ಕುಂಬಾರರಿಗೆ ಹಾಗೂ ಕುಂಬಾರಿಕೆಗೆ ಅಂತ ಸರಕಾರ ಕೊಟ್ಟ ಕುಂಭಕಲಾ ನಿಗಮ ಸ್ವತಂತ್ರವಾಗದೆ ದೇವರಾಜ ಅರಸು ನಿಗಮದಲ್ಲಿ ಸಿಕ್ಕಿಕೊಂಡು ತ್ರಿಶಂಕು ಸ್ಥಿತಿಯಲ್ಲಿದೆ. ಕುಂಭಕಲಾ ನಿಗಮ ಸ್ವತಂತ್ರವಾದಲ್ಲಿ ಕುಂಬಾರ ಜನಾಂಗದವರೊಬ್ಬರು ಅದಕ್ಕೆ ಅಧ್ಯಕ್ಷನಾಗಿ ಕುಂಬಾರ ಜನಾಂಗದ ಪ್ರತಿನಿಧಿಯಾಗಿ ಸರಕಾರದಲ್ಲಿ ಧ್ವನಿಎತ್ತುವ ಅವಕಾಶವಿತ್ತು. ಆದರೆ ಅದಿನ್ನು ಕಾರ್ಯಗತವಾಗಿಲ್ಲ. ಲಕ್ಷ್ಮೀಸಾಗರ್ ಎಂಬ ರಾಜಕೀಯ ಮುತ್ಸದ್ಧಿ ದಿ. ರಾಮಕೃಷ್ಣ ಹೆಗ್ಡೆಯವರ ಕೃಪಾಕಟಾಕ್ಷದಿಂದ ಕಾನೂನು ಸಚಿವರಾಗಿದ್ದರೂ ಸಹಾ, ಅವರು ಕುಂಬಾರ-ಕುಲಾಲ ಜಾತಿಯನ್ನು ರಾಜಕೀಯವಾಗಿ ಬೆಳೆಸದೆ, ತನ್ನ ವ್ಯಕ್ತಿಗತ ಶಕ್ತಿ ಹಾಗೂ ವಿದ್ವತ್ನಿಂದ ಮಿಂಚಿ ಮರೆಯಾದವರು. ಸೂಕ್ತ ಕಾಲದಲ್ಲಿ ಕುಂಬಾರರಿಗೆ ಎಂ.ಎಲ್.ಎ. ಹಾಗೂ ಎಂ.ಎಲ್.ಸಿ. ಕೊಡಿ ಎಂಬ ಕೂಗು ರಾಜ್ಯವ್ಯಾಪಿಯಾಗಿ ಮೂಡಿಬರದೆ ಇದ್ದುದರಿಂದ ಕರಾವಳಿಯ ಸಮಾಜಸೇವಕ, ಜನತಾದಳದ ಧುರೀಣರಾಗಿದ್ದ ಅಮ್ಮೆಂಬಳ ಬಾಳಪ್ಪನವರ ಹೆಸರು ಎಂಎಲ್ಸಿಗೆ ಪ್ರಸ್ತಾಪವಾದರೂ ವಿಧಾನಸಭೆಯ ಪಡಸಾಲೆಯಲ್ಲಿ ಬಿದ್ದುಹೋಯ್ತು. ಬಾಳಪ್ಪನವರ ಕೃಪಾಕಟಾಕ್ಷ, ಆಶೀರ್ವಾದ ಪಡೆದ ಹತ್ತಾರು ಮರಿ ರಾಜಕಾರಣಿಗಳು ಇಂದು ಸಚಿವರಾಗಿ, ಶಾಸಕ, ಎಂ.ಎಲ್.ಸಿ. ಆಗಿ ಕಾರು ಬಾರು ಮಾಡುತ್ತಿದ್ದಾರೆ. ಬಾಳಪ್ಪನವರಿಂದ ರಾಜಕೀಯ – ಸಂಘಟ ನಾತ್ಮಕ ಪುನಶ್ಚೇತನ ಪಡೆದ ಜಾರ್ಜ್ ಫೆರ್ನಾಂಡೀಸರು ರಾಷ್ಟ್ರವನ್ನೇ ಆಳಿದರು. ಆದರೆ ಬಾಳಪ್ಪನವರು ಬಂಟ್ವಾಳದ ಸಜಿಪದ ಮನೆಯಲ್ಲಿ ಮರೆಗುಳಿತನದಿಂದ ನರಳುತ್ತಿದ್ದಾರೆ. ಅಲ್ಲಿಗೆ ಹಿರಿಯ ತಲೆಮಾರಿನ ಹೋರಾಟ ಮುಗಿಯಿತು. ಮಂಗಳೂರಿನ ಚರಿತ್ರೆಯಲ್ಲೇ ಕುಂಬಾರ-ಕುಲಾಲ ಸಮಾಜದ ಮಹಿಳೆ ಶ್ರೀಮತಿ ರೂಪಾ ಡಿ. ಬಂಗೇರರವರು ಮೇಯರ್ ಅಗುವುದು ಕೊನೆಯ ಗಳಿಗೆಯಲ್ಲಿ ತಪ್ಪಿಹೋಯ್ತು. ನಿಗಮ ಮಂಡಳಿಗೆ, ಸೆನೆಟ್-ಸಿಂಡಿಕೇಟ್ಗಳಿಗೆ ಆಯ್ಕೆ ಮಾಡುವಾಗ ಕುಂಬಾರ-ಕುಲಾಲ ಎಂಬ ಜನಾಂಗ ಇದೆ ಎಂಬು ದನ್ನೇ ಇಲ್ಲಿಯವರೆಗೆ ಕುಲಾಲ-ಕುಂಬಾರ ಜನಾಂಗದ ಓಟು ಪಡೆದ ಸರಕಾರಗಳು ರಾಜಕಾರಣಿಗಳು ಮರೆತುಬಿಟ್ಟಿದ್ದಾರೆ. ಇದನ್ನೆಲ್ಲಾ ನೋಡು ವಾಗ ಸತ್ಯಸಂಧರು, ನಿಷ್ಠರು, ಭಕ್ತ ಕುಂಬಾರನ ವಂಶಜರು, ಸರ್ವಜ್ಞನಷ್ಟು ತೀಕ್ಷಣಮತಿಗಳು ಎಂಬೆಲ್ಲಾ ಅನ್ವರ್ಧಕನಾಮ ಪಡೆದಿರುವ ಈ ಜನಾಂಗದವ ರನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ಕರ್ನಾಟಕದ ರಾಜಕೀಯದಲ್ಲಿ ಆಗುತ್ತಿರುವುದು ನಿಜಕ್ಕೂ ಶೋಚನೀಯ. ರಾಷ್ಟ್ರಮಟ್ಟದಲ್ಲಿ ಕುಂಬಾರ-ಕುಲಾಲರನ್ನ ಪ್ರಜಾಪತಿ, ಕುಂಭಕಾರ್, ಕುಶವನ್ ಎಂದೆಲ್ಲಾ ಹತ್ತು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ದೇಶದ ಪ್ರತಿರಾಜ್ಯದ, ಪ್ರತಿಜಿಲ್ಲೆ, ತಾಲೂಕಿನ, ಪ್ರತೀ ಗ್ರಾಮಗಳಲ್ಲಿ ಕನಿಷ್ಠ ಹತ್ತರಿಂದ ಗರಿಷ್ಠ ಸಾವಿರದವರೆಗೆ ಕುಂಬಾರ ಜನಾಂಗದವರಿದ್ದಾರೆ. ಈ ರೀತಿ ಯಾವುದೇ ಜಾತಿಯವರು ಸಾಮಾಜದಲ್ಲಿ ಇಷ್ಟೊಂದು ಗಾಢವಾಗಿ ಬೆರೆತು ಹೋಗಿಲ್ಲ. ರಾಷ್ಟ್ರದ ಸುಮಾರು ೯೦ ಸಾವಿರ ಗ್ರಾಮಗಳಲ್ಲಿ ಸುಮಾರು ೧೦ ರಿಂದ ೧೫ ಕೋಟಿ ಕುಂಬಾರರು, ಹರಿದು ಹಂಚಿ ಹೋಗಿದ್ದಾರೆ. ಆದರೆ ಅವರೆಲ್ಲಾ ಸಂಘಟಿತ ರಾಗಿಲ್ಲ. ಈಗ ಪ್ರಜಾಪತಿ ಕುಂಭಕಾರ್ ಸಂಘ (ರಿ) ನವದೆಹಲಿ ರಾಷ್ಟ್ರಮಟ್ಟದಲ್ಲಿ ಕುಂಬಾರರನ್ನು ಒಟ್ಟುಗೂಡಿಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಹರಿದುಹಂಚಿ ಹೋಗಿರುವ ಅಸಂಘಟಿತ ಕುಂಬಾರ ರನ್ನೆಲ್ಲಾ ಸಂಘಟಿಸಿದಲ್ಲಿ ಅವರೆಲ್ಲಾ ಒಂದೇ ಸೂರಿನಡಿ ಬಂದಲ್ಲಿ ಕುಂಬಾರ ರಿಲ್ಲದೆ ರಾಜಕಾರಣವೇ ಇಲ್ಲ ಎಂಬ ಹಂತಕ್ಕೆ ಬರಬಹುದು. ಆದರೆ ಅದಕ್ಕೆ ಉತ್ತರಭಾರತದಲ್ಲಿ ಕುಂಬಾರರು ಸಂಘಟಿತರಾದಂತೆ ದಕ್ಷಿಣ ಭಾರತ ದಲ್ಲಿ ಆಗಬೇಕಾಗಿದೆ. ಆ ದಿಶೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕುಲಾಲ-ಕುಂಬಾರರ ಪ್ರಯತ್ನ ಸಾಗಿದೆ. ಕರಾವಳಿಯಲ್ಲಿ ಸರಿಸುಮಾರು ೩ ಲಕ್ಷ, ರಾಜ್ಯದಲ್ಲಿ ಸುಮಾರು ೧೬ ಲಕ್ಷದ ಷ್ಟಿರುವ ಕುಲಾಲ, ಕುಂಬಾರ, ಗುನಗ, ಮೂಲ್ಯ, ಹಾಂಡ, ಕುಂಬಾರ ಸೆಟ್ಟಿ, ಲಿಂಗಾಯಿತ ಕುಂಬಾರ, ತೆಲುಗು ಕುಂಬಾರ ಸಮಾಜದವರಿಗೆ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿದೆ. ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬಿದ್ದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕರಾವಳಿಯಲ್ಲಿ ಬಂಟ್ ಹಾಗೂ ಬಿಲ್ಲವರನ್ನು ಬಿಟ್ಟರೆ ನಂತರದ ಅತೀ ದೊಡ್ಡ ಜಾತಿ ಆಧಾರಿತ ಮತದಾರ ಶಕ್ತಿ ಹೊಂದಿರುವ ಕುಂಬಾರರದ್ದು. ಆದರೆ ವಿಪರ್ಯಾಸ ಎಂದರೆ ಚುನಾವಣೆ ಬಂದಾಗ ಎಲ್ಲಾ ರಾಜಕಾರಣಿ ಗಳೂ ಪತ್ರಿಕಾ ಮಾದ್ಯಮದವರು ಬಂಟರು ಇಷ್ಟಿದ್ದಾರೆ, ಬಿಲ್ಲವರು ಅಷ್ಟಿದ್ದಾರೆ. ಅಂತ ಬರೆಯುತ್ತಾರೆ. ಆದರೆ ಕುಲಾಲ-ಕುಂಬಾರರು ಇಷ್ಟಿದ್ದಾರೆ ಎಂದು ಬರೆಯದೆ ಇರುವುದರಿಂದ ಕುಂಬಾರರ ಜಾತಿ ನಗಣ್ಯವಾಗಿಯೇ ಉಳಿದಿದೆ. ಕರಾವಳಿಯ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ೫ ಸಾವಿರದಿಂದ ಗರಿಷ್ಠ ೪೦ ಸಾವಿರದವರೆಗೆ ಕುಲಾಲರ ಮತ ಇದೆ ಎಂಬುದು ನಗ್ನ ಸತ್ಯ. ಬಂಟ್ವಾಳ, ಸುರತ್ಕಲ್, ಉಳ್ಳಾಲ, ಬೆಳ್ತಂಗಡಿ, ಪುತ್ತೂರು, ಕಾರ್ಕಳ, ಉಡುಪಿ, ಕುಂದಾಪುರಗಳಲ್ಲಿ ಕುಲಾಲರ ಓಟುಗಳು ನಿರ್ಣಾಯಕವಾಗಿವೆ. ಒಬ್ಬ ಶಾಸಕನ ಸೋಲು-ಗೆಲುವಿಗೆ ನಾಂದಿ ಹಾಡಲು ಶಕ್ತರಿದ್ದಾರೆ. ಆದರೆ ಇಲ್ಲಿಯವರೆಗೆ ಕುಂಬಾರರನ್ನು ಕಡೆಗಣಿಸಿದ್ದು, ತಾಳ್ಮೆಯ ಸಾಕಾರ ಮೂರ್ತಿ ಗಳಾದ ಕುಂಬಾರರು ಸಹಿಸಿಕೊಂಡಿದ್ದರೂ ಸಹಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಮೇಲೇಳುತ್ತಿರುವ ಕುಲಾಲರು ರಾಜಕೀಯವಾಗಿ ತಲೆ ಕೊಡವಿಕೊಂಡು ಮೇಲೇಳುತ್ತಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕುಲಾಲ ೪೦ ಕ್ಕೂ ಮಿಕ್ಕಿದ ಕುಂಬಾರರ ಸಂಘಟನೆಗಳಿವೆ. ರಾಜ್ಯ ಕುಂಬಾರರ ಮಹಾಸಂಘದ ಆಶ್ರಯದಲ್ಲಿ ಪ್ರತೀ ವಿಧಾನಸಭಾ ವ್ಯಾಪ್ತಿಯಲ್ಲಿ ಕುಲಾಲ-ಕುಂಬಾರ ಯುವವೇದಿಕೆ ಕಾರ್ಯತತ್ಪರವಾಗಿದೆ. ೧೦ಕ್ಕೂ ಮಿಕ್ಕಿ ಕುಲಾಲ ಭವನ-ಮಂದಿರಗಳಿವೆ. ಮಾಣಿಲ ಶ್ರೀಕ್ಷೇತ್ರವನ್ನು ಸೇರಿಸಿ ಸುಮಾರು ಅರ್ಧ ಡಜನ್ನಷ್ಟು ದೇವಾಲಯಗಳು ಕುಲಾಲ ಸಮಾಜದ ಹಿಡಿತದಲ್ಲಿವೆ. ಕೋಟಿಗಟ್ಟಲೆ ಆದಾಯ ತರುವ ಬಂಟ್ವಾಳದ ಪಣೋಲಿಬೈಲು ಕಲ್ಲುರ್ಟಿ ದೇವಸ್ತಾನ ಕುಲಾಲರ ಪುರೋಹಿತ್ಯದಲ್ಲಿರುವ ಅತೀ ದೊಡ್ಡ ಸಂಸ್ಥೆ. ಬಂಟ್ವಾಳ, ಪುತ್ತೂರು, ಪೆರ್ಡೂರುಗಳನ್ನು ಸೇರಿಸಿ ೧೫ಕ್ಕೂ ಹೆಚ್ಚು ಕುಂಬಾರರ ಗುಡಿ ಕೈಗಾರಿಕಾ ಬ್ಯಾಂಕ್ಗಳು ಸಹಕಾರಿ ಸಂಸ್ಥೆಗಳು ಸಮಾಜ ಸೇವೆಯಲ್ಲಿ ತೊಡಗಿವೆ. ಸಾಕಷ್ಟು ವೈದ್ಯರುಗಳು, ಆಸ್ಪತ್ರೆಗಳು ಕ್ಲಿನಿಕ್ಗಳು, ನ್ಯಾಯಾ ದೀಶರುಗಳು, ನ್ಯಾಯವಾದಿಗಳು, ಇಂಜಿನಿಯರ್ಗಳು, ವಿವಿಧ ಅಧಿಕಾರಿಗಳು, ನಾಗರಿಕ ಹೋರಾಟಗಾರರು, ಸಾಹಿತಿಗಳು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆಲ್ಲಕ್ಕಿಂತ ಮಿಗಿಲಾಗಿ, ಕಮ್ಯುನಿಸ್ಟ್, ಕಾಂಗ್ರೆಸ್, ಬಿಜೆಪಿ, ಜನತಾದಳ, ಭಾರತ ಸೇವಾದಲ, ಆರ್.ಎಸ್.ಎಸ್. ವಿಶ್ವ ಹಿಂದೂ ಪರಿಷತ್, ಡಿವೈಎಫ್ಐ, ಮುಂತಾದ ಸಂಘಟನೆಗಳಲ್ಲಿ, ರಾಮಸೇನೆ, ಭಜರಂಗದಳ ಮುಂತಾದ ಹಿಂದೂ ಸಂಘಟನೆಗಳಲ್ಲಿ ಇಂದಿಗೂ ತತ್ವನಿಷ್ಠರಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರಲ್ಲಿ ಕುಲಾಲ-ಕುಂಬಾರ ಯುವಕರು ಅತ್ಯಧಿಕ ಸಂಖ್ಯೆಯಲ್ಲಿ ದ್ದಾರೆ. ಆದರೆ ಇಂತಹ ಸಮಾಜದಿಂದ ಬಂದ ಯುವಕ-ಯುವತಿಯರಿಗೆ ಒಂದು ಹಂತದಿಂದ ಮೇಲೇಕ್ಕೆ ಬೆಳೆಯಲು ಬಿಡುತ್ತಿಲ್ಲ, ಇಲ್ಲವೇ ಅವರನ್ನ ಮೇಲಕ್ಕೆ ಎತ್ತಿ ತರುವ ಪ್ರಯತ್ನಗಳು ಆಗುತ್ತಿಲ್ಲ. ಆದರೆ ರಾಜಕೀಯ ಪಾರ್ಟಿ, ಪಕ್ಷ ಹೋರಾಟಗಳಿಗಾಗಿ ಕುಲಾಲರು ಸಾಕಷ್ಟು ಸಾವು-ನೋವು ಕಂಡಿದ್ದಾರೆ. ದೈಹಿಕ, ಆರ್ಥಿಕ ಹೋರಾಟ ಮಾಡಿದ್ದಾರೆ. ಅಗತ್ಯಕಂಡಲ್ಲಿ ನೆತ್ತರು ಹರಿಸಿದ್ದಾರೆ. ಇಷ್ಟೆಲ್ಲಾ ಕೆಲಸಗಳು ರಾಜಕೀಯ ದುರೀಣರಿಗೆ ಕಾಣುತ್ತಿಲ್ಲ. ಇದನ್ನು ಮನಗಂಡು ರಾಜ್ಯ ಕುಂಬಾರ ಸಂಘ, ಕುಂಬಾರರಿಗೆ ರಾಜಕೀಯ ಶಕ್ತಿ ಇಲ್ಲದೆ ಬದುಕಿಲ್ಲ ಎಂಬ ತತ್ವಕ್ಕೆ ಅಂಟಿಕೊಂಡು ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಕುಲಾಲ-ಕುಂಬಾರ ಯುವ ವೇದಿಕೆಯ ಆಶ್ರಯದಲ್ಲಿ ಕನಿಷ್ಠ ೫ ಜನ ಯುವ ನಾಯ ಕರನ್ನು ಬೆಳೆಸುವ ಪಣತೊಟ್ಟಿದೆ. ಬೇಕಾದಾಗ ಉಪಯೋಗಿಸಿ ಬೇಡವಾದಾಗ ಎಸೆದುಬಿಡುವ ಪ್ರವೃತ್ತಿಯ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಕುಲಾಲ-ಕುಂಬಾರ ಸಮಾಜಕ್ಕಾದ ಸಾಮಾಜಿಕ ಅನ್ಯಾಯದ ವಿರುದ್ಧ, ರಾಜಕೀಯ ತುಚ್ಛೀಕರಣದ ವಿರುದ್ಧ ಹೋರಾಟ ಗರಿಗೆದರಿದೆ. ಸಾಮಾಜಿಕ ನ್ಯಾಯ, ಜಾತಿ ರಾಜಕಾರಣ, ಎಂದೆಲ್ಲಾ ಸಾಗುವ ಇಂದಿನ ರಾಜಕೀಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಲು ಹೋರಾಡುವ ಕುಲಾಲ-ಕುಂಬಾರ ಸಮಾಜಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಧ್ವನಿ ಸೇರಿಸಬೇಕಾಗಿದೆ. ಹಸಿ ತಿನ್ನುತ್ತಿದ್ದ ಮಾನವ ಕುಲಕ್ಕೂ, ಬೇಯಿಸಿ ತಿನ್ನುಲು ಮಡಿಕೆ ಕೊಟ್ಟ ಕುಂಬಾರ-ಕುಲಾಲ ಜನಾಂಗಕ್ಕೂ ರಾಜಕೀಯ ಮರುಹುಟ್ಟು ನೀಡಬೇಕಾಗಿದೆ.
ಡಾ| ಎಂ. ಅಣ್ಣಯ್ಯ ಕುಲಾಲ್, ಉಳ್ತೂರು


