ಬಸವಕಲ್ಯಾಣ: ಅಪಘಾತ ಘಟನೆ ನಡೆದು ಮೂರು ತಿಂಗಳಾದರೂ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದನ್ನು ಖಂಡಿಸಿ, ಅಪಘಾತದಲ್ಲಿ ಗಾಯಗೊಂಡು ಈಗ ಮೃತಪಟ್ಟಿರುವ ವ್ಯಕ್ತಿಯ ಶವವಿರುವ ಆಂಬುಲೆನ್ಸ್ನ್ನು ಸಂಚಾರ ಠಾಣೆ ಎದುರು ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಇಲ್ಲಿ ಆ. ೧೧ರಂದು ನಡೆಯಿತು.
ಇಲ್ಲಿನ ತ್ರಿಪುರಾಂತ ಓಣಿ ನಿವಾಸಿ ಶಾಲಿವಾನ ಕುಂಬಾರ (57) ಮೃತ ವ್ಯಕ್ತಿ. ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಶವವಿರುವ ಆಂಬುಲೆನ್ಸ್ ವಾಹನವನ್ನು ಠಾಣೆ ಎದುರು ನಿಲ್ಲಿಸಿದ ಮೃತರ ಕುಟುಂಬದವರು ‘ಉದ್ದೇಶಪೂರ್ವಕವಾಗಿಯೆ ಪೊಲೀಸರು ನಿಷ್ಕಾಳಜಿ ತೋರಿದ್ದಾರೆ.ಆರೋಪಿಯಿಂದ ಲಂಚ ಪಡೆದಿರುವ ಸಾಧ್ಯತೆಯಿದೆ. ಕಾರಣ ಅಗತ್ಯ ಕ್ರಮಕ್ಕೆ ವಿಳಂಬ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಬ್ಇನ್ಸ್ಪೆಕ್ಟರ್ ನಾನಾಗೌಡ ಪಾಟೀಲ ಅವರನ್ನು ಮುತ್ತಿಗೆ ಹಾಕಿ ಆರೋಪಿಯನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿದರು.
ಘಟನೆ ವಿವರ :
ತ್ರಿಪುರಾಂತದ ಮುಖ್ಯರಸ್ತೆಯಲ್ಲಿ ಶಾಲಿವಾನ ಅವರು ನಡೆದುಕೊಂಡು ಹೋಗುತ್ತಿದ್ದಾಗ ಮೇ 17ರಂದು ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಮೊಣಕಾಲು ಮತ್ತು ಇತರೆಡೆ ಗಾಯಗಳಾಗಿದ್ದವು. ಘಟನೆಯ ನಂತರ ಅಪಘಾತ ಮಾಡಿದ ಕಾರಿನ ಸಂಖ್ಯೆಯನ್ನು ಸಂಚಾರ ಠಾಣೆಗೆ ನೀಡಿ ದೂರು ದಾಖಲಿಸಿಕೊಳ್ಳಲು ಹೇಳಿದರೂ ಕೆಲ ದಿನಗಳವರೆಗೆ ದೂರು ದಾಖಲಿಸಿಕೊಳ್ಳಲಿಲ್ಲ. ಆನಂತರದಲ್ಲಿಯೂ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ವಾಹನವನ್ನು ಜಪ್ತಿ ಮಾಡಿಲ್ಲ. ಬೇಕೆಂತಲೇ ವಿಳಂಬ ಮಾಡಲಾಗುತ್ತಿದೆ ಎಂದು ಮೃತರ ಪುತ್ರ ಯೋಗೇಶ ಕುಂಬಾರ ಆರೋಪಿಸಿದರು.
‘ಡಿಕ್ಕಿ ಹೊಡೆದ ವಾಹನವನ್ನು ತರಲು ಕೊಪ್ಪಳಕ್ಕೆ ಹೋಗಿ ಬರಲಾಗಿದೆ. ಕೆಲ ದಿನಗಳಲ್ಲಿ ಕಾರನ್ನು ಇಲ್ಲಿಗೆ ತರುವುದಾಗಿ ಅದರ ಮಾಲೀಕರು ಒಪ್ಪಿದ್ದಾರೆ’ ಎಂದು ಸಬ್ಇನ್ ಸ್ಪೆಕ್ಟರ್ ಸಮಜಾಯಿಸಿ ನೀಡಿದರೂ ಪ್ರಯೋಜನವಾಗಲಿಲ್ಲ.
ಆರೋಪಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿ ಬರೆದುಕೊಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಜನರು ಪಟ್ಟು ಹಿಡಿದಿದ್ದರು.ಮೂರು ದಿನದಲ್ಲಿ ಕಾರನ್ನು ಜಪ್ತಿ ಮಾಡುವುದಾಗಿ ಸಬ್ಇನ್ ಸ್ಪೆಕ್ಟರ್ ಬರೆದುಕೊಟ್ಟ ನಂತರ ಆಂಬುಲೆನ್ಸ್ನ್ನು ಠಾಣೆಯ ಆವರಣದ ಹೊರಗೆ ತರಲಾಯಿತು.