ಕುಂದಾಪುರ (ಸೆ. ೧೨): ಕಾವೇರಿ ನೀರು ವಿವಾದದ ಹಿನ್ನೆಲೆಯಲ್ಲಿ ಕುಂದಾಪುರ ರಟ್ಟಾಡಿಯ ನಿವಾಸಿ ಮಂಜುನಾಥ ಕುಲಾಲ ಅವರಿಗೆ ತಮಿಳುನಾಡಿನ ರಾಮೇಶ್ವರದಲ್ಲಿ ದುಷ್ಟರ ಗುಂಪೊಂದು ಹಲ್ಲೆ ನಡೆಸಿ, ಅವರ ವಾಹನವನ್ನು ಜಖಂಗೊಳಿಸಿದ ಘಟನೆ ವರದಿಯಾಗಿದೆ.
ಮಂಜುನಾಥ ಅವರು ಟೂರಿಸ್ಟ್ ವಾಹನದ ಮಾಲಕ ಹಾಗೂ ಚಾಲಕರಾಗಿದ್ದು, ಅಮಾವಾಸ್ಯೆಬೈಲಿನ 12 ಮಂದಿಯ ಜೊತೆ ರಾಮೇಶ್ವರಕ್ಕೆ ಶುಕ್ರವಾರದಂದು ತನ್ನ ಸ್ನೇಹಿತನ ವಾಹನದೊಂದಿಗೆ ತೆರಳಿದ್ದರು. ಅಲ್ಲಿ ತಲುಪಿದ ಬಳಿಕ ಉಳಿದವರು ದೇವಸ್ಥಾನಕ್ಕೆ ತೆರಳಿದ್ದು, ಮಂಜುನಾಥ ಅವರು ತಮ್ಮ ವಾಹನ ಟೆಂಪೋ ಟ್ರಾವೆಲರ್ ನಲ್ಲಿ ಮಲಗಿದ್ದರು ಎನ್ನಲಾಗಿದೆ. ಈ ಸಂದರ್ಭಏಕಾಏಕಿ ಆಗಮಿಸಿದ ಗುಂಪೊಂದು ಇವರ ವಾಹನ ಕರ್ನಾಟಕದ್ದು ಎಂದು ತಿಳಿದೊಡನೆ ವಾಹನವನ್ನು ಪುಡಿಗಟ್ಟಿದ್ದಲ್ಲದೆ, ಮಂಜುನಾಥ ಅವರಿಗೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಹಲ್ಲೆಯ ವೀಡೀಯೋ ಚಿತ್ರೀಕರಣ ಮಾಡಿದ್ದಾರೆ.
ಘಟನೆ ಬಗ್ಗೆ ತಿಳಿದ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಪ್ರಧಾನ ಸಂಪಾದಕ ಡಾ. ಅಣ್ಣಯ್ಯ ಕುಲಾಲ್ ಅವರು ಮಂಜುನಾಥ ಕುಲಾಲ್ ಅವರನ್ನು ಸಂಪರ್ಕಿಸುವ ಯತ್ನವನ್ನು ಮಾಡಿದ್ದಾರೆ. ಹಲ್ಲೆಗೀಡಾದ ಮಂಜುನಾಥ ಕುಲಾಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಯಾತ್ರೆಗೆ ತೆರಳಿದ್ದವರು ದೇವಳದ ಪುರೋಹಿತರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳರು ಮಂಜುನಾಥ ಕುಲಾರರಿಗೆ ಹಿಂಸೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದೆ.