ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2015 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಿದ್ದು, ಗೌರವ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತನಡ್ಕದಲ್ಲಿ ತಂದೆ ಮುತ್ತ ಮೂಲ್ಯ ಮತ್ತು ತಾಯಿ ಅಬ್ಬು ರವರಿಗೆ 1943ನೇ ಇಸವಿಯಲ್ಲಿ ಜನಿಸಿದ ಕುಂಞ ಕುಲಾಲರು ವಿದ್ಯಾಭ್ಯಾಸವನ್ನು 5ನೇ ತರಗತಿಗೆ ನಿಲ್ಲಿಸಿ ಯಕ್ಷಗಾನ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು. ಆರಂಭದಲ್ಲಿ ಕುರಿಯ ವಿಠಲ ಶಾಸ್ತ್ರಿಯವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ಶ್ರೀ ಧರ್ಮಸ್ಥಳ ಮೇಳದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಸ ತೊಡಗಿದರು. ಖ್ಯಾತ ವೇಷಧಾರಿ ದಿ. ಸಣ್ಣ ತಿಮ್ಮಪ್ಪನವರಿಂದ ಪರಂಪರೆಯ ಕುಣಿತದಲ್ಲಿ ತಜ್ಞತೆಯನ್ನು ಗಳಿಸಿದರು. ಮುಲ್ಕಿ, ಕುತ್ಯಾಲ, ಸೌಕೂರು, ಇರಾ, ಕೊಲ್ಲೂರು, ಆದಿಸುಬ್ರಹ್ಮಣ್ಯ ಮೇಳಗಳಲ್ಲಿ ಹತ್ತಾರು ವರ್ಷಗಳ ಕಲಾ ಸೇವೆಯನ್ನು ಸಲ್ಲಿಸುತ್ತಾ ಹೆಸರಾಂತ ಕಲಾವಿದರೊಂದಿಗೆ ಅಭಿನಯಿಸಿದರು. ಶ್ರೀ ಅನ್ನಪೂರ್ಣೇಶ್ವರಿ ದಶಾವತಾರ ಮೇಳದಲ್ಲೂ ಹಲವಾರು ವರ್ಷ ಪ್ರಧಾನ ವೇಷಧಾರಿಯಾಗಿ ಮೆರೆದರು.
ದೇವೇಂದ್ರ, ಅರ್ಜುನ, ಹಿರಾಣ್ಯಕ್ಷ, ಕೌಂಡ್ಲಿಕ, ಇಂದ್ರಜೀತ್ ಇಂತಹ ಪೌರಾಣಿಕ ಪಾತ್ರಗಳಲ್ಲದೆ, ಬುದಬಾರೆ, ಚೆನ್ನಯ್ಯ, ದುಗ್ಗಣ ಕೊಂಡೆ ಯಂತಹ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು. ತುಳು ಪ್ರಸಂಗಗಳಲ್ಲಿ ಇವರದ್ದು ಅಮೋಘ ಅಭಿನಯ. 50 ವರ್ಷಗಳಿಗಿಂತಲೂ ಹೆಚ್ಚು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪುವಿನಿಂದ ಮೆರೆದ ಈ ಸಾಧಕರಾದ ಶ್ರೀ ಬೇತ ಕುಂಞ ಕುಲಾಲ್ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2015ರ ಸಾಲಿನ ಗೌರವ ಪ್ರಶಸ್ತಿ ನೀಡುತ್ತಿದೆ.
ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
Kulal news
1 Min Read