ಪಡುಬಿದ್ರಿ : ಕೈತೊಳೆಯಲೆಂದು ಹೊಳೆಯ ಬಳಿ ತೆರಳಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಹೆಜಮಾಡಿಯಲ್ಲಿ ನಿನ್ನೆ ಸಂಭವಿಸಿದೆ.
ಸುರತ್ಕಲ್ ಬಳಿಯ ಹೊಸಬೆಟ್ಟು ಶಿವಗಿರಿನಗರದ ಕೊಳ್ಪೆಕೋಡಿ ನಿವಾಸಿ, ಮೋನಪ್ಪ ಮೂಲ್ಯರ ಪುತ್ರ ಭಾಸ್ಕರ ಯಾನೆ ಅನ್ನು (42) ಮೃತ ದುರ್ದೈವಿ. ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ ತನ್ನ ಸಹೋದ್ಯೋಗಿಗಳಾದ ಕಿನ್ನಿಗೋಳಿಯ ಅಜಿತ್ ಮತ್ತು ಸುನಿಲ್, ಕುಳಾಯಿಯ ಮೂರ್ತಿ, ಹೊಸಬೆಟ್ಟು ನಿವಾಸಿ ಮಾಧವ ಮತ್ತು ಹೆಜಮಾಡಿಯ ಚೇತು ಎನ್ನುವವರೊಂದಿಗೆ ವಿಹಾರಕ್ಕೆಂದು ಮಾರುತಿ ಓಮ್ನಿಯಲ್ಲಿ ಹೆಜಮಾಡಿ ಮುಟ್ಟಳಿವೆ ಎಂಬಲ್ಲಿ ಸಮುದ್ರ ಕಿನಾರೆಗೆ ತೆರಳಿದ್ದರು. ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಜೊತೆಯಲ್ಲಿ ತಂದಿದ್ದ ಊಟವನ್ನು ಮುಗಿಸಿದ್ದರು. ಈ ಸಂದರ್ಭ ಭಾಸ್ಕರ ಕೈತೊಳೆಯಲೆಂದು ಪಕ್ಕದಲ್ಲಿಯೇ ಹರಿಯುವ ಕಾಮಿನಿ ಹೊಳೆಗಿಳಿದಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದರು. ಜೊತೆಯಲ್ಲಿದ್ದವರು ಅವರನ್ನು ಮೇಲಕ್ಕೆತ್ತಿ ಮೂಲ್ಕಿಯ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮೃತರ ಭಾವ ಯಾದವ ಮೂಲ್ಯರ ದೂರಿನ ಮೇರೆಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಹಾರಕ್ಕೆಂದು ತೆರಳಿದ್ದ ಭಾಸ್ಕರ ಮೂಲ್ಯ ಹೊಳೆಗೆ ಬಿದ್ದು ಮೃತ್ಯು
Kulal news
1 Min Read