ಮುಂಬಯಿ: ಸಂಘಟನೆಗಳ ಕ್ರಿಯಾಯೋಜನೆಯಲ್ಲಿ ಧನಾತ್ಮಕ ಚಿಂತಕರ ಬೆಂಬಲ ಇಂದು ಅತ್ಯಗತ್ಯವಾಗಿದೆ. ಮುಂಬಯಿ ಮಹಾನಗರದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಕುಲಾಲ ಸಮಾಜ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಕೂಡಾ ನಿರೀಕ್ಷಿಸಿತ ಮಟ್ಟದ ಸದಸ್ಯ ಸಂಪತ್ತು ಹೊಂದಿಲ್ಲ. ಕೌಟುಂಬಿಕ ವಾತಾವರಣ, ಜಾತಿ ಬಾಂಧವರ ಶ್ರೇಯೋಭಿವೃದ್ಧಿಗಾಗಿ ನಿರ್ಮಿತ ವಾಗಿರುವ ಕುಲಾಲ ಭವನಕ್ಕೆ ಸುಮಾರು ನಾಲ್ಕೂವರೆ ಕೋ. ರೂ. ಗಳ ಆವಶ್ಯಕತೆಯಿದೆ. ಆರ್ಥಿಕ ಅಡಚಣೆಯನ್ನು ನಿವಾರಿಸಲು ವಿಶ್ವದಾದ್ಯಂತ ಕುಲಾಲ ಬಂಧುಗಳು ಯೋಜನೆ ಸಾಕಾರಗೊಳಿಸಲು ಕಟಿಬದ್ಧರಾಗಬೇಕು ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ನುಡಿದರು.
ಆ. 21ರಂದು ಮೀರಾರೋಡ್ ಪೂರ್ವದ ಶೀತಲ್ ನಗರ ತ್ರಿವೇದಿ ಕಾಂಪ್ಲೆಕ್ಸ್ನ ಮಹಾರಾಜ ಸಭಾಗೃಹದಲ್ಲಿ ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯ 13ನೇ ವಾರ್ಷಿಕೋತ್ಸವದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಲಾಲ ಭವನದ ತಳಮಹಡಿ, ಪ್ರಥಮ ಮಹಡಿ ಪೂರ್ಣಗೊಂಡಿದ್ದು, ಅಡಿಟೋರಿಯಂನ ಕೆಲಸ ಬಾಕಿ ಇದೆ. ಆರ್ಥಿಕ ನೆರವು ಕ್ಲಪ್ತ ಸಮಯದಲ್ಲಿ ಒದಗಿದರೆ ಡಿಸೆಂಬರ್ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಂಡ್ಕೂರು ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷ ಐತು ಆರ್. ಮೂಲ್ಯ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಜತೆಯಾಗಿ ಸಾಗಿದಾಗ ಸಂಘಟನೆ ಬಲಾಡ್ಯವಾಗುತ್ತದೆ. ತಾಮಸ ಸ್ವಭಾವಗಳೇ ದೂರವಾಗಿ ಸಾತ್ವಿಕ ಭಾವನೆಗಳು ಬೆಳೆಯುತ್ತವೆ. ಸಮಾಜದ ಅನಾಥ ಪ್ರಜ್ಞೆಯಿಂದ ನಾವು ಹೊರಬಂದು ಪ್ರಜ್ಞಾವಂತ ನಾಗರಿಕರಾಗಿ ದುಡಿದು ಸ್ವಜಾತಿ ಶಕ್ತಿಯನ್ನು ಬಲಪಡಿಸೋಣ ಎಂದರು.
ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ ಸ್ವಾಗತಿಸಿ, ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ದೇವದಾಸ್ ಕುಲಾಲ್ ಅವರು ಮಾತನಾಡಿ, ಕುಲಾಲ ಸಂಘ ಮುಂಬಯಿ ಇದರ ಪ್ರಾಯೋಜಕತ್ವದಲ್ಲಿರುವ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಸದಸ್ಯರಿಗೆ ಶೇ. 13ರಷ್ಟು ಲಾಭಾಂಶವನ್ನು ನೀಡಿದೆ. ಸಾಲ ಸೌಲಭ್ಯ ಸುಮಾರು 35 ಲಕ್ಷ ರೂ. ಗಳವರೆಗೂ ನೀಡಲು ಮುಂದಾಗಿದೆ. ಸದ್ಯದಲ್ಲಿಯೇ ನಲಸೋಪರ ಮತ್ತು ಪುಣೆಯಲ್ಲಿ ಶಾಖೆಯನ್ನು ವಿಸ್ತರಿಸುವ ಕಾರ್ಯಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನುಡಿದರು.
ಗೌರವ ಕಾರ್ಯದರ್ಶಿ ಡಿ. ಐ. ಮೂಲ್ಯ ಮಾತನಾಡಿ, ಗೌರವಾಧ್ಯಕ್ಷ ದಿ| ಪಿ.ಕೆ. ಸಾಲ್ಯಾನ್ ಅವರ ಕನಸಿನ ಕೂಸು ಕುಲಾಲ ಭವನದ ಉದ್ಘಾಟನೆ ಶೀಘ್ರದಲ್ಲೇ ನೆರವೇರಲು ನಾವೆಲ್ಲ ಅವಿಶ್ರಾಂತ ದುಡಿಯಬೇಕು. ಸದಸ್ಯ ಸಂಖ್ಯೆಯನ್ನು ಹೆಚ್ಚಿಸಿ, ಒಗ್ಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಥಾಣೆ-ಕರ್ಜತ್ ಪ್ರಾದೇಶಿಕ ಸಮಿತಿಯ ಆನಂದ ಕುಲಾಲ್, ಸಂಘಟಕ, ನ್ಯಾಯವಾದಿ ಉಮಾನಾಥ ಮೂಲ್ಯ, ಕೋಶಾಧಿಕಾರಿ ಜಯ ಎಸ್. ಅಂಚನ್, ಅಮೂಲ್ಯ ಪತ್ರಿಕೆಯ ನಾರಾಯಣ ನೆತ್ರಕೆರೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಸಹಕರಿಸುತ್ತಿರುವ ಪಿ. ಶೇಖರ ಮೂಲ್ಯ, ಆರ್. ಒ. ಬಂಗೇರ ಮತ್ತು ಪಿ.ಚಂದ್ರಶೇಖರ ಕುಲಾಲ್ ದಂಪತಿಗಳನ್ನು ಗಣ್ಯರು ಸಮ್ಮಾನಿಸಿದರು. ಶಂಕರ ವೈ. ಮೂಲ್ಯ, ರಸಿಕಾ ಮೂಲ್ಯ, ಗೀತಾ ಬಂಗೇರ, ಲತಾ ಬಂಗೇರ ಸಮ್ಮಾನಿತರನ್ನು ಪರಿಚಯಿಸಿದರು.
ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜನ್, ಕೋಶಾಧಿಕಾರಿ ಯೋಗೀಶ್ ಕೆ. ಬಂಗೇರ, ಮಹಿಳಾ ವಿಭಾಗದ ಸುರೇಖಾ ಬಂಗೇರ, ಗುರುವಂದನಾ ಭಜನಾ ಮಂಡಲಿಯ ಕಾರ್ಯದರ್ಶಿ ವಾಮನ್ ಮೂಲ್ಯ ಆದ್ಯಪಾಡಿ ಅವರು ಅತಿಥಿಗಳನ್ನು ಗೌರವಿಸಿದರು. ಉದಯ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಉದ್ಯಮಿ ನಾರಾಯಣ ಮೂಲ್ಯ, ರಘು ಮೂಲ್ಯ, ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ, ವಿವಿಧ ಸ್ಥಳೀಯ ಸಮಿತಿಗಳಿಂದ ಭಜನಾ ಮಂಗಳ್ಳೋತ್ಸವ ಮತ್ತು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ನಡೆಯಿತು.