ಮಂಗಳೂರು : ಕುಲಾಲ ಸಮಾಜದ ಅಭಿಮಾನದ ಪ್ರತೀಕವಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೊಲ್ಯ ಕುಲಾಲ ಸಮುದಾಯ ಭವನ ಕಾಮಗಾರಿ ಭರದಿಂದ ಸಾಗುತ್ತಿದೆ. ಇದೀಗ ಎರಡನೇ ಮಹಡಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ೨೦೧೭ರ ಆರಂಭದ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ.
ಈ ಸಂಘವು ೧೯೫೪ರಲ್ಲಿ ಬಾರ್ದೆ ಎಂಬಲ್ಲಿ ಗ್ರಾಮ ಸಂಘವಾಗಿ ಉದಯಗೊಂಡಿದ್ದು, ೧೯೬೯ರಲ್ಲಿ ಕೊಲ್ಯದ ಮುಖ್ಯ ರಸ್ತೆಯ ಬದಿ ೨೭ ಸೆಂಟ್ಸ್ ಜಾಗವನ್ನು ಖರೀದಿಸಿತ್ತು. ಆ ಬಳಿಕ ಇಲ್ಲಿ ಕುಲಾಲ ಮಂದಿರವನ್ನು ನಿರ್ಮಿಸಿ ೧೯೭೪ರಲ್ಲಿ ಸಮಾಜಕ್ಕೆ ಅರ್ಪಿಸಿತು. ಅಂದಿನಿಂದ ನಿರಂತರವಾಗಿ ಇದರಿಂದ ಬರುವ ಆದಾಯದಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಧನಸಹಾಯ, ಬಡರೋಗಿಗಳಿಗೆ ನೆರವು, ನಿರ್ಗತಿಕರಿಗೆ ಸಹಾಯ, ಅನಾಥ ಶವ ಸಂಸ್ಕಾರ ಹೀಗೆ ಸಮಾಜ ಸೇವೆಯನ್ನು ನಡೆಸುತ್ತಾ ಬಂದಿದೆ.
೨೦೧೫ರಲ್ಲಿ ಮಂಗಳೂರು-ಕಾಸರಗೋಡು ಹೆದ್ದಾರಿ ೬೬ ಅಗಲೀಕರಣಕ್ಕಾಗಿ ಸರಕಾರವು ಸಂಘದ ೬ ಸೆಂಟ್ಸ್ ಜಾಗ ಮತ್ತು ಕುಲಾಲ ಮಂದಿರ ಇದ್ದ ಮುಂಭಾಗದ ಸ್ವಲ್ಪ ಜಾಗವನ್ನು ಸ್ವಾಧೀನ ಪಡಿಸಿತು. ಇದರಿಂದ ಕುಲಾಲ ಮಂದಿರವನ್ನು ಸ್ಥಳೀಯಾಡಳಿತ ಯಾವುದೇ ಸಮಯದಲ್ಲಿ ಕೆಡವಬಹುದು ಎಂಬ ಪರಿಸ್ಥಿತಿ ಎದುರಾಯಿತು. ಇದರಿಂದ ನೂತನ ಕುಲಾಲ ಮಂದಿರ ಕಟ್ಟಡ ನಿರ್ಮಾಣ ಮಾಡುವುದು ಅನಿವಾರ್ಯವಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯ ದಾಸ್ ಪ್ರಮೋಷನ್ಸ್ ಮಾಲಕ ಅನಿಲ್ ದಾಸ್ ಅವರ ಮುಂದಾಳುತ್ವದಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚಿಸಿ ಕಾಮಗಾರಿ ಆರಂಭಿಸಿದ್ದು, ಇದೀಗ ಅಂತಿಮ ಹಂತ ತಲುಪಿದೆ.
ಭರದಿಂದ ಸಾಗುತ್ತಿದೆ ಕೊಲ್ಯ `ಕುಲಾಲ ಸಮುದಾಯ ಭವನ’ ಕಾಮಗಾರಿ
Kulal news
1 Min Read