ಬೆಳಗಾವಿ: ಸ್ವಾತಂತ್ರ್ಯೊತ್ಸವ ಸಂಭ್ರಮದ ದಿನ ಜಮ್ಮು-ಕಾಶ್ಮೀರ ಗಡಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಸಂಕೇಶ್ವರ ಪಟ್ಟಣದ ಯೋಧ ಸಾಗರ ಕುಂಬಾರ ಅಂತ್ಯಕ್ರಿಯೆ ಜನಸಾಗರದ ಮಧ್ಯೆ ಶುಕ್ರವಾರ ನೆರವೇರಿತು.
ಗೋವಾ ಮೂಲಕ ಬೆಳಗ್ಗೆ 10 ಗಂಟೆಗೆ ಪಟ್ಟಣ ತಲುಪಿದ ಪಾರ್ಥಿವ ಶರೀರ, ಕುಂಬಾರ ಓಣಿ ತಲುಪುತ್ತಿದ್ದಂತೆ ಯೋಧನ ತಾಯಿ ಹಾಗೂ ಸಹೋದರಿಯರ ಆಕ್ರಂದನ ಮುಗಿತು ಮುಟ್ಟಿತು. ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು 2 ಗಂಟೆ ಇಡಲಾಗಿತ್ತು.
ಮಧ್ಯಾಹ್ನ 12.30 ಕ್ಕೆ ಪಾರ್ಥಿವ ಶರೀರವನ್ನು ಅಲಂಕೃತಗೊಂಡ ತೆರೆದ ವಾಹನದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಗಾಂಧಿಚೌಕ್, ಅಜಾದ್ ರಸ್ತೆ, ಸುಭಾಷ ರಸ್ತೆ, ಮಡ್ಡಿ ಓಣಿ, ಪೋಸ್ಟ್ ರೋಡ್ ಮೂಲಕ ಹಳೇ ರಾಷ್ಟ್ರೀಯ ಹೆದ್ದಾರಿಯಿಂದ ಮೆರವಣಿಗೆ ಸ್ಮಶಾನದ ಕಡೆ ಸಾಗಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು, ಮಕ್ಕಳು ಕಂಬನಿ ಮಿಡಿದರು. ಮೆರವಣಿಗೆ ಸ್ಮಶಾನ ತಲುಪಿದಾಗ ಗೌರವಾರ್ಥವಾಗಿ ಮಿಲಿಟರಿ ಪಡೆಯಿಂದ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬಳಿಕ ವೀರಶೈವ ಸಂಪ್ರದಾಯದಂತೆ ಯೋಧ ಸಾಗರ ಕುಂಬಾರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನಿಡಸೋಸಿ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಯೋಧನ ಶವಪೆಟ್ಟಿಗೆಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಉಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತಿತರರು ಹಾಜರಿದ್ದರು.
ಜನ ಸಾಗರದ ಮಧ್ಯೆ ಯೋಧ ಸಾಗರ ಕುಂಬಾರ ಅಂತ್ಯಕ್ರಿಯೆ
Kulal news
1 Min Read