ಬೆಂಗಳೂರು : ಕುಂಬಾರರು ಸ್ವಾಭಿಮಾನಿಗಳು ಅಷ್ಟೇ ಪ್ರಾಮಾಣಿಕರು. ಎಲ್ಲರೂ ತಮ್ಮ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು. ಜನಾಂಗ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದರೆ ಯಶಸ್ಸು ಸಾಧ್ಯ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2ನೇ ವರ್ಷದ ಕುಂಬಾರರ ಸಮಾವೇಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಮತ್ತು ಜೀವನಕ್ರಮದಲ್ಲಿ ಭಾರೀ ಬದಲಾವಣೆಗಳಾಗಿದ್ದು, ಕುಲಕಸುಬುಗಳನ್ನೇ ನಂಬಿ ಬದುಕುವಂಥ ಸ್ಥಿತಿ ಈಗಿಲ್ಲ. ಕುಲಕಸುಬುಗಳ ಪಾತ್ರ ಗೊಂದಲ ಹಾಗೂ ಅಸ್ಪಷ್ಟತೆಯಿಂದ ಕೂಡಿದ್ದು, ಭವಿಷ್ಯದ ದೃಷ್ಟಿಯಿಂದ ಪರ್ಯಾಯ ಮಾಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶಿಕ್ಷಿತರಾಗಬೇಕು ಎಂದರು.
ಮುಂದುವರಿದು ಮಾತನಾಡಿದ ಅವರು, ಇಟ್ಟಿಗೆ ಬದಲು ಹ್ಯಾಲೋಬ್ರಿಕ್ ಬಂದಿದೆ. ಹಂಚಿನಮನೆ ಶೋಕಿ ಆಗಿದೆ. ಮಡಕೆ ಕೇವಲ ಅಲಂಕಾರದ ವಸ್ತುವಾಗಿದೆ. ಇವನ್ನೇ ನಂಬಿ ಬದುಕುತ್ತಿದ್ದ ಕುಂಬಾರರು ಜೀವನೋಪಾಯಕ್ಕಾಗಿ ಅನ್ಯಮಾರ್ಗ ಹುಡುಕಿಕೊಳ್ಳಬೇಕಿದೆ. ಗೌರವ ಮತ್ತು ಹಣ ಗಳಿಕೆಗೆ ವಿಪುಲ ಅವಕಾಶಗಳಿವೆ. ಅವನ್ನು ಪಡೆಯಲು ವಿದ್ಯೆ ಒಂದೇ ಅಸ್ತ್ರ. ಹಾಗಾಗಿ, ಮಕ್ಕಳನ್ನು ಶಿಕ್ಷಿತರನ್ನಾಗಿಸುವಂತೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಆರ್ ಶ್ರೀನಿವಾಸ್, “ಕುಂಬಾರ ಜನಾಂಗವು ಹಿಂದೆ ಉಳಿದಿದೆ. ನಮ್ಮ ಸಮಾಜವನ್ನು ಅಭಿವೃದ್ದಿಪಡಿಸುವುದರ ಜೊತೆಗೆ ಉನ್ನತ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಸಹಾಯ ಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
`ನಾವು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದೆೀವೆ. ಕುಲ ಕಸುಬುಗಳಲ್ಲೆ ನಿರತರಾಗಿರುವ ಕುಂಬಾರ ಜನಾಂಗದ ಕುಂದು ಕೊರತೆಯನ್ನು ನಿವಾರಿಸಲು, ಸರ್ಕಾರದ ಗಮನ ಸೆಳೆಯಲು, ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿಗಳ ಮುಖಾಂತರ ಕಾನೂನಿನ ಚೌಕಟ್ಟಿನಲ್ಲಿ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಜನಜಾಗೃತಿ ಸಮಾವೇಶ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.
ಬೆಂಗಳೂರಿನ ಕನ್ನಡ , ತುಳು, ತೆಲುಗು , ಲಿಂಗಾಯತ ಕುಂಬಾರ ನಾಯಕರ ಉಪಸ್ಥಿತಿಯ ಸಮಾವೇಶದಲ್ಲಿ ಕುಂಬಾರರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಮತ್ತು ಕುಂಬಾರ ಜನಾಂಗವನ್ನು ಪರಿಶಿಷ್ಟ ಗುಂಪಿಗೆ ಸೇರಿಸುವ ಸಲುವಾಗಿ ಸರಕಾರವನ್ನು ಒತ್ತಾಯಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಹೊಸೂರು ಕೈವಾರ ತಾತಯ್ಯ ಆಶ್ರಮದ ವೆಂಕಟೇಶ ಸ್ವಾಮೀಜಿ ಆಶೀರ್ವಚನ ನೀಡುತ್ತಾ.. “ಹಿಂದೆಲ್ಲಾ ಶಿಕ್ಷಣ ಎನ್ನುವುದು ಬಡ ಮಕ್ಕಳಿಗೆ ಗಗನಕುಸುಮವಾಗಿತ್ತು. ಅದರಂತೆ ಕುಂಬಾರ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಈಗ ಅನೇಕ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಶಿಕ್ಷಣಾಭ್ಯಾಸಕ್ಕೆ ಸಾಕಷ್ಟು ಧನ ಸಾಯ ಮಾಡುತ್ತಿವೆ. ಈ ಅನುಕೂಲವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು” ಎಂದರು.
ಸಮಾರಂಭದಲ್ಲಿ ಶೇಕಡಾ 90 ಕ್ಕೂ ಅಧಿಕ ಅಂಕ ಗಳಿಸಿದ ಸುಮಾರು 215 ವಿಧ್ಯಾರ್ಥಿಗಳಿಗೆ 3 .5 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಸಹಾಯಧನ ವಿತರಿಸಲಾಯಿತು
ಕುಂಬಾರ ಸಮುದಾಯದ ರಾಜ್ಯ ನಾಯಕರುಗಳಾದ ದಕ್ಷಿಣಾಮೂರ್ತಿ, ತಬಲಾ ನಾರಾಯಣಪ್ಪ ,ಡಾ. ಅಣ್ಣಯ್ಯ ಕುಲಾಲ್, ಬಾಬುರಾವ್ ಕುಂಬಾರ, ಲಿಂಗರಾಜ್ ಕುಂಬಾರ , ವರ್ಷ ಎಂ ಪಿ , ನಾಗರಾಜು , ಶ್ರೀನಿವಾಸಪ್ಪ, ಲಾಕ್ಷಯ್ಯ, ಎಸ್ ನಾಗರಾಜ್ ಅಲ್ಲದೆ ಜಿಲ್ಲೆ, ತಾಲೂಕು ಮಟ್ಟದ ನೂರಾರು ನಾಯಕರು ಭಾಗವಹಿಸಿದ್ದರು.
”ಜಾತಿ ಎಲ್ಲರಿಗೂ ಅಂಟಿಕೊಂಡಿದೆ. ಸಮಾಜಕ್ಕೆ ಇದೊಂದು ಶಾಪ! ಸದ್ಯಕ್ಕೆ ಇದನ್ನು ಹೊಡೆದೊಡಿಸಸಲು ಅಸಾಧ್ಯ ಎಂಬ ಸ್ಥಿತಿಯಿದೆ. ‘ಮಾನವ ಕುಲ ಒಂದೇ’ ಎಂಬುದನ್ನು ಅರಿಯಬೇಕು. ವಿದ್ಯಾರ್ಥಿಗಳು ಸುಶಿಕ್ಷಿ್ಷರಾಗಿ, ಜಾತಿ ಮತ್ತು ಭಾಷೆಗಳಾಚೆ ನಿಂತು ಯೋಚಿಸುವಂತಾಗಬೇಕು” —ಕೃಷ್ಣ ಬೈರೇಗೌಡ ಕೃಷಿ ಸಚಿವ