ದಾವಣಗೆರೆ : ತಳ ಸಮುದಾಯಗಳಿಂದಲೇ ಅತೀಹೆಚ್ಚು ಬುದ್ದಿವಂತರು ಹುಟ್ಟಿಕೊಂಡಿದ್ದಾರೆ. ಆದರೆ ಸಮಾಜದಲ್ಲಿನ ಜಾತಿ ವ್ಯವಸ್ಥೆಯಿಂದ ಮುಖವಾಣಿಗೆ ಬರಲಾಗುತ್ತಿಲ್ಲ ಎಂದು ಸಾಹಿತಿ.ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ರೇಣುಕಾಮಂದಿರದಲ್ಲಿ ಇತ್ತೀಚಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡದ ಶ್ರೇಷ್ಟ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವಜ್ಞ ಅವರ ತ್ರಿಪದಿಗಳು ಈ ಸಮಾಜಕ್ಕೆ ಪಂಚಮವೇದಗಳು, ಇಂತಹ ಮಹಾನ್ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು, ಕುಂಬಾರರು ತಯಾರು ಮಾಡಿದ ಮಡಿಕೆ ಚೂರುಗಳಿಂದಲೇ ಪ್ರಪಂಚದ ಅತ್ಯುತ್ತಮ ನಾಗರೀಕತೆಗಳನ್ನು ಗುರುತಿಸಲಾಗಿದೆ. ಕುಂಬಾರರು ಇಲ್ಲದಿದ್ದರೆ ನಾಗರೀಕತೆಯ ಅನ್ವೇಷನೆ ಅಸಾಧ್ಯವಾಗಿತ್ತು. ಕುಂಬಾರ ಸಮಾಜ ಬಹಳ ಅವಮಾನಕ್ಕೆ ಒಳಗಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಾನು ಸುತ್ತಿದ್ದೇನೆ. ವಿವಿಧ ಹೆಸರುಗಳಿಂದ ಕುಂಬಾರರನ್ನು ಕರೆಯುತ್ತಾರೆ. ಆದರೆ ಮಗದ ಪ್ರಾಂತ್ಯದಲ್ಲಿ ಕುಂಬಾರರನ್ನು ಅತ್ಯಂತ ಅಮಾನೀಯವಾದ ಸ್ಥಿತಿಯಲ್ಲಿ ಬಹಿಷ್ಕಾರ ಹಾಕಲಾಗುತ್ತಿತ್ತು, ಮಡಿವಾಳ, ಕ್ಷೌರಿಕರು ಇವರನ್ನು ಅಸ್ಪೃಶ್ಯರಂತೆ ನೋಡುತ್ತಿದ್ದರು. ಕಳೆದ 20 ವರ್ಷಗಳ ಹಿಂದೆ ಹೋಲಿಕೆ ಮಾಡಿದಾಗ ಕುಂಬಾರ ಸಮಾಜ ಸೇರಿದಂತೆ ಇತರೆ ಕುಲಕಸುಬು ಜಾತಿಗಳು, ಕುಲಕಸುಬುಗಳ ಅವನತಿಯಲ್ಲಿ ಸಾಗುತ್ತಿವೆ.
1991 ರ ಗ್ಯಾಟ್ ಒಪ್ಪಂದ ಎಲ್ಲಾ ಕುಲಕಸುಬುಗಳ ಶವಪೆಟ್ಟಿಗೆಗೆ ಮಳೆ ಹೊಡೆದಂತಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕುಂಬಾರ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನಿಜವಾದ ಅಹಿಂದ ಎಂದರೆ ನಾವೇ. ಕನಿಷ್ಟ ತಮ್ಮ ಬಜೆಟ್ ನಲ್ಲಿ ಈ ಸಮಾಜದ ಅಭಿವೃದ್ದಿಗೆ 15 ರಿಂದ 20 ಕೋಟಿ ಹಣ ಮೀಸಲಿಡಬಹುದಿತ್ತು. ಕೆಪಿಎಸ್ ಸಿಗೆ ಈ ಸಮಾಜದ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬಹುದಿತ್ತು. ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕುಂಬಾರ ಸಮಾಜದಲ್ಲಿ ಒಬ್ಬ ನಮ್ಮ ಶಾಸಕರೂ ಆಯ್ಕೆಯಾಗದಿರುವುದು ದುರಂತ. ಸರ್ಕಾರದ ನಿರ್ಲಕ್ಷ್ಯಕ್ಕೆ ನಮ್ಮಲ್ಲಿನ ಸಂಘಟನೆಯ ಕೊರತೆ ಕಾರಣ.
ನಾವೇ ಮಾಂಸಹಾರಿ ಕುಂಬಾರರು, ಸಸ್ಯಹಾರಿ ಕುಂಬಾರರು ಹೊಡೆದಾಡಿದರೆ ಇಂತಹ ಸಮಾಜದ ಕಾರ್ಯಕ್ರಮಗಳಿಗೂ ಯಾವುದೇ ಜನಪ್ರತಿನಿಧಿಗಳು ಕೂಡ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು ಸರ್ವಜ್ಞ ಸರ್ವಕಾಲಕ್ಕೂ ಸಮಾಜವನ್ನು ತಿದ್ದುವಂತಹ ತ್ರಿಪದಿಗಳನ್ನು ನೀಡಿದ್ದಾರೆ.
ಅಂತಹ ತ್ರಿಪದಿಗಳನ್ನು ಬಸ್ಸು ಮತ್ತು ರೈಲುಗಳಲ್ಲಿ ಅಂಟಿಸುವ ಮೂಲಕ ಜನರ ಬಳಿಗೆ ಈ ತ್ರಿಪದಿಗಳನ್ನು ಕೊಂಡೊಯ್ಯುವ ಅವಶ್ಯಕತೆ ಇದೆ. ಕುಂಬಾರ ಜಾತಿಯಲ್ಲಿ ಹುಟ್ಟಿದರೂ ಜಾತಿ ಹೇಳಿಕೊಳ್ಳದ ಮಹಾನುಭಾವರು ನಮ್ಮಲ್ಲಿದ್ದಾರೆ. ಆದರೆ ನಾನು ನನ್ನ ಹೆಸರು ಮುಂದೆ ಜಾತಿ ಸೂಚಕವಾಗಿಯೇ ಹೆಸರು ಇಟ್ಟುಕೊಂಡಿದ್ದೇನೆ. ಯಾರು ಕುಂಬಾರ ಎಂದು ಹೇಳಿಕೊಳ್ಳದೆ ಇರುವವರು ಅವರು ಸಮಾಜದ ಶತ್ರುವಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್ ಕುಂಬಾರ ಸಮಾಜ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವರ ಈ ಸಮಸ್ಯೆಗೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸರ್ವಜ್ಞ ಸರ್ವಕಾಲಕ್ಕೂ ಸರ್ವರಿಗೂ ಒಳಿತಾಗುವಂತೆ ಬುದ್ದಿಮಾತುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿಳಿಸಿದ್ದಾರೆಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಉಪಾಧ್ಯಕ್ಷ ಡಿ.ಸಿದ್ದಪ್ಪ, ಸರ್ವಜ್ಞನ ತ್ರಿಪದಿ ನುಡಿಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸಮಾಜ ಸನ್ಮಾರ್ಗದಲ್ಲಿ ನಡೆಯುತ್ತದೆ ಎಂದರು. ನಂತರ ಮಾತನಾಡಿದ ಮೇಯರ್ ಅಶ್ವಿನಿ ಪ್ರಶಾಂತ್, 700 ಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿರುವ ಸರ್ವಜ್ಞ ಒಂದೆಡೆ ನೆಲಸದೆ ತನಗೆ ಕಂಡಿದ್ದನ್ನು ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ಇವರ ಈ ತ್ರಿಪದಿಗಳನ್ನು ಇನ್ನಷ್ಟು ಪಠ್ಯಕ್ರಮದಲ್ಲಿ ಸೇರಿಸುವ ಮೂಲಕ ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಕುಂಬಾರ ಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಬಸವರಾಜ್ ಕುಂಚೂರು, ಜಿಲ್ಲಾ ಹಿಂದುಳಿದ ಕುಂಬಾರ ಸಂಘದ ಗೌರವ ಅಧ್ಯಕ್ಷ ಚಂದ್ರಶೇಖರ್ ಕೆ.ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಬೆಕ್ಕೇರಿ, ತಹಶೀಲ್ದಾರ್ ಮಂಜುನಾಥ ಬಳ್ಳಾರಿ, ಸಮಾಜದ ಮುಖಂಡ ಮೈಸೂರು ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘‘ಕುಂಬಾರ ಸಮುದಾಯ ಮಣ್ಣಿನ ಮಡಕೆ ತಯಾರಿಸಲು ಕಂಡುಹಿಡಿದಿದ್ದ ‘ತಿಗರಿ’(ಚಕ್ರ)ಯನ್ನು ಅಪಹರಿಸಿ ವಿಷ್ಣುವಿನ ಕೈಗಿಟ್ಟಿದ್ದಾರೆ. ತಿಗರಿ ಕುಂಬಾರ ಜನಾಂಗದ ಶಕ್ತಿ. ನಾಗರಿಕತೆಯ ಉತ್ಖನನಕ್ಕೆ ಕುಂಬಾರ ತಯಾರಿಸಿದ ಬೋಕಿಗಳೇ ಆಧಾರ. ಅಂತಹ ತಿಗರಿಯನ್ನು ಅಪಹರಿಸಿರುವುದರ ಮರ್ಮವೇನು?” -ಕುಂ.ವೀರಭದ್ರಪ್ಪ.