ಮಂಗಳೂರು : ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಆಗಸ್ಟ್ 28ರಂದು ಸುರತ್ಕಲ್ ಕುಲಾಲ ಸಂಘದ ಸಭಾಭವನದಲ್ಲಿ ನಡೆಯಿತು.
ಯುವ ವೇಧಿಕೆಯ ರಾಜ್ಯ-ವಿಭಾಗ- ಜಿಲ್ಲೆ ಹಾಗೂ ವಿಧಾನ ಸಭಾ ವಿಭಾಗಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಿವೃತ್ತ ಲೋಕಸೇವಾ ಆಯೋಗದ ಸದಸ್ಯ ಡಾ. ಕೃಷ್ಣ ಪ್ರಸಾದ್ ಉದ್ಘಾಟಿಸಿ ಶುಭಾಂಶನೆಗೈದರು.
ವೇದಿಕೆಯ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದ ಯುವ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ದಿಕ್ಸೂಚಿ ಭಾಷಣಗೈದು ಮಾತನಾಡುತ್ತಾ ಕುಲಾಲ ಯುವವೇದಿಕೆ ಹತ್ತು ವರ್ಷಗಳಿಂದ ನಡೆದು ಬಂದ ಬಗೆ , ಆರಂಭದ ಎಡರು ತೊಡರುಗಳ ನಡುವೆ ಸಮಾಜಮುಖೀಯಾಗಿ ಮಾಡಿದ ಕೆಲಸಗಳು, ಸಮುದಾಯದ ಸಂಘ- ಸಂಸ್ಥೆ , ಬ್ಯಾಂಕ್- ದೇವಸ್ಥಾನಗಳ ಏಳಿಗೆಯಲ್ಲಿ ತೊಡಗಿಸಿಕೊಂಡ ಬಗೆಯನ್ನು ವಿವರಿಸಿ, ಸಮಾಜದ ಯುವಕರು ಕೇವಲ ಧರ್ಮ, ದೇವರು, ಜಾತಿಗಳ ಒಳಗೆ ತಲ್ಲೀನರಾಗದೆ ರಾಜಕೀಯದತ್ತ ಮುಖ ಮಾಡಬೇಕು. ಕರಾವಳಿಯಲ್ಲಿರುವ ಸುಮಾರು 3 ಲಕ್ಷ ಮಂದಿ ಕುಲಾಲರು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಾಪು ಕ್ಷೇತ್ರಗಳಲ್ಲಿ ಶಾಸಕ ಸ್ಥಾನಕ್ಕೆ ಒತ್ತಾಯಿಸಬೇಕು. ಇಲ್ಲದಿದ್ದರೆ ಕುಲಾಲರಿಗೆ ಬಿಜೆಪಿ ಹಾಗು ಕಾಂಗೈನವರು ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂಬ ಕೂಗನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ನಮಗೆ ನೀವು ನೀಡುವ ಭಿಕ್ಷೆ ಬೇಡ, ಸಾಮಾಜಿಕ ನ್ಯಾಯ ಬೇಕು ಎಂಬ ಹಕ್ಕೊತ್ತಾಯವನ್ನ ಪ್ರತೀ ಕುಲಾಲ ಸಂಘಗಳು ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವಕುಮಾರ ಚೌಡಶೆಟ್ಟ ಮಾತನಾಡಿ, ನಾವು ಏನು ಮಾಡಬೇಕಾದರೂ ಸಮರ್ಥ ಗುರಿ ಮತ್ತು ಗುರುಗಳ ಅಗತ್ಯವಿದೆ. ಕರಾವಳಿ ಕುಲಾಲ ವೇದಿಕೆಯು ಉನ್ನತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರಕಾರದ ಗಮನಸೆಳೆಯಬೇಕು. ಸರ್ವಜ್ಞ ಜಯಂತಿಯಂಥ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸರ್ವಜ್ಞ ಪೀಠ ಸ್ಥಾಪನೆಗೆ ಒತ್ತಾಯಿಸಬೇಕು ಎಂದರು.
ಸಭಾಧ್ಯಕ್ಷ ಸ್ಥಾನದಲ್ಲಿ ಮಾತನಾಡಿದ ಯುವ ವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವೀರಾಜ್ ಮಾತನಾಡಿ ಕುಂಬಾರರ ವೃತ್ತಿ ಶ್ರೇಷ್ಠವಾಗಿದ್ದು, ಇಂದು ಅವನತಿಯಂಚಿನಲ್ಲಿದೆ. ಯುವ ಪೀಳಿಗೆಗೆ ಈ ಕುರಿತು ಕಾರ್ಯಾಗಾರ ಆಯೋಜಿಸಿ ವೃತ್ತಿಯ ಮಹತ್ವವನ್ನು ತಿಳಿಹೇಳಬೇಕಾಗಿದೆ. ಕುಂಬಾರರೆನ್ನಲು ಯಾರಿಗೂ ಕೀಳರಿಮೆ ಬೇಡ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೋಹಿತ್ ಕುಲಾಲ್, ಸದಾನಂದ ನಾವರ, ಗಂಗಾಧರ ಬಂಜನ್, ಸತೀಶ್ ಕುಲಾಲ್ ನಡೂರು, ಜಯೇಶ್ ಗೋವಿಂದ್, ಗಣೇಶ್ ಎಂ ಮುಂತಾದವರ ಜೊತೆ ದಕ ಹಾಗು ಉಡುಪಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿ ಗಳು ಉಪಸ್ಥಿತರಿದ್ದರು.
ದಿನಕರ ಅಂಚನ್, ಪುಷ್ಪರಾಜ್, ಶ್ರೀಶ ಕರ್ಮರನ್, ಕವಿತಾ ಗಣೇಶ್ ಮುಂತಾದವರು ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು.
ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ಪದಗ್ರಹಣ ಸಮಾರಂಭ
Banner
2 Mins Read