ಬೆಳಗಾವಿ: ಸ್ವಾತಂತ್ರೋತ್ಸವ ಆಚರಣೆ ನಂತರ ರಾಷ್ಟ್ರಧ್ವಜ ಕೆಳಗಿಳಿಸುವಾಗ ವಿದ್ಯುತ್ ಸ್ಪರ್ಶಿಸಿ ಬೆಳಗಾವಿಯ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಿನ್ನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.
ಶ್ರೀನಗರದ ಆರ್ಮಿ ಕ್ಯಾಂಪ್ನಲ್ಲಿ ಈ ಅವಘಡ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಯೋಧ ಸಾಗರ್ ಕುಂಬಾರ (24) ಮೃತಪಟ್ಟವರು.
ನಿನ್ನೆ 70ನೇ ಸ್ವಾತಂತ್ರ್ಯ ದಿನಾಚರಣೆಗೆ ಆರ್ಮಿ ಕ್ಯಾಂಪ್ನಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ನಂತರ ನಿಯಮದಂತೆ ಸಂಜೆ ಧ್ವಜ ಅವರೋಹಣ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಸಾಗರ ಕುಂಬಾರ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ರಾಜಸ್ತಾನ ರೆಜಿಮೆಂಟಲ್ ನ್ಯಾಷನಲ್ ರೈಫಲ್ಸ್ ಪೋರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಗರ್ ಅವರು 2012ರಲ್ಲಿ ಕೊಪ್ಪಳದಲ್ಲಿ ನಡೆದ ಸೇನಾ ಭರ್ತಿಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಅವರು ತಾಯಿ ಮಹಾದೇವಿ, ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರದಂದು ಯೋಧ ಸಾಗರ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದ್ದು, ಸಂಕೇಶ್ವರದ ಯೋಧನ ಮನೆಯಲ್ಲಿ ಶೋಕ ಮಡುಗಟ್ಟಿದೆ. ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.
ಸಂಕೇಶ್ವರ ಪಟ್ಟಣದಲ್ಲಿನ ಲಕ್ಷ್ಮೀ ಸಮುದಾಯ ಭವನದಲ್ಲಿ ಯೋಧನ ಅಂತಿಮ ದರ್ಶನಕ್ಕಾಗಿ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಆ 18ರಂದು ಸಂಜೆ ಯೋಧನ ಅಂತಿಮಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.