ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ
ಬೆಳ್ತಂಗಡಿ: ಇಂದಬೆಟ್ಟಿನ ತನಿಯಪ್ಪ ಮೂಲ್ಯ (50) ಅವರು ಮೂಲತಃ ವೃತ್ತಿಯಲ್ಲಿ ಟೈಲರ್. ಪ್ರತಿದಿನ ಕ್ಷಣಬಿಡದೇ ಟೈಲರಿಂಗ್ ಮೆಶಿನ್ ತುಳಿದ ಪರಿಣಾಮ ಕಾಲು ನೋವು ಕಾಣಲಾರಂಭಿಸಿತು. ಅತ್ಯಂತ ಪ್ರೀತಿಯಿಂದ ನಿರ್ವಹಿಸುತ್ತಿದ್ದ ಹೊಲಿಯುವ ಕೆಲಸ ಬಿಟ್ಟ ಅವರು ಕಾಲುನೋವಿನ ಕಾರಣದಿಂದ ಆಯ್ಕೆ ಮಾಡಿದ್ದು ಚಾಲಕ ವೃತ್ತಿ. ಅದಕ್ಕಾಗಿ ಅಷ್ಟೋ ಇಷ್ಟೋ ಸಾಲ ಮಾಡಿ ಗೂಡ್ಸ್ ರಿಕ್ಷಾ ಖರೀದಿಸಿದರು. ಆದರೆ ರಿಕ್ಷಾಕ್ಕೆ ಸಾಮಾನು ಸರಂಜಾಮು ಹೊತ್ತು ತುಂಬಿಸುವಾಗ ಮತ್ತೆ ಕಾಲು ನೋವು ಕಾಣಿಸಿತು. ರಾತ್ರಿ ಮಲಗಿದರೆ ನಿದ್ದೆ ಹತ್ತದು. ನಿದ್ದೆಯ ಜೊಂಪಿನಲ್ಲಿ ಹಗಲು ಕೆಲಸ ಮಾಡಲಾಗದು ಎಂಬ ಸ್ಥಿತಿ. ಅದಕ್ಕಾಗಿ ಔಷಧ ತೆಗೆದುಕೊಂಡರೆ ಕಾಲು ದಪ್ಪವಾಗತೊಡಗಿತು. ಇದ್ದ ಬದ್ದ ವೈದ್ಯರಿಗೆಲ್ಲ ತೋರಿಸಿದರೂ ಖಾಯಿಲೆ ಏನೆಂದು ತಿಳಿಯಲಿಲ್ಲ.
ಕಿಡ್ನಿ ಹೋಯ್ತು
ಉಜಿರೆಯ ವೈದ್ಯರಲ್ಲಿ ತೋರಿಸಿದಾಗ ಅವರು ರೋಗ ಪತ್ತೆ ಹಚ್ಚಿ ಹೇಳಿದರು. ತನಿಯಪ್ಪರ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಚಿಕಿತ್ಸೆ ಕೊಡಿಸಿದಾಗ ಮೂರೂವರೆ ಲಕ್ಷ ರೂ. ಬಿಲ್ ಆಗಿತ್ತು. ಉಟ್ಟ ಲುಂಗಿ ಹಾಕಿದ ಅಂಗಿಯಲ್ಲಿ ಹೋದ ತನಿಯಪ್ಪರ ಬಳಿ ಬಿಡಿ ಮನೆಯಲ್ಲೂ ಮೂರು ಕಾಸು ಇರಲಿಲ್ಲ. ಹಣ ಕೊಡದೆ ಆಸ್ಪತ್ರೆಯಿಂದ ಹೊರ ಬರುವಂತಿಲ್ಲ. ರಿಕ್ಷಾ ಚಾಲಕರು, ಊರುವರು, ಬಂಧುಗಳು ಒಟ್ಟಾಗಿ ಹಣ ಸಂಗ್ರಹಿಸಿ ಆಸ್ಪತ್ರೆ ವಾಸದಿಂದ ಮುಕ್ತಿ ನೀಡಿದರು. ಇದಾಗಿ ವರ್ಷ ಕಳೆಯಿತು. ವಾರಕ್ಕೆ ಎರಡು ದಿನ ಡಯಾಲಿಸಿಸ್ ಕಡ್ಡಾಯ. ಜೀವನಾಧಾರಕ್ಕೆ ಇದ್ದ ರಿಕ್ಷಾ ಮಾರಿ ಆಗಿದೆ. ಪುತ್ತೂರಿನ ಆಸ್ಪತ್ರೆಗೆ ಹೋಗಿ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ.
ಕಣ್ಣು ಹೋಯ್ತು
ಈ ಮಧ್ಯೆ ಬಲಗಣ್ಣು ಸ್ವಲ್ಪ ಮಂಜಾಗತೊಡಗಿತು. ಚಿಕಿತ್ಸೆಗಾಗಿ ವೈದ್ಯರ ಬಳಿ ಹೋದಾಗ ಆಪರೇಶನ್ ಅಗತ್ಯ. ಪೊರೆ ತೆಗೆಯಬೇಕು ಎಂದರು. ಆಪರೇಶನ್ ಏನೋ ಆಯಿತು. ಹಾಕಿದ ಬ್ಯಾಂಡೇಜ್ ತೆಗೆಯುವ ದಿನ ಬಂತು. ಬ್ಯಾಂಡೇಜ್ ಬಟ್ಟೆ ಬಿಚ್ಚಿದಾಗ ಕಣ್ಣಿನ ಸುತ್ತ ರಕ್ತ ಕಪ್ಪಿಟ್ಟಿತ್ತು. ಪರಿಶೀಲಿಸಿದ ವೈದ್ಯರು ನಿಮಗೆ ಇನ್ನು ಕಣ್ಣು ಕಾಣಿಸದು ಎಂದರು. ಏಕೆಂದು ಕೇಳಿದರೆ ಆಪರೇಶನ್ ಮಾಡುವ ಮುನ್ನ ರಕ್ತ ಪರೀಕ್ಷೆ ಮಾಡಿರಲಿಲ್ಲ. ಮಧುಮೇಹ ಇದ್ದ ಕಾರಣ ರಕ್ತ ಹೆಪ್ಪುಗಟ್ಟದೆ ಕಪ್ಪಿಟ್ಟಿದೆ ಎಂದರು. ಆಘಾತದ ಮೇಲೆ ಮತ್ತೊಂದು ಹೊಡೆತ.
ಮುರುಕು ಮನೆ
ಈಗ ಮನೆ ಮಾರಲು ಹೊರಟಿದ್ದಾರೆ. ಇಂದಬೆಟ್ಟಿನ ಜನತಾ ಕಾಲನಿಯ ಐದು ಸೆಂಟ್ಸ್ನಲ್ಲಿ ಬಿದಿರ ಗಳದ ಮೇಲೆ ಹಂಚು ಹೊದೆಸಿದ ಮಾಡಿನ ಮನೆ. ಮನೆಯೊಳಗೆ ಹೋಗಿ ತಲೆ ಎತ್ತಿ ನೋಡಿದರೆ ಅಲ್ಲಲ್ಲಿ ನಕ್ಷತ್ರಗಳು ಕಾಣುತ್ತವೆ. ನೇರ ಆಕಾಶ ನೋಡಬಹುದಾದ ಮಾಡಿನಲ್ಲಿ ಹಗಲು ಸೂರ್ಯನ ಬಿಸಿಲು, ಮಳೆ ಬಂದಾಗ ನೀರ ಹನಿಗಳು, ರಾತ್ರಿಯ ಚಂದಿರನ ಬೆಳದಿಂಗಳು ಎಲ್ಲವೂ ಮನೆಯೊಳಗೆ ಬೀಳುವಂತಿದೆ. ಬಿದಿರ ಗಳ ಎಂದೋ ಹುಳ ಹಿಡಿದಿದೆ. ಇಂತಹ ಮನೆ ಕೊಳ್ಳುವವರಾರು. ಆದರೆ ಚಿಕಿತ್ಸೆಗೆ ಹಣ ಇಲ್ಲ.
ತನಿಯಪ್ಪರ ಪತ್ನಿ ಪುಷ್ಪಾ ಬಂಗಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಹಾಯಕಿ. ಅವರ ಸಂಬಳವೇ ಜೀವನಾಧಾರ. ಸಾಲದ್ದಕ್ಕೆ ಬೆದ್ರಬೆಟ್ಟು ಬಳಿ ತಳ್ಳುಗಾಡಿ ಹಾಕಿ ಕುಳಿತ ತನಿಯಪ್ಪರಿಗೆ ದಿನದಲ್ಲಿ ಐವತ್ತು ರೂ. ವ್ಯಾಪಾರ ಆದರೆ ಅದೇ ಹೆಚ್ಚು!.
ಪ್ರತಿಭಾನ್ವಿತ ಮಕ್ಕಳು
ಇವರಿಗೆ ಇಬ್ಬರು ಮಕ್ಕಳು ಮಗ ಪ್ರತಾಪ್ ಈಗ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಸೈನ್ಸ್ ವಿಭಾಗದ ವಿದ್ಯಾರ್ಥಿ. ಎಸೆಸೆಲ್ಸಿಯಲ್ಲಿ ಬೆದ್ರಬೆಟ್ಟು ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 574 ಅಂಕ ಗಳಿಸಿದ ಪ್ರತಿಭಾವಂತ. ಆದರೆ ಕಾಲೇಜು ಫೀಸು ಕಟ್ಟಲು ಹಣವಿಲ್ಲ. ಆದ್ದರಿಂದ ಸ್ವಲ್ಪ ಮಾತ್ರ ಕಟ್ಟಿದ್ದಾರೆ. ಮಗಳು ಪ್ರತೀಕ್ಷಾ. ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸೇರಿಸಲು ಹಣಕಾಸು ಇಲ್ಲದ ಕಾರಣ ಸರಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾರೆ.
ಸಹಾಯ ಮಾಡಿ
ಚಿಕಿತ್ಸೆ ಮುಖ್ಯ ಅಲ್ಲ, ಮಕ್ಕಳ ಓದು ಮುಖ್ಯ ಎನ್ನುವ ಇವರಿಗೆ ಇಂದಬೆಟ್ಟು ಚರ್ಚ್ನವರು ಹಣಕಾಸಿನ ನೆರವು ನೀಡಿದ್ದಾರೆ. ರಿಕ್ಷಾ ಚಾಲಕರ ಸಂಘದವರು ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಬಂಧುಗಳು, ತನಿಯಪ್ಪರ ಸಹೋದರರು ತಮ್ಮ ಕಷ್ಟದ ನಡುವೆಯೂ ನೆರವು ನೀಡಿದ್ದಾರೆ. ಆದರೆ ಎಲ್ಲವೂ ಆಸ್ಪತ್ರೆ ಬಿಲ್ಲುಗಳ ಮಧ್ಯೆ ಅರೆಕಾಸಾಗಿ ಸಾಕಾಗಿದೆ. ನಾವು ನೀವು ನೀಡುವ ಸಣ್ಣ ನೆರವು ಇವರಿಗೆ ದೊಡ್ಡ ಸಹಕಾರವಾಗಲಿದೆ.
ವಿಳಾಸ : ತನಿಯಪ್ಪ ಮೂಲ್ಯ. ಕೊಡಂಗೆ ಮನೆ. ಬೆದ್ರಬೆಟ್ಟು. ಇಂದಬೆಟ್ಟು ಗ್ರಾಮ. ಬಂಗಾಡಿ ಅಂಚೆ. ಬೆಳ್ತಂಗಡಿ ತಾಲೂಕು. 574214 ದ.ಕ.
ಹಣಕಾಸಿನ ನೆರವು ನೀಡುವವರಿಗೆ : ತನಿಯಪ್ಪ ಮೂಲ್ಯ. ಬಂಗಾಡಿ ಸಿಂಡಿಕೇಟ್ ಬ್ಯಾಂಕ್. ಐಎಫ್ಎಸ್ಸಿ : ಎಸ್ವೈಎನ್ಬಿ 0000198. ಎಕೌಂಟ್ ನಂಬರ್ : 01982200028628.
ದೂರವಾಣಿ : 8277408410
ಬರಹ : ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ
(ಕೃಪೆ : ಉದಯವಾಣಿ)