ಹಿಂದೆ ಕುಂಬಾರರು ಬೇಸಿಗೆ ಸಮಯದಲ್ಲಿ ಕೆರೆಗಳು ಬತ್ತಿದಾಗ ಅದರಲ್ಲಿನ ಜೇಡಿ ಮಣ್ಣು ತಂದು ಗಣೇಶನ ಮೂರ್ತಿ ಮಾಡುತ್ತಿದ್ದರು. ಅದರಿಂದ ಕೆರೆಯಲ್ಲಿ ಹೂಳೆತ್ತಿದಂತೆಯೂ ಆಗುತ್ತಿತ್ತು. ಗಣೇಶನ ಹಬ್ಬ ಮುಗಿಯುವ ಹೊತ್ತಿನಲ್ಲಿ ಕೆರೆ-ಕಟ್ಟೆಗಳು ತುಂಬಿರುತ್ತಿದ್ದವು. ಆಗ ಈ ಮಣ್ಣಿನ ಗಣೇಶಗಳನ್ನು ವಿಸರ್ಜಿಸಿದಾಗ ಅದರ ಜೇಡಿ ಮಣ್ಣು ಕೆರೆ-ಕಟ್ಟೆಗಳು ಒಡೆಯದಂತೆ ತಡೆಯುತ್ತಿತ್ತು.
ಗೌರಿ ಗಣೇಶನ ಹಬ್ಬ ಸಮೀಪಿಸುತ್ತಿದೆ. ಇದು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರ ಏಕತೆಗಾಗಿ, ಸ್ವಾತಂತ್ರ್ಯ ಹೋರಾಟದ ಪ್ರಚಾರಕ್ಕಾಗಿ ಸಾಮೂಹಿಕ ಮತ್ತು ಸಾರ್ವಜನಿಕ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸಲು ಬಾಲಗಂಗಾಧರ ತಿಲಕ್ ಕರೆ ನೀಡಿದ್ದರು. ಬ್ರಿಟಿಷರ ಜೊತೆ ಹೊರಾಡಲು ಈ ಹಬ್ಬವನ್ನೊಂದು ವೇದಿಕೆಯಾಗಿ ಬಳಸಿ ಕೊಳ್ಳಲಾಗಿತ್ತು. ಆದರೆ ಇವತ್ತು ನಾವು ಗಣೇಶ ಹಬ್ಬವನ್ನು ಆಚರಿಸುವ ಪರಿ ಯಾವ ರೀತಿ ಪರಿಸರದ ಮೇಲೆ ಹಾನಿಯನ್ನುಂಟು ಮಾಡುತ್ತಿದೆ ಎಂದು ನಾವು ಯೋಚಿಸಬೇಕಾಗಿದೆ.
ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಜೇಡಿ ಮಣ್ಣು ಮತ್ತು ಆವೆ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಬೇಕೆಂಬ ಶಾಸ್ತ್ರವಿದೆ. ಆದರೆ ಇತ್ತೀಚೆಗೆ ಮೂರ್ತಿಗಳನ್ನು ಒಬ್ಬರಿಗಿಂತ ಒಬ್ಬರು ಎತ್ತರವಾಗಿ, ರಂಗುರಂಗಾಗಿ ತಯಾರಿಸಿ ಸ್ಪರ್ಧೆಗೆ ಬಿದ್ದಂತೆ ಕೂರಿಸುವ ಪರಿಪಾಠ ಹೆಚ್ಚುತ್ತಿದೆ. ದೊಡ್ಡ ದೊಡ್ಡ ಮೂರ್ತಿ ತಯಾರಿಸಿ, ಅದರ ಭಾರವನ್ನು ಕಡಿಮೆ ಮಾಡಲು ಮತ್ತು ಮೂರ್ತಿಗಳು ಆಕರ್ಷಕವಾಗಿ ಕಾಣಲು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಮಣ್ಣಿನ ಮೂರ್ತಿಗಳ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಲಾದ ಮೂರ್ತಿಗಳನ್ನು ಬಳಸುವುದರಿಂದ ಅದು ಗಣೇಶನ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ನೀರಿನಲ್ಲಿ ಕರಗುವುದಿಲ್ಲ ಮತ್ತು ನೀರಿನಲ್ಲಿ ಮುಳುಗದೆ ಮೇಲೆ ತೇಲುತ್ತದೆ. ಅನೇಕ ಕಡೆ ವಿಸರ್ಜಿತ ಮೂರ್ತಿಗಳನ್ನು ಒಟ್ಟು ಮಾಡಿ ಅವುಗಳ ಮೇಲೆ ಬುಲ್ಡೋಜರ್ಗಳನ್ನು ಚಲಾಯಿಸಲಾಗುತ್ತದೆ. ಅದರ ಪಾಪ ಮನುಷ್ಯ ಕುಲದ ಮೇಲೆ ಪ್ರಕೃತಿ ವಿಕೋಪದ ಮೂಲಕ ಆಗುತ್ತದೆ. ಅದೇ ಈಗ ನಾವು ಅನುಭವಿಸುತ್ತಿರುವ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ರೈತನ ಸಾವುಗಳು. ಇದರ ಜೊತೆಗೆ ನಮ್ಮ ತಪ್ಪಿನಿಂದ ಸಕಲ ಪ್ರಾಣಿ-ಪಕ್ಷಿಗಳು, ಜೀವ ಜಂತುಗಳು ಪ್ರಕೃತಿಯ ವಿಕೋಪಕ್ಕೆತುತ್ತಾಗಬೇಕಾಗುತ್ತದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳಿಂದ ಅನೇಕ ಕಡೆ ಸಮುದ್ರ, ಕೆರೆ, ನದಿ ನೀರುಗಳು ಕಲುಷಿತಗೊಂಡು ಶುದ್ಧ ನೀರಿನ ಆಕರಗಳು ಕಾಣದಂತಾಗುತ್ತಿವೆ. ಅದೇ ಜೇಡಿ ಮಣ್ಣಿನಿಂದ ಮಾಡಿದ ಮೂರ್ತಿಗಳು ಬೇಗ ನೀರಿನಲ್ಲಿ ಕರಗುವುದರಿಂದ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ.
ಪಿಒಪಿ ಗಣಪ ಶಾಸ್ತ್ರಕ್ಕೂ ವಿರುದ್ಧ
ಇಲ್ಲಿ ಮತ್ತೂಂದು ವೈಶಿಷ್ಟವನ್ನು ನಾವು ಹೆಚ್ಚಾಗಿ ಗಮನಿಸಿಲ್ಲ. ಗಣಪನ ಹಬ್ಬ ಒಂದು ಪರಿಸರ ಸ್ನೇಹಿ ಸಂದೇಶವನ್ನು ನೀಡುತ್ತದೆ. ಅದು ಏನೆಂದರೆ, ಹಿಂದೆ ಕುಂಬಾರರು ಬೇಸಿಗೆಯ ಸಮಯದಲ್ಲಿ ಕರೆಗಳು ಬತ್ತಿದಾಗ ಅದರಲ್ಲಿನ ಜೇಡಿ ಮಣ್ಣನ್ನು ತಂದು ಗಣೇಶನ ಮೂರ್ತಿಯನ್ನು ಮಾಡುತ್ತಿದ್ದರು. ಇದು ಒಂದು ರೀತಿಯಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸ ಆದಂತಾಗುತ್ತಿತ್ತು. ಆಮೇಲೆ ಗಣೇಶನ ಹಬ್ಬ ಮುಗಿಯುವ ಹೊತ್ತಿನಲ್ಲಿ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಆಗ ಈ ಮಣ್ಣಿನ ಗಣೇಶಗಳನ್ನು ವಿಸರ್ಜನೆ ಮಾಡಿದಾಗ ಆ ಜೇಡಿ ಮಣ್ಣು ಕೆರೆ-ಕಟ್ಟೆಗಳು ಒಡೆಯದಂತೆ ತಡೆಯುತ್ತಿತ್ತು.
ಆದರೆ ಇತ್ತೀಚಿನ ಆಚರಣೆ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಭರಾಟೆಯಿಂದಾಗಿ ನಾವ್ಯಾರೂ ಪರಿಸರದ ಮೇಲೆ ಇದರಿಂದಾಗುತ್ತಿರುವ ಹಾನಿಯ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎನ್ನಿಸುತ್ತದೆ. ಇದು ಹಬ್ಬದ ಹೆಸರಿನಲ್ಲಿ ನಮ್ಮಿಂದಾಗುತ್ತಿರುವ ಪ್ರತ್ಯಕ್ಷ ಅಪಚಾರ. ಪರಿಸರವನ್ನೂ ದೇವರೆಂದು ನಂಬುವ ನಾವು ಇನ್ನೊಂದು ದೇವರ ಉತ್ಸವಕ್ಕಾಗಿ ಪರಿಸರವನ್ನು ಹಾಳು ಮಾಡುವುದು ಎಷ್ಟು ಸರಿ? ಆದ್ದರಿಂದ ಮಣ್ಣಿನ ಗಣಪತಿ ತಂದು, ಆರಾಧಿಸಿ, ಪೂಜಿಸಿ, ಶಾಸ್ತ್ರೋಕ್ತವಾಗಿ ವಿಸರ್ಜಿಸಿದರೆ ಯಾವ ಸಮಸ್ಯೆಯೂ ಆಗದು. ಹಿಂದೂ ಧರ್ಮದ ಪ್ರಕಾರ ನೀರಿನಲ್ಲಿ ಗಣೇಶನನ್ನು ಕೂರಿಸುವ ರೀತಿಯಲ್ಲಿ ವಿಸರ್ಜನೆ ಮಾಡಬೇಕು. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿದ ಗಣೇಶನನ್ನು ವಿಸರ್ಜಿಸಿದಾಗ ಮೂರ್ತಿಯ ಕೈ ಒಂದು ಕಡೆ, ತಲೆ ಒಂದು ಕಡೆ, ಮುಖ ಒಂದು ಕಡೆ ಹೀಗೆ ಇಡೀ ದೇಹ ಛಿದ್ರವಾಗಿ ಹೋಗುತ್ತದೆ. ನೀವೇ ಒಮ್ಮೆ ಯೋಚಿಸಿ, ಮಣ್ಣಿನ ಗಣಪ ಮಾತ್ರ ಕರಗುತ್ತಾನೆ. ಮುಂದಿನ ವರುಷ ಮತ್ತೆ ಅದೇ ಮುಳುಗಿರುವ ಕೆರೆಯಿಂದ ಎದ್ದು ಬರುತ್ತಾನೆ. ಪ್ಲಾಸ್ಟರ್ ಆಫ್ ಪ್ಯಾರಿಸ್ನ ಗಣಪ ಕರಗುವುದೂ ಇಲ್ಲ, ಮುಂದಿನ ವರ್ಷ ಮತ್ತೆ ನಮಗೆ ದೊರಕುವುದೂ ಇಲ್ಲ.
ನಾವು ಊರಿಗೊಂದು ಗಣಪತಿ ಮೂರ್ತಿಯನ್ನು ಮಾತ್ರ ಕೂರಿಸುವುದರ ಮೂಲಕ ಪರಿಸರವನ್ನು ಕಾಪಾಡಬೇಕಿದೆ. ನಾವು ಈಗ ಗಣೇಶನನ್ನು ಕೂರಿಸುತ್ತಿರುವ ಪರಿಯಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಯಾಕೆಂದರೆ, ಇಂದು ಸಾಮೂಹಿಕ ಗಣೇಶನ ಹಬ್ಬದ ಆಶಯ ಯಾರದೋ ಪ್ರತಿಷ್ಠೆಗಾಗಿ, ಇನ್ನಾರದೋ ಹಣ ಮಾಡಿಕೊಳ್ಳುವ ಹುನ್ನಾರಕ್ಕಾಗಿ ಅಥವಾ ಸ್ಥಳೀಯವಾಗಿ ಹೆಸರು ಗಳಿಸುವುದಕ್ಕಾಗಿ ನಡೆಯುವುದೇ ಹೆಚ್ಚು. ತಾವು ಗಣೇಶನನ್ನು ಕೂರಿಸಿರುವುದು ಊರಿಗೆಲ್ಲ ತಿಳಿಯುವಂತೆ ಕರ್ಕಶ ಕಠೊರವಾಗಿ ಧ್ವನಿವರ್ಧಕಗಳನ್ನು ಹಾಕಿ, ವಿಪರೀತ ಶಬ್ದ ಮಾಡುತ್ತ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಅಂದರೆ ನಮಗೆ-ನಿಮಗೇ ತೊಂದರೆ. ಗಣೇಶೋತ್ಸವಗಳಲ್ಲಿ ಪ್ರತಿದಿನ ಪೂಜೆ, ಪುನಸ್ಕಾರ, ಪ್ರಸಾದ ವಿನಿಯೋಗಗಳಿಂದ ಕಸದ ರಾಶಿ ಉತ್ಪಾದನೆಯಾಗುತ್ತಿದೆ. ಅದು ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೈಕ್ಗಳಿಂದ ಹೊರಹೊಮ್ಮುವ ಅತ್ಯಧಿಕ ಡೆಸಿಬಲ್ನ ಶಬ್ದದಿಂದ ಹೃದಯ ರೋಗ ಮತ್ತು ರಕ್ತದೊತ್ತಡವಿರುವವರ ಮೇಲಾಗುವ ಪರಿಣಾಮವನ್ನು ಲೆಕ್ಕಿಸದೆ ಇಂದು ಗಣೇಶನ ಹಬ್ಬವನ್ನು ಮನಸ್ಸಿಗೆ ಬಂದಂತೆ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ.
ಗಣೇಶನ ಹಬ್ಬದ “ವಿಪರೀತ’ ಆಚರಣೆ ಬಗ್ಗೆ ಹೇಳಿದಾಗಲೆಲ್ಲ ಕೆಲವರು ಇನ್ನೊಂದು ಧರ್ಮದ ಕಡೆ ಬೊಟ್ಟು ತೋರಿಸುತ್ತ “ಆಗೇಕೆ ನೀವ್ಯಾರೂ ಮಾತನಾಡುವುದಿಲ್ಲ’ ಎಂದು ಕೇಳುತ್ತಾರೆ. ಒಬ್ಬರು ಮಾಡುವ ತಪ್ಪನ್ನೇ ಇನ್ನೊಬ್ಬರು ಮಾಡಿದರೆ ಅದು ಸರಿಯಾಗುತ್ತದೆಯೇ? ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಹಾಗೂ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುವ ರೀತಿಯಲ್ಲಿ ಉತ್ಸವಗಳನ್ನು ಯಾರು ಆಚರಿಸಿದರೂ ತಪ್ಪೇ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿಂದಲೇ ಆರಂಭವಾದರೆ ಒಳಿತು.
ಒಂದೇ ಕಡೆ ಹಬ್ಬ ಆಚರಿಸೋಣ
ಮುಖ್ಯವಾಗಿ ದೊಡ್ಡ ದೊಡ್ಡ ಗಣಪತಿಗಳನ್ನು ಇಟ್ಟು, ಬಾವಿ, ಕೆರೆ-ಕುಂಟೆ, ಕಾಲುವೆ, ನದಿ ಪಾತ್ರಗಳಲ್ಲಿ ವಿಸರ್ಜಿಸುವುದರಿಂದ ಅದಕ್ಕೆ ಉಪಯೋಗಿಸಲಾದ ವಿಷಕಾರಕ ಬಣ್ಣಗಳಿಂದ ಸೀಸದ ಆಕ್ಸೆ„ಡ್ ಬಿಡುಗಡೆಯಾಗಿ ನೀರು ಕಲುಷಿತವಾಗುತ್ತದೆ. ಆ ನೀರು ಕುಡಿಯುವ ಜೀವ ಸಂಕುಲ ಮತ್ತು ಸಸ್ಯ ಸಂಕುಲಗಳ ಮೇಲೆ ತೀವ್ರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ, ಗ್ರಾಮ, ನಗರ ಹಾಗೂ ಪಟ್ಟಣ ಪ್ರದೇಶಗಳ ನಾಗರಿಕರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಪೂರ್ವಭಾವಿ ಸಭೆ ನಡೆಸಿ ಯಾವುದಾದರೂ ಒಂದು ಭಾಗದಲ್ಲಿ ಒಂದೇ ಕಡೆ ಗಣಪತಿ ಇಡುವ ಸಂಪ್ರದಾಯವನ್ನು ರೂಢಿಸಿಕೊಳ್ಳುವುದು ಪರಿಸರದ ಹಿತ ದೃಷ್ಟಿಯಿಂದ ಬಹಳ ಒಳ್ಳೆಯ ವ್ಯವಸ್ಥೆ. ಇದರಿಂದ ಹಣ, ಸಮಯ ಪರಿಸರ ಮುಂತಾದ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಂಡಂತಾಗುತ್ತದೆ. ಅಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ಗಣೇಶನ ಆರಾಧನೆ ಮಾಡಿದ ಸಂತೃಪ್ತಿಯೂ ಲಭಿಸುತ್ತದೆ.
ರಾಹುಲ್ ಪಿ. ತಾರದಾಳೆ, ಬೆಳಗಾವಿ
(ಕೃಪೆ : ಉದಯವಾಣಿ)