಾನೆ. ಜೋಕುಮಾರ ತಿರುಗಾಡಿದರೆ ಊರಿಗೆ ಒಳಿತು ಎಂಬ ನಂಬಿಕೆಯಿದೆ’ ಎಂದು ಕುಸನೂರು ಗ್ರಾಮಸ್ಥೆ ರುಕ್ಮಿಣಿಬಾಯಿ ತಿಳಿಸಿದರು.
‘ಜೋಕುಮಾರನ ತಯಾರಿ ಸುಲಭದ ಮಾತೇನಲ್ಲ. ಮೂರ್ತಿ ತಯಾರಿಸಲು ಹುತ್ತದ ಮಣ್ಣು ಮತ್ತು ಅಳ್ಳಿ ಬೇಕು. ಅವೆರಡನ್ನು ಮಿಶ್ರಣಗೊಳಿಸಿ ತಯಾರಿಸಿದಾಗಲೇ ಮೂರ್ತಿ ಗಟ್ಟಿಯಾ ಗುತ್ತದೆ. ಬುಟ್ಟಿಯಲ್ಲಿ ಮೂರ್ತಿಯನ್ನು ಹೊತ್ತೊಯ್ಯುವಾಗ ಸಕಲ ಸಿದ್ಧತೆಯೂ ಸಹ ಮಾಡಿಕೊಳ್ಳಬೇಕು. ಬೇವಿನತಪ್ಪಲು ಕೂಡ ಅವಶ್ಯ’ ಎಂದು ಅವರು ತಿಳಿಸಿದರು.
ರುಕ್ಮಿಣಿಬಾಯಿ ಒಬ್ಬರೇ ಅಲ್ಲ, ಕುಸನೂರು ಗ್ರಾಮದ ದುರಪತಾಬಾಯಿ ಅವರು 30 ವರ್ಷಗಳಿಂದ ಜೋಕುಮಾ ರನ ಮೂರ್ತಿಯನ್ನು ಬುಟ್ಟಿಯಲ್ಲಿ ಹೊತ್ತು ಊರೂರು ತಿರುಗುತ್ತಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಬಹುತೇಕ ಮಂದಿ ಅವರ ಬರುವಿಕೆಯನ್ನೇ ಕಾಯುತ್ತಾರೆ. ಅವರು ಬಂದಾಗ, ಕ್ಷೇಮ ಸಮಾಚಾರ ಹಂಚಿಕೊಳ್ಳುತ್ತಾರೆ.
‘ಜೋಕುಮಾರ ಸಿದ್ಧವಾದ ಕೂಡಲೇ ಮೊದಲು ಗೌಡರ ಮನೆಗೆ ಹೋಗಬೇಕು ಎಂಬ ನಿಯಮವಿದೆ. ಅವರ ಮನೆಯಿಂದ ಚಾಜಾ ತೆಗೆದುಕೊಂಡ ನಂತರವಷ್ಟೇ ಇತರರ ಮನೆಗೆ ಹೊರಡುತ್ತೇವೆ. ಪದ ಹಾಡುತ್ತೇವೆ. ಆಯಾ ಮನೆಯ ಗೃಹಿಣಿಯರು ಧಾನ್ಯ, ಎಣ್ಣೆ, ಹಣ, ಅಕ್ಕಿ ನೀಡುತ್ತಾರೆ. ಮತ್ತೆ ಬರುವಂತೆ ಕೋರುತ್ತಾರೆ’ ಎಂದು ದುರಪತಾಬಾಯಿ ತಿಳಿಸಿದರು.
‘ಪ್ರತೀತಿಯೊಂದರ ಪ್ರಕಾರ ಎಲ್ಲರ ಮನೆಗೆ ಭೇಟಿ ನೀಡಿದ ಜೋಕುಮಾರ ಕೊನೆಗೆ ದಲಿತರ ಮನೆಗೆ ಹೋಗುತ್ತಾನೆ. ಅವರು ಪೂಜಿಸುತ್ತಾರೆ. ನಂತರ ಅವರಲ್ಲಿಯೇ ಕೆಲವರು ಜೋಕುಮಾರನಿಗೆ ಹೊಡೆಯಲು ಮುಂದಾಗುತ್ತಾರೆ. ಆಗ ಅವರಿಂದ ತಪ್ಪಿಸಿಕೊಂಡು ಮಡಿವಾಳರ ಬಂಡೆ ಬಳಿ ಹೋಗಿ ಕೊನೆಯುಸಿರೆಳೆಯುತ್ತಾನೆ’ ಎಂದರು.
‘ಮನದ ಇಚ್ಛೆ ಈಡೇರುವುದೇ ಅಥವಾ ಇಲ್ಲವೇ ಎಂಬುದನ್ನು ಅರಿಯಲು ಜೋಕುಮಾರ ನೆರವಾಗು ತ್ತಾನೆ. ಮನದಲ್ಲಿನ ಆಸೆ ಹೇಳಿಕೊಂಡು ಜೋಕುಮಾರ ಹೊತ್ತ ಬುಟ್ಟಿ ಎತ್ತಬೇಕು. ಒಂದು ವೇಳೆ ಬುಟ್ಟಿ ಹಗುರವಾದಂತೆ ಭಾಸವಾದರೆ ಬಯಕೆ ಈಡೇರುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ನಂಬಿಕೆಯಿದೆ.
ಜೋಕುಮಾರನನ್ನು ಪೂಜಿಸಿದರೆ, ಉತ್ತಮ ಮಳೆಯಾಗುತ್ತದೆ ಮತ್ತು ಬೆಳೆ ಚೆನ್ನಾಗಿ ಬರುತ್ತದೆಯೆಂದು ಗ್ರಾಮಸ್ಥರು ನಂಬಿದ್ದಾರೆ’ ಎಂದು ಗೃಹಿಣಿ ಪಾರ್ವತಿಬಾಯಿ ತಿಳಿಸಿದರು.
ಅನಿತಾ ಎಂ.ಗೈಧನ್ಕರ್ಕ
(ಕೃಪೆ : ‘ಪ್ರಜಾವಾಣಿ’)