ಕುಲಾಲ್ ವರ್ಲ್ಡ್ ಡಾಟ್ ಕಾಮ್ ವಿಶೇಷ
ಮಾನವನ ಸಾಧನೆಗಳಲ್ಲಿ ಭಾಷೆಯ ರೂಪೀಕರಣ ಮಹತ್ವದ ಸಾಧನೆಯಾಗಿದೆ. ಮಾನವ ಜನಾಂಗ-ಸಂಸ್ಕೃತಿಗೆ ಅನುಗುಣವಾಗಿ ಭಾಷೆ ವಿಕಾಸಗೊಳ್ಳುತ್ತಾ ಬಂದಿದೆ. ಮನುಷ್ಯನನ್ನು ಅರ್ಥೈಸಬೇಕಾದರೆ ಆತನ ಭಾಷೆಯನ್ನು ಮೊದಲು ಅಭ್ಯಾಸ ಮಾಡಬೇಕೆಂದು ಭಾಷಾವಿಜ್ಞಾನಿಗಳು ಸೂಚಿಸುತ್ತಾರೆ. ಹೀಗಾಗಿ ಭಾಷೆ ಎಂದರೆ ಕೇವಲ ಸಂಪರ್ಕ-ಸಂವಹನ ಮಾಧ್ಯಮವಲ್ಲ. ಭಾಷೆ ಏಕಕಾಲದಲ್ಲಿ ಸಂಸ್ಕೃತಿ ವಾಹಕವಾಗಿ,ಆತ್ಮೀಯತೆ-ಬಿರುಕುಗಳ ಮಾಧ್ಯಮವಾಗಿಯೂ ಕೆಲಸ ನಿರ್ವಹಿಸುತ್ತದೆ. ಭಾಷೆ ಹಲವು ಬಾರಿ ಅಸಮಾನತೆಯ ವ್ಯವಸ್ಥೆಯನ್ನೂ ತನ್ನ ಒಡಲಲ್ಲಿ ಅರಗಿಸಿಕೊಂಡಿರುತ್ತದೆ.
ಭಾಷೆಯ ಬೆಳವಣಿಗೆಯ ಪರಿಪಕ್ವ ಕಾಲಘಟ್ಟದಲ್ಲಿ ಗಾದೆಗಳು ರೂಪುಗೊಂಡವು. ಗಾದೆಯಿಲ್ಲದ ಭಾಷೆಯಿಲ್ಲ. ಒಂದರ್ಥದಲ್ಲಿ ಗಾದೆ ಒಂದು ಭಾಷೆಯ,ಸಂಸ್ಕೃತಿಯ ಗಿಳಿ ಸೂವೆ(ಇಣುಕು ಕಿಂಡಿ) ಇದ್ದ ಹಾಗೆ. ತುಳು ಭಾಷೆಯಲ್ಲಿ ಲಭ್ಯವಿರುವ ಹಲವಾರು ಗಾದೆಗಳು ತುಳುಭಾಷೆಯ ಸಮೃದ್ದ ಬೆಳವಣಿಗೆಯನ್ನು ಸೂಚಿಸುವುದರ ಜೊತೆಗೆ ಕೃಷಿ ಪ್ರಧಾನ ಸಂಸ್ಕೃತಿಯ ಕಾಲದ ಅನೇಕ ನಂಬಿಕೆ ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತದೆ. ಹೀಗಾಗಿ ತುಳುಗಾದೆಗಳು ತುಳು ಸಂಸ್ಕೃತಿಯ ಅಧ್ಯಯನಕ್ಕೊಂದು ಬೆಳಕಿನ ಕಿಂಡಿಯಾಗುತ್ತದೆ. ತುಳುವಿನ ಬಹುತೇಕ ಗಾದೆಗಳು ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ರೂಪುಗೊಂಡವುಗಳು. ಜಾತಿಬದ್ದ ಅಸಮಾನ ಸಮಾಜ ವ್ಯವಸ್ಥೆಯಲ್ಲಿ ಗಾದೆ ಭಾಷೆಯ ಪ್ರಯೋಗದ ಒಂದು ಅಸ್ತ್ರವಾಗಿಯೂ ಬಳಕೆಯಾಗಿವೆ. ಜಾತಿಯ ವ್ಯವಸ್ಥೆಯನ್ನು ಸಂರಕ್ಷಿಸಿಸುವ ಕೆಲಸವನ್ನೂ ಗಾದೆಗಳು ಮಾಡುತ್ತವೆ(ಉದಾಹರಣೆಗೆ ಬ್ರಾಣೆರ್ ನಾಯೆರ್ ಪತ್ತುಂಡ/ಗೊಬ್ಬರ ತುಂಬುಂಡ ಬರ್ಸ ಬರಾಂದ್). ಇಲ್ಲಿ ಪ್ರಬಲ ವರ್ಗ ತನಗೆ ಅನುಗುಣವಾಗಿ ಗಾದೆಯನ್ನು ರೂಪಿಸಿ ಅದನ್ನೇ ಪರಂಪರಾಗತ ನಂಬಿಕೆಯಾಗಿಸಿದ ಮಾದರಿಯನ್ನು ಗುರುತಿಸಬಹುದು. ಇಂತಹ ಹಲವು ಸಂದರ್ಭಗಳಲ್ಲಿ ಗಾದೆಗಳು ನಂಬಿಕೆಗಳಾಗಿ ಪರಿಪಾಲನೆಯಾಗುತ್ತವೆ. ಹೀಗೆಂದು ಇಲ್ಲಿ ಭಾಷೆಯು ಪೂರ್ತಿ ಉಳ್ಳವರ ಸೊತ್ತಾಗಿತ್ತೆಂದು ಏಕಪಕ್ಷೀಯ ತೀರ್ಮಾನಕ್ಕೆ ಬರುವುದೂ ಸರಿಯಲ್ಲ. ಕಾರಣ ದುರ್ಬಲ ಜಾತಿಗಳು ತಮ್ಮ ಮೇಲಿನ ಅನ್ಯಾಯವನ್ನು ಪ್ರತಿಭಟಿಸಲು ಸಾಮಾಜಿಕವಾಗಿ ಅಸಮರ್ಥರಾದ ಸಂದರ್ಭಗಳಲ್ಲಿ ಭಾಷೆಯ ಮೂಲಕ ಮೌನ ಪ್ರತಿಭಟನೆ ಮಾಡುವುದನ್ನೂ ಗಾದೆಗಳು ತಿಳಿಸುತ್ತವೆ(ಉದಾಹರಣೆಗೆ ಬ್ರಾಣನ ಬೇಲೆದಾಯೆ ಆಯೆರೆ ಬಲ್ಲಿ; ಚೆಲ್ಲ್ಯನ ಎರು ಆಯೆರೆ ಬಲ್ಲಿ.) ಇಂತಹ ಪ್ರತಿಭಟನೆಗೆ ತುಳು ಪಾರ್ದನಗಳಲ್ಲಿ ವಿಫುಲವಾದ ನಿದರ್ಶನಗಳಿವೆ.
ತುಳುನಾಡಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತೀ ಜಾತಿಯ ಕುರಿತೂ ಒಂದಲ್ಲ ಒಂದು ಗಾದೆಗಳು ಸಿಕ್ಕಿಯೇ ಸಿಗುತ್ತವೆ. ಕೃಷಿ ಪ್ರಧಾನ ಸಂಸ್ಕೃತಿಯ ಸಂರಕ್ಷಣೆಯ ಕಾರಣದಿಂದ ಈ ಮೊದಲು ಹೇಳಿದಂತೆ ಜಾತಿಯ ಕುರಿತ ಹಲವು ಗಾದೆಗಳು ನಂಬಿಕೆಯಾಗಿಯೇ ಕಾರ್ಯನಿರ್ವಹಿಸುತ್ತವೆ .ಇಲ್ಲಿ ಗಾದೆಯನ್ನು ಪ್ರಯೋಗಿಸುವ ವ್ಯಕ್ತಿ,ಆತನ ಸ್ಥಾನಮಾನ,ಪ್ರಯೋಗದ ಧಾಟಿ(ಉಚ್ಚಾರದ ಏರಿಳಿತ) ಸಂದರ್ಭ ಮತ್ತು ಗಾದೆಯ ಪ್ರಯೋಗಕ್ಕೆ ಈಡಾಗುವ ವ್ಯಕ್ತಿ,ಆತನ ಸ್ಥಾನಮಾನ –ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾಷೆಯು ಉಂಟು ಮಾಡುವ ಅಸಮಾನತೆ ನಮ್ಮ ಅರಿವಿಗೆ ಬರುತ್ತದೆ. ಇಂತಹ ಸಾಮಾಜಿಕ ವಾತಾವರಣದಲ್ಲಿಯೇ ದುರ್ಬಲ ವರ್ಗಕ್ಕೆ ಸೇರಿದ ‘ಕುಂಬಾರನ‘ ಕುರಿತು ಗಾದೆಗಳು ರೂಪುಗೊಂಡವು. ಕುಂಬಾರಿಕೆ ಮತ್ತು ಕುಂಬಾರನ ಕುರಿತ ತುಳುಗಾದೆಗಳಲ್ಲಿ ವಿಶ್ಲೇಷಿಸಿದರೆ ಕುಂಬಾರಿಕೆಯ ಕುರಿತು ಸಹಜ ಗಾದೆ,ನಂಬಿಕೆಗಳು ಮೂಡಿಬಂದರೆ ಕುಂಬಾರನ ಕುರಿತು ರೂಪುಗೊಂಡ ಗಾದೆಗಳು ಕುಂಬಾರನನ್ನು “ದುರ್ಬಲ” ವ್ಯಕ್ತಿಯಾಗಿ ಚಿತ್ರಿಸುತ್ತದೆ. ಆದರೆ ಜಾತಿಬದ್ದ ಸಮಾಜದ ಸಂರಕ್ಷಣೆಗೆ ಕುಂಬಾರ ಮತ್ತು ಆತನ ಮಡಕೆ ಅನಿವಾರ್ಯವೆಂಬ ಅರಿವು ಕೆಲವು ಗಾದೆಗಳಲ್ಲಿಯಾದರೂ ಒಡಮೂಡಿರುವುದು ವಿಚಾರಯೋಗ್ಯ.
ಏನೂ ತಿಳಿಯದ ಮುಗ್ದ ಕುಂಬಾರನೊಬ್ಬ ಕುದುರೆ ತರುವ ಮೊದಲು ಅಥವಾ ಶೀಘ್ರವಾಗಿ ದಪ್ಪಗಾಗಬೇಕೆಂದು ಹುರುಳಿ ತಂದು ಹಾಕಿದ ಪ್ರಸಂಗ “ ಓಡಾರಿ ಕುಡು ಪಾಡಿಲೆಕೊ/ಕುದುರೆರ್ದ್ ದುಂಬು ಕುಡು ದಾಯೆಗ್ “ ಎಂಬ ಗಾದೆಗೆ ರೂಪು ನೀಡಿತು. ಈ ಹಿನ್ನೆಲೆಯನ್ನು ಇಟ್ಟುಕೊಂಡೇ ಕುಂಬಾರನನ್ನು “ಓಡಾರಿ” ಎಂಬ ಪದದ ಮೂಲಕ ಅಣಕಿಸುವ ಭಾಷೆ ಬೆಳವಣಿಗೆಯಾಯಿತು. ಒಂದೆಡೆ ಕುಂಬಾರನ ಮುಗ್ಧತೆ ಇನ್ನೊಂದೆಡೆ ದುರ್ಬಲ ಜಾತಿಯೊಂದನ್ನು ಪ್ರಬಲ ಜಾತಿ ಅಣಕವಾಡುವುದು ಇಲ್ಲಿ ಸ್ಪಷ್ಟವಾಗುತ್ತದೆ. ಪ್ರಸ್ತುತ ಈ ಗಾದೆ ಮಾತು ಕುಂಬಾರನನ್ನು ಮಾತ್ರ ಸೀಮಿತವಾಗಿರಿಸದೆ ‘ಹೆಡ್ಡತನ‘ ತೋರಿಸುವ ಯಾವ ಜಾತಿಯ ವ್ಯಕ್ತಿಗೂ ಸಂದರ್ಬಾನುಸಾರ ಅನ್ವಯವಾಗುತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಇಲ್ಲಿನ ‘ಓಡಾರಿ’ ಪದ ನೆಪ ಮಾತ್ರವಾಗಿದ್ದು, ಹೆಡ್ಡತನ ತೋರಿದ ಯಾವ ಜಾತಿಯ ವ್ಯಕ್ತಿಯೂ ಹೆಡ್ಡ ಕುಂಬಾರನಾಗುತ್ತಾನೆ. ಅಂದರೆ ಈ ಗಾದೆಯ ಕ್ರಿಯೆ ಮತ್ತು ಉದ್ದೇಶಕ್ಕೆ ಒಳಗಾಗುತ್ತಾನೆ. ಆದರೆ ಈ ಅಣಕ ಮಾಡುವ ವ್ಯಕ್ತಿ ತನಗೆ ಎಲ್ಲ ವಿಷಯ ತಿಳಿದಿದೆ ಎಂಬ ‘ಅಹಂ’ ಇರುವ ವ್ಯಕ್ತಿಯಾಗಿರುತ್ತಾನೆ. ಇಂದು ಕುಂಬಾರ ತನ್ನನ್ನು ‘ಓಡಾರಿ’ ಎಂದು ಕರೆದ ಸಮಾಜದ ಪ್ರಬಲರಿಗೇ ಮಾದರಿಯಾಗುವ ರೀತಿಯಲ್ಲಿ ವಿವಿಧ ರಂಗಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದಾನೆ. ಇದರಿಂದಾಗಿಯೇ ಇಂತಹ ಗಾದೆಯ ಕತೆ, ಪದಗಳು ಹಿಂದೆ ಸರಿದು ಗಾದೆ ಬಳಕೆಯಾಗುವ ಸಂದರ್ಭ ಮಾತ್ರ ಉಳಿದು ತನ್ನ ಭಾಷಿಕ ಕ್ರಿಯೆಯನ್ನು ನಿರ್ವಹಿಸುತಿರುತ್ತದೆ.
ಎಲ್ಲಾ ಭಾಷೆಗಳಲ್ಲಿಯೂ ಪ್ರಚಲಿತವಿರುವ “ಕುಂಬಾರನಿಗೆ ವರ್ಷ;ದೊಣ್ಣೆಗೆ ನಿಮಿಷ“ ಗಾದೆ ಕುಂಬಾರನ ಪರಿಶ್ರಮ ಹಾಗೂ ಕಷ್ಟವನ್ನು ಸಂಕೇತಿಸುತ್ತದೆ. ನಷ್ಟ ಸಂಭವಿಸುವ ಸಂದರ್ಭದಲ್ಲಿ ಬಳಕೆಯಾಗುವ ಈ ಗಾದೆ ‘ಕುಂಬಾರ’ ಪದದಾಚೆಗಿನ ಸಂದರ್ಭದ ದಾರುಣ ಚಿತ್ರವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ. ಕುಂಬಾರ ಮುಗ್ದನಾಗಿದ್ದ ಎನ್ನುವುದಕ್ಕೆ ಇನ್ನೊಂದು ಉದಾಹರಣೆ “ಆಯ ಇಂಬ್ಯ ನ್ಯಾಯೊ; ಓಡಾರಿ ಮಿತ್ತ್ ಗಾಯೊ” ಎಂಬ ಗಾದೆ. ಎಲ್ಲರಿಗೂ ಸುಲಭದಲ್ಲಿ ಸಿಗುವ, ಹಸಿ ಮಣ್ಣಿನಂತೆ ಮುಗ್ದವಾಗಿರುವ ಕುಂಬಾರ ಎಲ್ಲರಿಂದಲೂ ಶೋಷಣೆಗೆ ಒಳಗಾಗುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ”ಓಡಾರಿಗ್ ಅಡಿಯರೆ ಕರ ಇಜ್ಜಿ” –ಮಡಕೆಯನ್ನು ಸೃಷ್ಟಿಸುವವನಿಗೆ ಅಥವಾ ಇತರರಿಗೆ ಮಡಕೆ ನೀಡುವವನಿಗೆ ಸ್ವಂತ ಉಪಯೋಗಕ್ಕೆ ಮಡಕೆ ಇಲ್ಲದಿರುವುದು ಇಲ್ಲಿನ ವಿಪರ್ಯಾಸ. ಕುಂಬಾರನ ತೀವ್ರ ಬಡತನವನ್ನು ಇದು ಚಿತ್ರಿಸುತ್ತದೆ. ಈ ಬಡತನದ ಪರಿಣಾಮವಾಗಿಯೇ ಕುಂಬಾರ ಸಾಕಿದ ಜಾನುವಾರಿಗೆ ಬೈಹುಲ್ಲೂ ಸಿಗಲಾರದು.-“ಮಡ್ಯಳನ ನಾಯಿಗ್ ತೆಲಿ ಕಡಮೆ;ಓಡಾರಿ ಮೋಡಗ್ ಬೈ ಕಡಮೆ”. ಸಮಾನ ದುರ್ಬಲ ಜಾತಿಗಳ ವೃತ್ತಿಗಳ ಹೋಲಿಕೆ ಇಲ್ಲಿದೆ. ಕೆಲವೊಂದು ಸಂದರ್ಭಗಳಲ್ಲಿ ತನ್ನನ್ನು ಊರಿನಿಂದ ಹೊರದಬ್ಬುವ ಪ್ರಯತ್ನ ನಡೆದಾಗ ಕುಂಬಾರ “ಯಾನ್ ಕಲ್ತಿ ವಿದ್ಯೆಲಾ ಉಂಡು; ನಾಲೂರ ಮಣ್ಣುಲಾ ಉಂಡು“ ಎಂದು ತನ್ನ ಸ್ವಾಭಿಮಾನವನ್ನು ಪ್ರಕಟಿಸುತ್ತಾನೆ.
ಇಂತಹ ನೂರಾರು ಗಾದೆಗಳನ್ನು ವಿಶ್ಲೇಷಿಸುತ್ತಾ ಹೋದಂತೆ ನಮ್ಮ ಹಿರಿಯರ ಸಮಾಜ ರಚನೆಯ ಉದ್ದೇಶ ಸ್ಪಷ್ಟಗೊಳ್ಳುತ್ತದೆ. ಸಂಸ್ಕೃತಿ-ಭಾಷೆ ಅಂದಿನಿಂದ ಇಂದಿನ ತನಕವೂ ಒಂದೇ ರೀತಿಯಾಗಿ ಉಳಿದಿಲ್ಲ. ಮಿಶ್ರ ಸಂಸ್ಕೃತಿ–ಭಾಷೆಗಳ ಕಾಲದಲ್ಲಿ ನಾವಿದ್ದೇವೆ. ಕೃಷಿ ಪ್ರಧಾನ ಸಂಸ್ಕೃತಿಯ ಹಲವು ಪದಗಳು ನಮ್ಮ ಭಾಷೆಯಲ್ಲಿ ಕಣ್ಮರೆಯಾಗುತ್ತಾ ಯಂತ್ರ ನಾಗರೀಕತೆಯ ಪದಗಳು ಬೇರೂರುತ್ತಿವೆ. ಭಾಷೆಯೊಂದರ ಪದಸಂಪತ್ತು ನಾಶವಾಗುವುದು ಆ ಭಾಷೆಯ ಸಂಸ್ಕೃತಿ ನಾಶವಾಗಿ ಬದಲಾಗುತ್ತಿರುವುದರ ಸ್ಪಷ್ಟ ಸೂಚನೆಯನ್ನು ನೀಡುತ್ತದೆ. ಸಂಸ್ಕೃತಿಯಲ್ಲಿ ಬದಲಾವಣೆಗಳಾದ ಪರಿಣಾಮವಾಗಿಯೇ ನಮ್ಮ ಗಾದೆಗಳು ನಮ್ಮಿಂದ ದೂರ ಸರಿಯುತ್ತಿವೆ. ಬದಲಾದ ಸಂಸ್ಕೃತಿಗನುಗುಣವಾಗಿ ಹೊಸ ಶಬ್ದ ರೂಪಗಳು, ಗಾದೆಗಳು, ನಂಬಿಕೆಗಳು ಸೃಷ್ಟಿಯಾಗುತ್ತಿವೆ. ಹಳೇಯ ಪದಗಳು ವಿಭಿನ್ನ ಅರ್ಥದಲ್ಲಿ ಬಳಕೆಯಾಗುತ್ತಿವೆ. ಅಸಮಾನತೆಯ ಉದ್ದೇಶ ಸಾಧನೆಗಾಗಿ ಸೃಷ್ಟಿಯಾದ ಗಾದೆ ಪದಗಳು ಕಣ್ಮರೆಯಾದರೆ ವ್ಯಥೆ ಪಡುವ ಅಗತ್ಯವಿಲ್ಲ. ಆದರೆ ಎಷ್ಟೋ ಬಾರಿ ಬದಲಾವಣೆಗೊಳಗಾದ ಭಾಷೆಯಲ್ಲಿಯೂ ಅಸಮಾನತೆ ತುಂಬಿ ತುಳುಕಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇಂತಹ ಸಂದರ್ಭಗಳಲ್ಲಿ “ಭವಿಷ್ಯವೆಂದರೆ ಇನ್ನೊಂದು ದ್ವಾರದ ಮೂಲಕ ಮತ್ತೆ ಬರುವ ಭೂತಕಾಲವೇ ಹೊರತು ಬೇರೇನಲ್ಲ.”ಎಂದು ಫಿನೆರೋ ಹೇಳಿದ ಮಾತು ಸೂಕ್ತವೆನಿಸುತ್ತದೆ. ಪ್ರಬಲ ಭಾಷೆಗಳು ತುಳುವಿನಂತಹ ಭಾಷೆಗಳನ್ನು ನಿಯಂತ್ರಿಸುವುದು ಮತ್ತು ಅಲ್ಲಿನ ಸಂಸ್ಕೃತಿಯನ್ನು ತನ್ನತ್ತ ಆಕರ್ಷಿಸಿ ಬರಿದಾಗಿಸುತ್ತಿರುವುದು ಆಧುನಿಕ ನಾಗರೀಕತೆಯ ಅಸಮಾನತೆಗೊಂದು ಸಾಕ್ಷಿ. ಎಷ್ಟೋ ಬಾರಿ ಆಧುನಿಕ ಭಾಷೆ ತನ್ನಲ್ಲಿ ಸಾಹಿತ್ಯಿಕ ಜೀವ ಶಕ್ತಿಯನ್ನು ತುಂಬಿಸಲು ಹಳೇಯ ಭಾಷಾ ಶಕ್ತಿಗೆ ಜೋತು ಬೀಳಬೇಕಾದ ಅರಿವಾರ್ಯತೆ ಇದೆ. ಎಚ್ ಹೇನ್ ಎಂಬ ವಿದ್ವಾಂಸ ಉದ್ದರಿಸಿದಂತೆ ”ಪೂರ್ವಿಕರಿಗೆ ನಂಬಿಕೆಗಳಿದ್ದುವು;ಆದರೆ ಆಧುನಿಕರಾದ ನಮಗೆ ಬರೇ ಅಭಿಪ್ರಾಯಗಳಿವೆ.”
ಶಂಕರ ಕುಂಜತ್ತೂರು
ವಿಳಾಸ : ಬಾಳೆಹಿತ್ತಿಲು, ಕುಂಜತ್ತೂರು, ಮಂಜೇಶ್ವರ-671323
ಮೊಬೈಲ್ ನಂ : 09495131290
(www.kulalworld.com)



