ಮುಂಬಯಿ : ಕುಲಾಲ ಸಂಘ ಮುಂಬಯಿ ವತಿಯಿಂದ ಸಂಘದ ಗುರುವಂದನಾ ಭಜನಾ ಮಂಡಳಿಯ ಸಹಯೋಗದಲ್ಲಿ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಿಬಂದಿ ವರ್ಗ ಹಾಗೂ ಜಿಡಿಪಿ ಏಜೆಂಟರ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಇತ್ತೀಚೆಗೆ ಕುಲಾಲ ಸಂಘದ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಭಜನಾ ಮಂಡಳಿಯ ಕಾರ್ಯಕರ್ತರ ಸಹಕಾರದಿಂದ ಗುರು ಹಾಗೂ ದೇವರ ಮಂಟಪವನ್ನು ವಿಶೇಷವಾಗಿ ಅಲಂಕರಿಸಿ, ಗುರುವಂದನಾ ಭಜನಾ ಮಂಡಳಿಯ ಪ್ರಧಾನ ಅರ್ಚಕ ನಾರಾಯಣ ಬಂಜನ್ ಅವರು ಕಲಶ ಪ್ರತಿಷ್ಠಾಪಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಅರ್ಚಕ ನಾರಾಯಣ ಬಂಜನ್ ಅವರನ್ನು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಡಿ. ಐ. ಮೂಲ್ಯ, ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಶೀನ ಜಿ. ಮೂಲ್ಯ, ಮಂಡಳಿಯ ಸದಸ್ಯರು ಹಾಗೂ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಿಬಂದಿ ವರ್ಗ, ಜೆಡಿಡಿ ಏಜೆಂಟ್ ಹಾಗೂ ನೆರಿದಿದ್ದ ಗುರುಭಕ್ತರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು.
ಗುರುವಂದನೆ ಸ್ವೀಕರಿಸಿದ ಅರ್ಚಕ ನಾರಾಯಣ ಬಂಜನ್ ಮಾತನಾಡಿ, ಉತ್ತಮ ಸಂಸ್ಕಾರ, ಸಂಸ್ಕೃತಿಯ ಜೀವನಕ್ಕೆ ಗುರುವೇ ಕಾರಣಕರ್ತ. ಬದುಕಿನುದ್ದಕ್ಕೂ ಸತ್ಕರ್ಮಗಳನ್ನು ಮಾಡಲು ನಮಗೆ ಗುರುವಿನ ಉಪದೇಶ, ಮಾರ್ಗದರ್ಶನದಿಂದ ಮಾತ್ರ ಸಾಧ್ಯ. ನೀವೆಲ್ಲಾ ಒಂದಾಗಿ ಒಂದೇ ಕುಟುಂಬದಂತೆ ಗುರುಪೂರ್ಣಿಮೆಯ ಆಚರಣೆಗೈದು ಗುರುವಂದನೆ ಸಲ್ಲಿಸಿ ಗುರುಕೃಪೆಗೆ ಪಾತ್ರರಾಗಿದ್ದೀರಿ. ನಿಮಗೆಲ್ಲರಿಗೂ ಜೀವನದಲ್ಲಿ ಶುಭವಾಗಲಿ. ನನ್ನ ಈ ಹಿರಿಯ ವಯಸ್ಸಿನಲ್ಲಿ ಹಾಗೂ ಆರೋಗ್ಯದ ದೃಷ್ಟಿಯಿಂದ ಪ್ರತಿ ತಿಂಗಳು ಇಲ್ಲಿಗೆ ಬಂದು ಪೂಜಾ ವಿಧಿ-ವಿಧಾನಗಳನ್ನು ಮಾಡಲು ಅಸಾಧ್ಯ. ಆದ್ದರಿಂದ ಭವಿಷ್ಯದಲ್ಲಿ ಈ ಕೆಲಸವನ್ನು ಮಂಡಳಿಯ ಸದಸ್ಯ ಶಂಕರ ವೈ. ಮೂಲ್ಯ ಅವರು ನೆರವೇರಿಸಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರಲಿ. ಈ ಸಂಘದ ಭಜನೆಯು ನಿರಂತರವಾಗಿ ನಡೆಯಬೇಕು ಎಂದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ಸಮಾಜ ಬಾಂಧವರು, ಗುರುಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮುಂಬಯಿ ಕುಲಾಲ ಸಂಘದಲ್ಲಿ ಗುರುಪೂರ್ಣಿಮೆ ಆಚರಣೆ
our culture
1 Min Read