ಬೆಂಗಳೂರು : ಮುಂದೆ ಗುರಿ ಹಿಂದೆ ಗುರು ಹೊಂದಿರುವ ಸಾಧಕ ತಾನು ಮಾಡುವ ಸಾಧನೆಯಲ್ಲಿ ಎಂದೂ ನಿರಾಶನಾಗಲಾರ ಎಂಬುದಕ್ಕೆ ಜಯಂತ್ ಕುಮಾರ್ ಕುಂಬಾರ ಉತ್ತಮ ನಿದರ್ಶನ. ಕರ್ನಾಟಕ ಫುಟ್ ಬಾಲ್ ತಂಡದಲ್ಲಿ ಸ್ಥಾನ ಪಡೆದು ಸದ್ಯ ಗೋಲ್ ಕೀಪರ್ ಆಗಿ ಮಿಂಚುತ್ತಿರುವ ಬೆಂಗಳೂರಿನ ಈ ಯುವ ಪ್ರತಿಭೆ ಫುಟ್ ಬಾಲ್ ಪ್ರೇಮಿಗಳ ಕಣ್ಮಣಿ ಆಗುವುದರಲ್ಲಿ ಸಂಶಯವಿಲ್ಲ.
ಪೋಷಕರ ನಿರಂತರ ಪ್ರೋತ್ಸಾಹದಿಂದ ಶಾಲಾ ದಿನಗಳಲ್ಲೇ ಯಾವುದಾದರೊಂದು ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ಹೊರಟ ಜಯಂತ್ ಸ್ಕೌಟ್ ನಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಆಗಿನ ರಾಜ್ಯಪಾಲ ಟಿ ಎನ್ ಚತುರ್ವೇದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಹೆಮ್ಮೆಯೂ ಜಯಂತ್ ಅವರದು. ಬಳಿಕ ಫುಟ್ಬಾಲ್ ಕ್ರೀಡೆಯಲ್ಲಿ ವಿಪರೀತ ಆಸಕ್ತಿ ಬೆಳೆಸಿಕೊಂಡ ಜಯಂತ್ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ. ಪ್ರಸ್ತುತ ಕರ್ನಾಟಕ ತಂಡದಲ್ಲಿ ಯಶಸ್ವೀ ಗೋಲ್ ಕೀಪರ್ ಆಗಿರುವ ಜಯಂತ್, ಫುಟ್ಬಾಲ್ ಕ್ರೀಡೆಯಲ್ಲಿ ಭವಿಷ್ಯ ರೂಪಿಸಬೇಕೆಂಬ ಕನಸು ಹೊಂದಿದ್ದಾರೆ.
ತಾಯಿಯೂ ಕ್ರೀಡಾಪಟು
ಬೆಂಗಳೂರಿನ ಹೆಬ್ಬಗೋಡು ನಿವಾಸಿಗಳಾದ ಕೃಷ್ಣಮೂರ್ತಿ ಹಾಗೂ ಗಾಯತ್ರಿ ದಂಪತಿಯ ಎರಡನೇ ಮಗನಾಗಿರುವ ಜಯಂತ್ ಅವರ ತಾಯಿಯೂ ಬಹುಮುಖ ಪ್ರತಿಭೆಯ ಕ್ರೀಡಾಪಟು. ಕ್ರೀಡೆಯ ಮೇಲಿನ ಆಸಕ್ತಿಗೆ ಆಕೆಯೇ ಪ್ರೇರಣೆ. ತಾಯಿ ಗಾಯತ್ರಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದ ಅಥ್ಲೀಟ್ . ನಡಿಗೆ ಸ್ಪರ್ಧೆ, ವಿವಿಧ ಓಟದ ಸ್ಪರ್ಧೆ, ಜಾವೆಲಿನ್ ಎಸೆತ, ಶಾಟ್ ಫುಟ್ ಹೀಗೆ.. ಹಲವು ಕ್ರೀಡಾ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದ ಪ್ರತಿಭೆ. ಇಂಥಾ ಪ್ರತಿಭಾವಂತೆಯ ಪುತ್ರನಾದ ಜಯಂತ್ ಜನಿಸಿದ್ದು ೧೯೯೦, ಮೇ ೧೩ರಂದು. ಓದಿದ್ದು ಮೆಕ್ಯಾನಿಕಲ್ ಡಿಪ್ಲೋಮಾ. ಕೈ ಹಿಡಿದಿದ್ದು ಫುಟ್ಬಾಲ್.
ಸಾಧನೆಯ ಹಾದಿ..
* ಹೆತ್ತವರ ಬೆಂಬಲ, ಗುರುವಿನ ಮಾರ್ಗದರ್ಶನ ಹಾಗೂ ಗುರಿಯೊಂದಿದ್ದರೆ ಸಾಧನೆಯ ಹಾದಿ ಸುಲಭವಾಗುತ್ತದೆ. ಅಂತೆಯೇ ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಮಾರ್ಗದತ್ತ ಸಾಗಿ ಬಂದ ಜಯಂತ್, ಬೆಂಗಳೂರಿನ ಸೂಪರ್ ಡಿವಿಜನ್ ಲೀಗ್ ೨೦೧೧ರಲ್ಲಿ SAZ ಮತ್ತು DYSS ತಂಡಗಳಲ್ಲಿ ಆಡಿದ್ದಾರೆ.
* ಕೋಲಾರದ ಕೆಜಿಎಫ್ ನ BEM 1 ಫುಟ್ ಬಾಲ್ ಕ್ಲಬ್ ಗೆ ಆಡಿ ಚಾಂಪಿಯನ್. ಉತ್ತರಪ್ರದೇಶದ ಸಿಗ್ರೋಲ್ ನಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ೧ ನಲ್ಲಿ ಭಾಗವಹಿಸಿದ್ದಾರೆ.
* ೨೦೦೪ರಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಾಂಪಿಯನ್ ಶಿಪ್ ಗೆದ್ದಿದ್ದಾರೆ.
* ಗೋವಾದ ಮಡಗಾವ್ ನಲ್ಲಿ ನಡೆದ ೫೭ನೆ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ೧೯ನೇ ವಯಸ್ಸಿನವರ ವಿಭಾಗದಲ್ಲಿ ಚಾಂಪಿಯನ್ ಆಫ್ ಕರ್ನಾಟಕ.
* ೨೦೧೫-ಬೆಂಗಳೂರು ಸೂಪರ್ ಡಿವಿಜನ್ ಲೀಗ್ CIL ಕ್ಲಬ್ ಲೀಗ್ ಚಾಂಪಿಯನ್ಸ್.
* ೨೦೧೧ರಲ್ಲಿ ರಾಜ್ಯಮಟ್ಟದ ಫುಟ್ ಬಾಲ್ ನಲ್ಲಿ ಚಿನ್ನದ ಪದಕ.
* 7A ಸೈಡ್ ಫುಟ್ ಬಾಲ್, 5A ಫುಟ್ ಬಾಲ್ ಅಮೆಚೂರ್ ಲೀಗ್ ನಲ್ಲಿ ಚಾಂಪಿಯನ್ ಆಗಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ.
* ಇತ್ತೀಚಿಗೆ ತಮಿಳುನಾಡಿನಲ್ಲಿ ನಡೆದ ಪಂದ್ಯದಲ್ಲಿ ಇಂಡಿಯನ್ ಬ್ಯಾಂಕ್ ಎಫ್ ಸಿ ಪರ ಆಡಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ.
* ಬೆಂಗಳೂರು ಸೀನಿಯರ್ ಡಿವಿಜನ್ ಫುಟ್ ಬಾಲ್ ಅಸೋಸಿಯೇಶನ್ ವತಿಯಿಂದ ನಡೆದ ಲೀಗ್ ನಲ್ಲಿ ಓಜೋನ್ ಫುಟ್ ಬಾಲ್ ಪರ ಆಡಿ ತಂಡ ಚಾಂಪಿಯನ್ ಶಿಪ್ ಗೆದ್ದು, ಇವರಿಗೆ ಬೆಸ್ಟ್ ಗೋಲ್ ಕೀಪರ್ ಅವಾರ್ಡ್ ಲಭಿಸಿದೆ.
* ಚೆನ್ನೈ ನಲ್ಲಿ ನಡೆದ ೭೦ನೆ ರಾಷ್ಟ್ರೀಯ ಸೀನಿಯರ್ ಫುಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ (ಸಂತೋಷ್ ಟ್ರೋಫಿ) ತಂಡ ಚಾಂಪಿಯನ್ ಶಿಪ್ ಗೆದ್ದು, ಜಯಂತ್ ಬೆಸ್ಟ್ ಗೋಲ್ ಕೀಪರ್ ಅವಾರ್ಡ್ ಪಡಿದಿದ್ದಾರೆ.
* ೨೦೧೫ ರಲ್ಲಿ ಐಎಸ್ ಎಲ್ ಫುಟ್ ಬಾಲ್ ಸೀಜನ್ ನಲ್ಲಿ ಸ್ಟಾರ್ ಸ್ಪೋರ್ಟ್ಸ್ ನ ನೈಸ್ ಜೆಲ್ ಜಾಹೀರಾತಿನಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದಾರೆ.
ಪ್ರಸ್ತುತ ನಟ ಅಭಿಷೇಕ್ ಬಚ್ಚನ್ ನೇತೃತ್ವದ Chennai FC ಜೂನಿಯರ್ ತಂಡದಲ್ಲಿ ಆಡುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಬೇಕೆಂದಿರುವ ಕುಂಬಾರ ಜನಾಂಗದ ಹೆಮ್ಮೆಯ ಹುಡುಗ ಜಯಂತ್ ಅವರಿಗೆ ಗುಡ್ ಲಕ್ ಹೇಳೋಣ.
ವರದಿ : ಮನು, ಮಂಗಳೂರು
